Advertisement

ಮಳೆ ಕೊರತೆ: ಪರ್ಯಾಯ ಕ್ರಮಕ್ಕೆ ಸರಕಾರ ಮುಂದಾಗಲಿ

12:13 AM Jul 17, 2023 | Team Udayavani |

ರಾಜ್ಯದಲ್ಲಿ ವರುಣನ ಕಣ್ಣಾಮುಚ್ಚಾಲೆ ಹಾಲಿ ತಿಂಗಳಲ್ಲೂ ಮುಂದುವರಿದಿದೆ. ಮುಂಗಾರು ಆರಂಭಗೊಂಡು ಎರಡನೇ ತಿಂಗಳು ಕೂಡ ಕೆಲವು ಜಿಲ್ಲೆಗಳಲ್ಲಿ ಮಳೆ ಕೊರತೆ ಕಾಡುತ್ತಿದೆ. ಇದರಿಂದ ಬಿತ್ತನೆ ವಿಳಂಬ ಆಗುತ್ತಿರುವುದರ ಜತೆಗೆ ಬಿತ್ತನೆಯಾದ ಬೀಜಗಳು ಕೂಡ ಮೊಳಕೆ ಯೊಡೆಯುತ್ತಿಲ್ಲ. ಇದೇ ಸ್ಥಿತಿ ಮುಂದುವರಿದರೆ ಆಹಾರ ಧಾನ್ಯಗಳ ಉತ್ಪಾದನೆ ಮೇಲೆ ಪರಿಣಾಮ ಬೀರುವ ಆತಂಕ ಉಂಟಾಗುತ್ತಿದೆ.

Advertisement

ಹವಾಮಾನ ತಜ್ಞರ ಮುನ್ಸೂಚನೆಯಂತೆ ಹಾಲಿ ತಿಂಗಳಲ್ಲೂ ಮಳೆಯೇನೋ ಆಗುತ್ತಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿದೆಯೇ ಎಂಬ ಪ್ರಶ್ನೆಗೆ “ಇಲ್ಲ’ ಎಂಬ ಉತ್ತರ ಬರುತ್ತದೆ. ರಾಜ್ಯದಲ್ಲಿ ಜೂನ್‌ 1ರಿಂದ ಈವರೆಗೆ ಶೇ. 34ರಷ್ಟು ಮಳೆ ಕೊರತೆ ಇದೆ. 21 ಜಿಲ್ಲೆಗಳಲ್ಲಿ ಕನಿಷ್ಠ 24ರಿಂದ ಗರಿಷ್ಠ 62ರಷ್ಟು ಮಳೆ ಖೋತಾ ಆಗಿರುವುದನ್ನು ಕಾಣಬಹುದು. ಹದಿನೈದು ದಿನಗಳಲ್ಲಿ ಉತ್ತಮ ಮಳೆ ಸುರಿದಿದ್ದರೂ 16 ಜಿಲ್ಲೆಗಳಿಗೆ ಇನ್ನೂ ವರುಣನ ಕೃಪೆ ಆಗಿಲ್ಲ. ಹೀಗಾಗಿ ರಾಜ್ಯ ಸರಕಾರ ಸೂಕ್ತ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಲು ಯೋಚಿಸುವುದು ಅಗತ್ಯವಾಗಿದೆ.

ಹಾಗಂತ ಮಳೆಯೊಂದೇ ಬರ ಘೋಷಣೆಗೆ ಕಾರಣವಾಗುವುದಿಲ್ಲ. ವಾತಾವರಣ, ಬಿತ್ತನೆ, ಎಷ್ಟು ವಾರಗಳು ಸತತ ಮಳೆಯಾಗಿಲ್ಲ ಎನ್ನುವುದು ಸೇರಿದಂತೆ ಹಲವು ಅಂಶಗಳು ಇದನ್ನು ನಿರ್ಧರಿಸುತ್ತವೆ. ಅದೇನೇ ಇರಲಿ ರಾಜ್ಯದ ಮಟ್ಟಿಗೆ ಹೇಳುವುದಾದರೆ, ಹಾಲಿ ತಿಂಗಳ ಮಳೆ ಕೃಷಿ ಚಟು ವಟಿಕೆಗಳ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಅವಧಿಯಲ್ಲಿ ಮುಂ ಗಾರು ಮಾರುತಗಳು ಹೆಚ್ಚು ಮಳೆ ಸುರಿಸುತ್ತವೆ. ಜೂ.15ರ ವರೆಗೆ ಬಿತ್ತನೆ ಕಾರ್ಯ ಮುಗಿಯುತ್ತದೆ ಅಂದುಕೊಂಡರೂ ಅನಂತರದಲ್ಲಿ ಮೊಳಕೆ ಯೊಡೆಯಲು, ಕಾಯಿಕಟ್ಟಲು ಇದು ಸರಿಯಾದ ಸಮಯ. ಈ ಅವಧಿಯಲ್ಲಿ ಸುರಿಯುವ ಮಳೆ ಆಧರಿಸಿಯೇ ಪರ್ಯಾಯ ಅಥವಾ ಅಲ್ಪಾವಧಿ ಬೆಳೆಗಳ ಕಡೆಗೆ ಮುಖಮಾಡುವುದು, ಉತ್ಪಾದನೆ ಗುರಿ ಪರಿಷ್ಕರಣೆ ಮತ್ತಿತರ ಯೋಜನೆಗಳನ್ನು ರೂಪಿಸಲಾಗುತ್ತದೆ.

ಪ್ರಸ್ತುತ ಉತ್ತಮ ಮಳೆ ಆಗುತ್ತಿರಬಹುದು. ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಜಲಾಶಯಗಳ ಮಟ್ಟ ಕೂಡ ಕಡಿಮೆಯೇ ಇದೆ. 16 ಜಿಲ್ಲೆಗಳಲ್ಲಿ ಇನ್ನೂ ಮಳೆ ಕೊರತೆ ಕಾಡುತ್ತಿದೆ. ಈಗಾಗಲೇ ಹೆಸರು, ಉದ್ದು ಬಿತ್ತನೆ ಅವಧಿ ಮುಗಿದಿದೆ. ಹಾಲಿ ತಿಂಗಳ ಮೊದಲ ವಾರದಲ್ಲಿ ಬರ ಘೋಷಣೆ ಬಗ್ಗೆ ತೀರ್ಮಾನವಾಗಬೇಕಿತ್ತು. ಅಷ್ಟರಲ್ಲಿ ವರುಣನ “ಶುಭ ಸೂಚನೆ’ ದೊರೆಯಿತು. ಆದರೆ ಅದರ ವ್ಯಾಪಕತೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಈ ಸ್ಥಿತಿಯು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳೇ ಹೆಚ್ಚು ಎಂದು ಹೇಳಬೇಕಾಗುತ್ತದೆ. ಯಾಕೆಂದರೆ ಮಳೆ ಸಂಪೂರ್ಣವಾಗಿ ಕೈಕೊಟ್ಟರೆ, ಮಾನದಂಡಗಳ ಪ್ರಕಾರ ಬರ ಘೋಷಣೆಯಾಗುತ್ತದೆ.

ಅಲ್ಪಸ್ವಲ್ಪ ಮಳೆಯು ಬೆಳೆಗೂ ಅನುಕೂಲ ಆಗುವುದಿಲ್ಲ. ಈಗಾಗಲೇ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ಸರಕಾರ ಪ್ರಸಕ್ತ ಸಾಲಿಗೆ 38 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ. ಒಂದು ವೇಳೆ ಮಳೆ ಕೈಕೊಟ್ಟರೆ ಕೃಷಿ ಚಟುವಟಿಕೆಗಳ ಮೇಲೆ ಅದು ಪರಿಣಾಮ ಬೀರಲಿದ್ದು, ಅದು ಮತ್ತಷ್ಟು ಆರ್ಥಿಕ ಹೊರೆಗೆ ಕಾರಣವಾಗುವ ಸಾಧ್ಯತೆ ಯನ್ನೂ ಅಲ್ಲಗಳೆಯುವಂತಿಲ್ಲ. ವರುಣನ ಅವಕೃಪೆಗೆ ಗುರಿಯಾಗಿರುವ ಪ್ರದೇಶಗಳಲ್ಲಿ ಇದೇ ಸ್ಥಿತಿ ಮುಂದುವರಿದರೆ, ಪರ್ಯಾಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಂತೂ ಇದರ ಮುನ್ಸೂಚನೆ ನೀಡುತ್ತಿದೆ. ಸರಕಾರ ಈಗಿನಿಂದಲೇ ಮಾನಸಿಕವಾಗಿ ಸಿದ್ಧಗೊಂಡು ಪರ್ಯಾಯ ಕ್ರಮಗಳತ್ತ ಮುಂದಾಗಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next