ಲಿಂಗಸುಗೂರು: ತಾಲೂಕಿನ ಕುಪ್ಪಿಗುಡ್ಡ ಗ್ರಾಮದಲ್ಲಿ ಬೆಟ್ಟದಷ್ಟು ಸಮಸ್ಯೆಗಳು ತಾಂಡವವಾಡುತ್ತಿದ್ದರೂ
ಅಧಿಕಾರಿಗಳ ಸ್ಪಂದನೆ ಮಾತ್ರ ಶೂನ್ಯವಾಗಿದೆ.
ಲಿಂಗಸುಗೂರು ಪಟ್ಟಣದಿಂದ ಆರು ಕಿ.ಮೀ. ಅಂತರದಲ್ಲಿರುವ ಈ ಗ್ರಾಮ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತಿದ್ದು, ಸರ್ಜಾಪುರ ಗ್ರಾಪಂ ವ್ಯಾಪ್ತಿಯಲ್ಲಿದೆ. ಗ್ರಾಮದಲ್ಲಿ 1500 ಜನಸಂಖ್ಯೆ ಇದೆ. ಗ್ರಾಮದಲ್ಲಿ ಕುಡಿಯುವ ನೀರು, ಚರಂಡಿ, ಧೋಬಿ ಘಾಟ್ ಸೇರಿದಂತೆ ಹಲವು ಸೌಲಭ್ಯಗಳ ಕೊರತೆ ಇದೆ.
ನೀರಿನ ಸಮಸ್ಯೆ: ರಾಜೀವ ಗಾಂಧಿ ಕುಡಿಯುವ ನೀರಿನ ಯೋಜನೆಯ ಏಳು ಗ್ರಾಮಗಳ ಪೈಕಿ ಈ ಗ್ರಾಮವನ್ನು ಸೇರಿಸಲಾಗಿದೆ. ಇದಲ್ಲದೆ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಗಾಗಿ ಹಲವಾರು ಯೋಜನೆಗಳ ಮೂಲಕ ಭಗೀರಥ ಪ್ರಯತ್ನ ಮಾಡಿದರೂ ಸಮರ್ಪಕವಾಗಿ ನೀರು ಪೂರೈಕೆ ಸಾಧ್ಯವಾಗಿಲ್ಲ. ಬಾವಿಯಲ್ಲಿ ಹೂಳು ತುಂಬಿದ್ದು ಅದನ್ನು ತೆಗೆಸಲು ಗ್ರಾಪಂ ಆಡಳಿತ ನಿರ್ಲಕ್ಷ ವಹಿಸಿದೆ. ನೀರಿನ ಸಮಸ್ಯೆ ನಮ್ಮೂರಿಗೆ ಅಂಟಿರುವ ಶಾಪ ಎಂದು ಗ್ರಾಮಸ್ಥರು ಗೋಳಿಡುವಂತಾಗಿದೆ.
ಚರಂಡಿ ಇಲ್ಲ: ಗ್ರಾಮದಲ್ಲಿ ಚರಂಡಿ ವ್ಯವಸ್ಥೆಯಿಲ್ಲದ್ದರಿಂದ ಎಲ್ಲೆಂದರಲ್ಲಿ ಮಲೀನ ನೀರು ಹರಿಯುತ್ತಿದ್ದು, ಗ್ರಾಮಸ್ಥರು ಮೂಗು ಮುಚ್ಚಿಕೊಂಡು ತಿರುಗಾಡಬೇಕಾಗಿದೆ. ಇದರಿಂದ ರೋಗ ರುಜಿನಗಳು ಹರಡುವುದಕ್ಕೂ ಕಾರಣವಾಗಿದೆ. ಗ್ರಾಮದಲ್ಲಿ ಅವಶ್ಯಕತೆ ಇರುವ ಕಡೆಗಳಲ್ಲಿ ಚರಂಡಿ ನಿರ್ಮಾಣಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿ ಧೋಬಿ ಘಾಟ್ ವ್ಯವಸ್ಥೆ ಇಲ್ಲದ್ದೇ ದೊಡ್ಡ ಸಮಸ್ಯೆಯಾಗಿದೆ. ಬಟ್ಟೆ ತೊಳೆಯಲು ಪರ್ಯಾಯ ಸ್ಥಳ ಇಲ್ಲದೇ ಮದಿಂದ ಅರ್ಧ ಕಿ.ಮೀ. ಅಂತರದಲ್ಲಿರುವ ಲಿಂಗಸುಗೂರು-ರಾಯಚೂರು ರಾಜ್ಯ ಹೆದ್ದಾರಿ ರಸ್ತೆಯಲ್ಲೇ ಗ್ರಾಮದ ಮಹಿಳೆಯರು ಸಾಲುಗಟ್ಟಿ ಕುಳಿತು ಬಟ್ಟೆ ತೊಳೆಯುತ್ತಾರೆ. ರಾಜ್ಯ ಹೆದ್ದಾರಿಯಾಗಿದ್ದರಿಂದ ವಾಹನಗಳ ಓಡಾಟ
ಹೆಚ್ಚಿರುವ ಈ ಸ್ಥಳದಲ್ಲಿ ಎಚ್ಚರ ತಪ್ಪಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ಆದ್ದರಿಂದ ಗ್ರಾಮದಲ್ಲಿ ಧೋಬಿಘಾಟ್ ನಿರ್ಮಿಸಬೇಕೆಂದು ಮಹಿಳೆಯರು ಆಗ್ರಹಿಸಿದ್ದಾರೆ.
ಕೈಗೆಟುಕುವ ತಂತಿ: ಗ್ರಾಮದಲ್ಲಿನ ವಿದ್ಯುತ್ ಕಂಬಗಳಲ್ಲಿನ ತಂತಿಗಳು ಕೈಗೆಟುಕುವಂತಿವೆ. ಇವುಗಳನ್ನು ಸರಿಪಡಿಸಲು ಜೆಸ್ಕಾಂಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನಿರಂತರ ಜ್ಯೋತಿ ಯೋಜನೆಯಡಿಯಲ್ಲಿ ವಿದ್ಯುತ್ ಕಂಬಗಳನ್ನು ಹಾಕಿ ತಂತಿಗಳ ಜೋಡಣೆ ಮಾಡಲಾಗಿದೆ. ಆದರೆ ಇನ್ನೂ ವಿದ್ಯುತ್ ಸಂಪರ್ಕ ನೀಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ