Advertisement
ಪೂರ್ವ ಮುಂಗಾರು ಕೈಕೊಟ್ಟು, ಮುಂಗಾರು ತಡವಾದರೂ ಕಳೆದ ಜುಲೈ ತಿಂಗಳ ಮಧ್ಯದಲ್ಲಿ ಆಗಮಿಸಿ 15 ದಿನ ತಾಲೂಕಿನಾದ್ಯಂತ ಎಡಬಿಡದೆ ಮಳೆ ಸುರಿದಿತ್ತು. ಆಗ, ಭಿತ್ತಿದ್ದ ಬೆಳೆ ಜೀವಕಳೆ ಪಡೆದು ರೈತರು ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ, ಆಗಸ್ಟ್ ನಲ್ಲಿ ಮುಂಗಾರು ಮತ್ತೆ ಕಣ್ಮರೆಯಾಗಿದೆ.
Related Articles
Advertisement
4 ಜಲಾಶಯ, ಅರೆ ಮಲೆನಾಡು ಖ್ಯಾತಿ: ತಾಲೂಕು ಅರೆ ಮಲೆನಾಡು ಖ್ಯಾತಿ ಹೊಂದಿದೆ. ಹೀಗಾಗಿ ತಾಲೂಕಿನಲ್ಲಿ 4 ಜಲಾಶಯಗಳಿದ್ದರೂ ತಾಲೂಕಿನ ಭಾಗಶಃ ರೈತರು ಮಳೆಯಾಶ್ರಿತ ಬೆಳೆಗಳ ಕೃಷಿ ಚಟುವಟಿಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ಬಾರಿ ತಾಲೂಕಿನ ಪ್ರಮುಖ ಬೆಳೆ ಹತ್ತಿ, ತಂಬಾಕು ಬೆಳೆ ಬಿತ್ತನೆ ಕಡಿಮೆ ಮಾಡಿ ಮುಸುಕಿನ ಜೋಳ, ಶುಂಠಿ, ರಾಗಿ, ದ್ವೀದಳ ಧಾನ್ಯ ಸೇರಿ ಇತರ ತರಕಾರಿ ಬೆಳೆಗೆ ಮುಂದಾಗಿದ್ದರೂ, ತಿಂಗಳಿಂದ ಮುಂಗಾರು ಮಳೆ ಕೈಕೊಡುತ್ತಿದೆ. ಇದರಿಂದಾಗಿ ಬೆಳೆಗಳು ಮಳೆ ಇಲ್ಲದೇ ಒಣಗುತ್ತಿರುವುದರಿಂದ ಬಿತ್ತನೆ ಹಾಕಿದ್ದ ಮೂಲ ಬಂಡವಾಳವೂ ಕೈತಪ್ಪುವ ಭೀತಿ ಆವರಿಸಿದೆ.
ರೈತರು ಮುಂದಿನ ದಿನಗಳಲ್ಲಿ ಬರುವ ಮಳೆಗೆ ಅನುಗುಣವಾಗಿ ಬೆಳೆ ಬಿತ್ತನೆಗೆ ಮುಂದಾಗಬೇಕಿದ್ದು, ಅಲ್ಪಾವಧಿ ಬೆಳೆಗಳಾದ ಚೀಯಾ(ಗೇಲ್), ಅಲಸಂದೆ, ಕುಂಬಳ, ಉದ್ದು, ಹೆಸರು, ಬಿತ್ತನೆಗೆ ಈಗಾಗಲೇ ತಯಾರಿ ನಡೆಸುತ್ತಿದ್ದಾರೆ. ಜತೆಗೆ ಈಗ ತಾಲೂಕಿನ ಕಬಿನಿ ಸೇರಿ ತಾರಕ, ಹೆಬ್ಬಳ ಹಾಗೂ ನುಗು ಜಲಾಶಯಗಳ ಅಚ್ಚುಕಟ್ಟು ನಾಳೆಗಳಿಗೆ ಕಟ್ಟು ನೀರು ಹರಿಸುತ್ತಿರುವುದರಿಂದ ರೈತರು ಭತ್ತ ಬೆಳೆಯಲು ಮುಂದಾಗುತ್ತಿದ್ದಾರೆ.
ಮಳೆ ಕೊರತೆ ಇರುವ ಹಳ್ಳಿಗಳ ಸಮಗ್ರ ವರದಿಯನ್ನು ಇಲ್ಲಿನ ಕೃಷಿ ಅಧಿಕಾರಿಗಳು ಬೇಗ ಸರ್ಕಾರಕ್ಕೆ ಕಳುಹಿಸಿಕೊಡುವ ಮೂಲಕ ಎಚ್.ಡಿ.ಕೋಟೆ ತಾಲೂಕು ಈ ಬಾರಿ ಬರಪೀಡಿತ ತಾಲೂಕು ಎಂದು ಘೋಷಣೆಯಾಗುವಂತೆ ಶ್ರಮಿಸಬೇಕಿದೆ.
ಬರಪೀಡಿತ ತಾಲೂಕು ವರದಿಗೆ 26 ಹಳ್ಳಿಗಳಲ್ಲಿ ಸರ್ವೆ:
ತಾಲೂಕಿನಲ್ಲಿ ಈ ಬಾರಿ ಶೇ.86 ಮಳೆ ಕೊರತೆಯಾಗಿರುವ ಹಿನ್ನಲೆ ತಾಲೂಕನ್ನು ಈ ಬಾರಿ ಬರಪೀಡಿತವೆಂದು ಘೋಷಣೆ ಮಾಡಲು ಸರ್ಕಾರಕ್ಕೆ ವರದಿ ನೀಡುವ ಸಂಬಂಧ ತಾಲೂಕಿನಲ್ಲಿ ತೀರಾ ಕನಿಷ್ಠ ಮಳೆ ಆಗಿರುವ 26 ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಸೋಮವಾರದಿಂದ ಈ ಎಲ್ಲಾ ಹಳ್ಳಿಗಳಿಗೆ ಭೇಟಿ ನೀಡಿ ಬೆಳೆ ಆ್ಯಪ್ ಮೂಲಕ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಕೊಟ್ಟ ಆದ ಮೇಲೆ ಸರ್ಕಾರ ತಾಲೂಕನ್ನು ಬರಪೀಡಿತ ತಾಲೂಕು ಮಾಡಬೇಕೋ, ಬೇಡವೋ ಎಂದು ನಿರ್ಧಾರ ಮಾಡುತ್ತೆ, ಮೈಸೂರು ಜಿಲ್ಲೆಯಲ್ಲಿ ಎಚ್.ಡಿ.ಕೋಟೆ ಮತ್ತು ಟಿ.ನರಸೀಪುರ ಬರಪೀಡಿತ ತಾಲೂಕು ಸರ್ವೇಗೆ ಆಯ್ಕೆಯಾಗಿದ್ದು, ತಾಲೂಕು ಬರಪೀಡಿತ ತಾಲೂಕು ಪಟ್ಟಿಗೆ ಸೇರ್ಪಡೆಯಾಗಲಿದೆ ಎಂದು ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಜಯರಾಮಯ್ಯ ತಿಳಿಸಿದ್ದಾರೆ.
– ಬಿ.ನಿಂಗಣ್ಣಕೋಟೆ