ಉಡುಪಿ: ಮಳೆ ಕೊರತೆ ಹಿನ್ನೆಲೆಯಲ್ಲಿ ಅಪರೂಪದ ಕಪ್ಪೆ ಮದುವೆಗೆ ನಗರ ಸಾಕ್ಷಿಯಾಯಿತು. ಜಿಲ್ಲಾ ನಾಗರಿಕ ಸಮಿತಿ ಹಾಗೂ ಪಂಚರತ್ನ ಸೇವಾ ಟ್ರಸ್ಟ್ ವತಿಯಿಂದ ಮಳೆಗೆ ಪ್ರಾರ್ಥಿಸಿ ಶನಿವಾರ ಕಿದಿಯೂರು ಹೋಟೆಲ್ ವಾಹನ ನಿಲುಗಡೆ ಪ್ರದೇಶದಲ್ಲಿ ಕೊಳಲಗಿರಿ ಸಮೀಪದ ಕೀಳಿಂಜೆ ನಿವಾಸಿ “ವರ್ಷ’ ಹೆಸರಿನ ಹೆಣ್ಣು ಕಪ್ಪೆಗೆ ಕಲ್ಸಂಕ ನಿವಾಸಿ “ವರುಣ’ ಹೆಸರಿನ ಗಂಡು ಕಪ್ಪೆಯೊಂದಿಗೆ ಮದುವೆ ಮಾಡಿಸ ಲಾಯಿತು. ಸಿಂಗರಿಸಿದ ತ್ರಿಚಕ್ರ ಸೈಕಲ್‌ನಲ್ಲಿ ಪಂಜರ ಇರಿಸಲಾಗಿದ್ದು ನಾಸಿಕ್ ಬ್ಯಾಂಡ್‌ನೊಂದಿಗೆ ಹಳೆ ಡಯಾನ ವೃತ್ತ, ಕವಿ ಮುದ್ದಣ ಮಾರ್ಗವಾಗಿ ಕಿದಿಯೂರು ಹೊಟೇಲ್ ವರೆಗೆ ದಿಬ್ಬಣ ಸಾಗಿ ಬಂತು. ನಾಗರಿಕ ಸಮಿತಿ ಪ್ರ. ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಗಂಡು ಕಪ್ಪೆ ಹಾಗೂ ರಾಜು ಪೂಜಾರಿ ಹೆಣ್ಣು ಕಪ್ಪೆ ಹಿಡಿದು ವಿವಾಹ ಸಂಪ್ರದಾಯ ನೆರವೇರಿಸಿದರು. ಹೆಣ್ಣು ಕಪ್ಪೆ ವರ್ಷಗೆ ಕರಿಮಣಿ, ಕಾಲುಂಗುರ ತೊಡಿಸಿ ಆರತಿ ಮಾಡಲಾಯಿತು. ಜನಾರ್ದನ್ ಶೇರಿಗಾರ್ ಅವರ ತಂಡದಿಂದ ಸ್ಯಾಕ್ಸೋಫೋನ್ ವಾದನ ಏರ್ಪಡಿಸಲಾಗಿತ್ತು. ಜಿಲ್ಲಾ ಭಜನಾ ಮಂಡಳಿಯ ಮಹಿಳೆಯರು ಮದುವೆ ಸಮಾರಂಭದಲ್ಲಿ ಭಾಗವಹಿಸಿದರು.
ಮದುವೆಗೆ ಆಗಮಿಸಿದವರಿಗೆ ಉಪಾಹಾರದ ವ್ಯವಸ್ಥೆಯೂ ಇತ್ತು. ವಿವಾಹ ಮುಗಿದ ಬಳಿಕ ವಧೂ-ವರರನ್ನು (ಕಪ್ಪೆಗಳನ್ನು) ಮಣಿಪಾಲದ ಮಣ್ಣಪಳ್ಳದ ಕೆರೆಯಲ್ಲಿ ಬಿಡಲಾಯಿತು. ತಾರಾನಾಥ ಮೇಸ್ತ, ಸಂತೋಷ್ ಸರಳಬೆಟ್ಟು, ಪಲ್ಲವಿ ಸಂತೋಷ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಧೂ-ವರರಿಗೆ ಲಿಂಗ ಪರೀಕ್ಷೆ
ನಾಗರಿಕ ಸಮಿತಿ ಸದಸ್ಯರು ಒಟ್ಟು ನಾಲ್ಕು ಕಪ್ಪೆಗಳನ್ನು ಪತ್ತೆ ಹಚ್ಚಿ ತಂದು, ಮಣಿಪಾಲದ ಜೀವಶಾಸ್ತ್ರ ತಜ್ಞರಿಂದ ಕಪ್ಪೆಗಳ ಲಿಂಗ ಪರೀಕ್ಷಿಸಿ ವಧೂ ವರರನ್ನು ಆಯ್ಕೆ ಮಾಡಲಾಗಿದೆ. ನೀರಿಗಾಗಿ ಎಲ್ಲ ಕಡೆ ಹಾಹಾಕಾರ ಉಂಟಾಗಿದೆ. ಶೀಘ್ರ ಮಳೆಯ ಆಗಮನ ಆಗಲಿ ಎಂದು ಪ್ರಾರ್ಥಿಸಿ ಕಪ್ಪೆಗಳಿಗೆ ವಿವಾಹ ಮಾಡಿದ್ದೇವೆ.
-ನಿತ್ಯಾನಂದ ಒಳಕಾಡು, ಸಮಿತಿಯ ಪ್ರ. ಕಾರ್ಯದರ್ಶಿ