ಕೈಕಂಬ: ಮುತ್ತೂರು ಗ್ರಾ.ಪಂ. ವ್ಯಾಪ್ತಿ ಯಲ್ಲಿ ಚರ್ಚ್ ಬಳಿಯಿಂದ ಮಾರ್ಗದಂಗಡಿ ತನಕ ಲೋಕೋಪಯೋಗಿ ಇಲಾಖೆಯ ರಸ್ತೆ ಬದಿ ಚರಂಡಿಯೇ ಇಲ್ಲ. ಇದರಿಂದ ಮಳೆ ನೀರು ರಸ್ತೆಯಲ್ಲೇ ಹರಿದು ಮಳೆಗಾಲದಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತದೆ. ಇದು ಪ್ರತೀ ವರ್ಷದ ಮಳೆಗಾಲದ ಕತೆ. ಲೋಕೋಪಯೋಗಿ ಇಲಾಖೆಯು ಮಳೆಗಾಲ ಆರಂಭವಾಗುವುದಕ್ಕೆ ಮುನ್ನ ಸಮರ್ಪಕ ಚರಂಡಿ ಕಾಮಗಾರಿ ಕೈಗೊಂಡರೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ.
ಮುತ್ತೂರು ಗ್ರಾ.ಪಂ. ವ್ಯಾಪ್ತಿಯ ಗಂಜಿಮಠ – ತಾರೆಮಾರ್- ಮಾರ್ಗದಂಗಡಿ – ಮುತ್ತೂರು ಸೇತುವೆ ರಸ್ತೆಯಲ್ಲಿ ಕೆಲವೆಡೆ ಗುಡ್ಡ ಕುಸಿತವಾಗಿತ್ತು. ಇಲ್ಲಿ ತಡೆಗೋಡೆ ನಿರ್ಮಾಣ ಅಗತ್ಯ. ಅದಾಗದಿದ್ದರೆ ಇಲ್ಲಿರುವ ಕೆಲವು ಮನೆಗಳು ಅಪಾಯವನ್ನು ಎದುರಿಸಬಹುದು. ಇಲ್ಲಿ ರಸ್ತೆ ಬದಿ ಚರಂಡಿ ವ್ಯವಸ್ಥೆ ಕಲ್ಪಿಸದೆ ಇದ್ದರೆ ಮಳೆಗಾಲದಲ್ಲಿ ಸಮಸ್ಯೆ ಖಚಿತ. ಮುತ್ತೂರು – ತಾರೆಮಾರ್ ಲೋಕೋಪಯೋಗಿ ರಸ್ತೆಯಲ್ಲಿ ಕಳೆದ ಬಾರಿ ಮಳೆಗೆ ಗುಡ್ಡ ಕುಸಿದಿತ್ತು. ಕುಸಿದ ಮಣ್ಣು ಕೆಲವೆಡೆ ತೋಡು ಸೇರಿದೆ. ಈ ಭಾಗದಲ್ಲಿ ಆರು ಮನೆಗಳು ಅಪಾಯದ ಸ್ಥಿತಿಯಲ್ಲಿವೆ. ಮಳೆಗಾಲ ಆರಂಭವಾಗುವುದಕ್ಕೆ ಮುನ್ನ ಇಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕಾಗಿದೆ.
ಇದೇ ರೀತಿ ಮಾರ್ಗದಂಗಡಿಯಲ್ಲಿಯೂ ಲೋಕೋಪಯೋಗಿ ರಸ್ತೆ ಬದಿ ಕಳೆದ ಬಾರಿ ಗುಡ್ಡ ಕುಸಿತ ಸಂಭವಿಸಿತ್ತು. ಪಂಚಾಯತ್‌ನ ನೀರಿನ ಟ್ಯಾಂಕ್ ಸಹಿತ ಸ್ಥಳೀಯ ನಾಲ್ಕು ಮನೆಗಳು ಅಪಾಯ ಎದುರಿಸುತ್ತಿವೆ. ಇಲ್ಲಿಯೂ ತಡೆಗೋಡೆ ನಿರ್ಮಾಣದ ಆವಶ್ಯಕತೆ ಇದೆ.
ಮುತ್ತೂರು ಸೈಟ್‌ನ ದಯಾನಂದ ಆಚಾರ್ಯ ಮನೆ ಬಳಿಯ ತಡೆಗೋಡೆ ಕಳೆದ ಬಾರಿಯ ಮಳೆಗೆ ಕುಸಿದಿದ್ದು, ಮನೆಗಳು ಅಪಾಯ ಸ್ಥಿತಿಯಲ್ಲಿವೆ. ಬೊಳಿಯ ಸೈಟ್‌ನಲ್ಲಿ ಮಸೀದಿ ಬಳಿಯ ತಡೆಗೋಡೆ ಕುಸಿದಿದೆ. ತಡೆಗೋಡೆ ನಿರ್ಮಾಣ ಮಾಡದೆ ಇದ್ದರೆ ಅಪಾಯ ಇದೆ. ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವು ಕಡೆ ತೋಡಿನ ಸಮಸ್ಯೆಗಳಿವೆ. ಕುಳ ವೂರು ಗ್ರಾಮದ ಬೊಳಿಯ ವಿಶ್ವನಾಥ ಪೂಜಾರಿ ಅವರ ಮನೆಯ ಸಮೀಪದ ಮೋರಿ ಅಪಾಯದ ಸ್ಥಿತಿಯಲ್ಲಿದೆ. ಮುಂಗಾರುಪೂರ್ವ ಮಳೆ ಆರಂಭ ವಾಗುವುದಕ್ಕೆ ಮುನ್ನ ಈ ಮೋರಿ ಯನ್ನು ಸರಿಪಡಿಸಬೇಕಿದೆ. ಕುಳವೂರು ಗ್ರಾಮದ ಗುಂಡಿಮಾರ್ ಮಾರ್ಗ ಕಚ್ಚಾ ರಸ್ತೆಯಾಗಿದ್ದು, ಇದಕ್ಕೆ ಕಾಂಕ್ರೀಟ್ ಹಾಕದಿರುವ ಕಾರಣ ಮಳೆ ಬಂದಾಗ ತೋಡಿನ ನೀರು ರಸ್ತೆಯಲ್ಲಿಯೇ ನಿಂತು ಕೃತಕ ನೆರೆಗೆ ಸೃಷ್ಟಿಯಾಗುತ್ತಿದೆ. ಇಲ್ಲಿ ರಸ್ತೆ ಬದಿ ವ್ಯವಸ್ಥಿತಿ ಚರಂಡಿ ವ್ಯವಸ್ಥೆಯನ್ನು ತುರ್ತಾಗಿ ಕಲ್ಪಿಸಬೇಕಿದೆ.
ಕುಳವೂರು ಗ್ರಾಮದ ಉಗ್ರಾಯಿ ರಸ್ತೆಯೂ ಕಚ್ಚಾ ರಸ್ತೆಯೇ. ಇಲ್ಲಿ ಮಳೆ ಬಂದಾಗ ತೋಡು ಮತ್ತು ರಸ್ತೆ ಒಂದೇ ಎಂಬಂತಾಗುತ್ತದೆ.
ಕೃತಕ ನೆರೆಯಿಂದ ರಸ್ತೆ ಸಂಪರ್ಕ ಕಡಿತವಾಗುತ್ತಿದೆ. ಇದೇ ಗ್ರಾಮದ ಸಣ್ಣಿ ಕಾಯಿ ರಸ್ತೆಯಲ್ಲಿಯೂ ಇದೇ ಸಮಸ್ಯೆ. ಮಳೆ ಬಂದರೆ ಕೃತಕ ನೆರೆ ಉಂಟಾಗಿ ಸಂಪರ್ಕ ಕಡಿತವಾಗುತ್ತದೆ. ಗ್ರಾಮ ಪಂಚಾಯತ್ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು.