ಬೆಳಗಾವಿ: ದಿನದಿನಕ್ಕೂ ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಾಹನಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆ ಆಗುತ್ತಿದ್ದು, ಕೇಂದ್ರ ಸರ್ಕಾರ ಸಂಚಾರಿ ನಿಯಮಗಳ ಹೊಸ ಕಾನೂನು ಜಾರಿಗೆ ತಂದಿದ್ದರಿಂದ ವಾಹನ ಸವಾರರು ದಾಖಲೆಗಳ ಸಂಗ್ರಹಕ್ಕಾಗಿ ಅಲೆದಾಡುತ್ತಿದ್ದಾರೆ. ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೊಳಗಾಗಿದ್ದ ವಾಯು ಮಾಲಿನ್ಯ ತಪಾಸಣೆಗಾಗಿ ಈಗ ಜನರು ಮುಗಿ ಬೀಳುತ್ತಿದ್ದು, ಲಕ್ಷ ಲಕ್ಷ ವಾಹನಗಳಿಗೆ ಬೆರಳೆಣಿಕೆಯಷ್ಟು ತಪಾಸಣೆ ಕೇಂದ್ರಗಳಿಂದಾಗಿ ಪರದಾಡುವಂತಾಗಿದೆ. ಬೆಳಗಾವಿ ಜಿಲ್ಲೆಯನ್ನು ಒಟ್ಟು ಐದು ವಾಹನ ನೋಂದಣಿ ಕಚೇರಿಗಳನ್ನಾಗಿ ವಿಸ್ತರಿಸಲಾಗಿದೆ. ಬೆಳಗಾವಿ, ಚಿಕ್ಕೋಡಿ, ಗೋಕಾಕ, ಬೈಲಹೊಂಗಲ ಹಾಗೂ ರಾಮದುರ್ಗಗಳಲ್ಲಿ ವಾಹನ ನೋಂದಣಿ ಕಚೇರಿಗಳಿದ್ದು, ದಿನದಿನಕ್ಕೂ ಇಲ್ಲಿ ವಾಹನಗಳ ನೋಂದಣಿ ಸಂಖ್ಯೆ ಏರಿಕೆ ಆಗುತ್ತಿದೆ.
ಸದ್ಯ ಕೇಂದ್ರ ಸರ್ಕಾರ ಸಂಚಾರಿ ನಿಯಮಗಳ ಪಾಲನೆಗಾಗಿ ತಿದ್ದುಪಡಿ ಮಾಡಿದ ಕಾಯ್ದೆಯನ್ನು ಜಾರಿಗೆ ತಂದು ಭಾರೀ ಮೊತ್ತದ ದಂಡವನ್ನೂ ವಿಧಿಸುತ್ತಿದೆ. ಹೀಗಾಗಿ ವಾಹನ ಸವಾರರು ದಾಖಲೆಗಳನ್ನು ಸರಿಪಡಿಸಲಿಕೊಳ್ಳಲು ಸಾರಿಗೆ ಇಲಾಖೆ ಕಚೇರಿಗಳಿಗೆ ಅಲೆದಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ವಾಹನಗಳ ಪ್ರಮಾಣ ಏರಿಕೆ ಆಗುವುದರ ಜತೆಗೆ ಪರಿಸರ ಮಾಲಿನ್ಯವೂ ವಿಪರೀತವಾಗಿ ಹೆಚ್ಚಾಗುತ್ತಿದೆ. ಪರಿಸರ ಮಾಲಿನ್ಯ ವಾಹನಗಳಿಂದ ಹೆಚ್ಚಾಗುತ್ತಿರುವುದನ್ನು ಮನಗಂಡ ಸರ್ಕಾರ ಇದಕ್ಕೆ ಕಡಿವಾಣ ಹಾಕಿ ಅತಿ ಹೆಚ್ಚು ಹೊಗೆ ಉಗುಳುವ ವಾಹನಗಳಿಗೆ ದಂಡ ವಿಧಿಸಲು ಮುಂದಾಗಿದೆ. ಈ ಮುಂಚೆ ಲೆಕ್ಕಕ್ಕೇ ಇಲ್ಲದಂತಿದ್ದ ವಾಯು ಮಾಲಿನ್ಯ ತಪಾಸಣೆಗೆ ಈಗ ಭಾರೀ ಬೇಡಿಕೆ ಬಂದಿದೆ. ಜನರು ಕ್ಯೂನಲ್ಲಿ ನಿಂತು ವಾಹನಗಳನ್ನು ತಪಾಸಣೆ ಮಾಡಿಕೊಂಡು ಪ್ರಮಾಣ ಪತ್ರಗಳನ್ನು ಪಡೆಯುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಲಕ್ಷ ಲಕ್ಷ ವಾಹನಗಳು ರಸ್ತೆಗಿಳಿಯುತ್ತಿವೆ. ಹೊಗೆ ಉಗುಳುತ್ತ ಪರಿಸರಕ್ಕೆ ಹಾನಿ ಮಾಡುವುದರಲ್ಲಿ ವಾಹನಗಳದ್ದು ಎತ್ತಿದ ಕೈ. ವಾಯು ಮಾಲಿನ್ಯ ತಪಾಸಣೆ ಮಾಡಬೇಕಾದ ಕೇಂದ್ರಗಳು ಮಾತ್ರ ಬೆರಳೆಣಿಕೆಯಷ್ಟು ಇವೆ.
ಬೆಳಗಾವಿಯಲ್ಲಿ 32, ಗೋಕಾಕದಲ್ಲಿ 2, ರಾಮದುರ್ಗದಲ್ಲಿ 2, ಬೈಲಹೊಂಗಲದಲ್ಲಿ 2 ಹಾಗೂ ಚಿಕ್ಕೋಡಿಯಲ್ಲಿ 6 ತಪಾಸಣಾ ಕೇಂದ್ರಗಳಿದ್ದು, ಜನರು ಇದಕ್ಕಾಗಿ ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿ ಇದೆ. ತಪಾಸಣಾ ಕೇಂದ್ರ ಆರಂಭ ಹೇಗೆ?: ವಾಯು ಮಾಲಿನ್ಯ ತಪಾಸಣೆ ಕೇಂದ್ರ ಆರಂಭಿಸುವ ಬಗ್ಗೆ ಮೊದಲು ಸಾರಿಗೆ ಇಲಾಖೆ ಕಚೇರಿಗೆ ಅರ್ಜಿ ಸಲ್ಲಿಸಿದಾಗ ಇದನ್ನು ಬೆಂಗಳೂರು ಕಚೇರಿಗೆ ಶಿಫಾರಸು ಮಾಡಲಾಗುತ್ತದೆ. ಕೇಂದ್ರ ಆರಂಭಿಸುವವರಿಂದ ಅಗತ್ಯ ದಾಖಲೆಗಳು, ವಾಹನಗಳನ್ನು ನಿಲ್ಲಿಸಲು ಸುಸಜ್ಜಿತ ಜಾಗ, ಗ್ರಾಹಕರಿಗೆ ತೊಂದರೆ ಆಗದಂತೆ ಇರಬೇಕಾದ ಜಾಗದ ವ್ಯವಸ್ಥೆ, ಕಂಪ್ಯೂಟರ್ ವ್ಯವಸ್ಥೆ ಇದ್ದರೆ ಕೂಡಲೇ ಕೇಂದ್ರ ಆರಂಭಕ್ಕೆ ಅನುಮತಿ ನೀಡಲಾಗುತ್ತದೆ.
ವಾಯು ಮಾಲಿನ್ಯ ತಪಾಸಣೆ ಕೇಂದ್ರ ಬಗ್ಗೆ ಅನುಮಾನ ಇದ್ದರೆ, ಗ್ರಾಹಕರು ದೂರು ಕೂಟ್ಟರೆ ಕೂಡಲೇ ಸಾರಿಗೆ ಇಲಾಖೆ ಇನ್ಸಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ದೂರು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತಾರೆ. ಈಗಾಗಲೇ ತಪಾಸಣೆ ಮಾಡಿ ಸುಳ್ಳು ದಾಖಲೆ ಕೊಟ್ಟರೂ ಕೇಂದ್ರದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಾರೆ ಅಧಿಕಾರಿಗಳು. ವಾಯು ಮಾಲಿನ್ಯ ತಪಾಸಣೆಗೆ ಈಗಾಗಲೇ ದ್ವಿಚಕ್ರ ವಾಹನಕ್ಕೆ 50 ರೂ., ನಾಲ್ಕು ಚಕ್ರದ ವಾಹನಕ್ಕೆ 90 ರೂ., ಡಿಸೇಲ್ನ ಭಾರೀ ವಾಹನಗಳಿಗೆ 125 ರೂ. ದರ ನಿಗದಿ ಮಾಡಲಾಗಿದೆ. ಈ ಮುಂಚೆ ದಿನಕ್ಕೆ ಕೇವಲ 40-50 ಜನ ಮಾತ್ರ ವಾಹನ ಸವಾರರು ಬಂದು ತಪಾಸಣೆ ಮಾಡಿಕೊಳ್ಳುತ್ತಿದ್ದರು. ಈಗ ಹೊಸ ಕಾಯ್ದೆ ಜಾರಿಯಾದಾಗಿನಿಂದ ದಿನಕ್ಕೆ 200-250 ಜನರು ಬಂದು ತಪಾಸಣೆ ಮಾಡಿಕೊಂಡು ಪ್ರಮಾಣ ಪತ್ರ ಪಡೆದುಕೊಳ್ಳುತ್ತಿದ್ದಾರೆ. ಒಂದು ವಾಹನವನ್ನು ಐದು ನಿಮಿಷದಲ್ಲಿ ತಪಾಸಣೆ ಮಾಡಿ ಕೊಡುವ ವ್ಯವಸ್ಥೆ ಇದೆ ಎನ್ನುತ್ತಾರೆ ಕೇಂದ್ರದ ಮಾಲೀಕ ಹರೀಶ.
ದಿನದಿನಕ್ಕೂ ವಾಹನಗಳ ನೋಂದಣಿ ಸಂಖ್ಯೆ ಹೆಚ್ಚಾಗುತ್ತಿದೆ. ದಂಡವನ್ನು ವಸೂಲಿ ಮಾಡಬೇಕೆಂಬ ಉದ್ದೇಶ ಸರ್ಕಾರಕ್ಕಿಲ್ಲ. ದಂಡದ ಭಯದಿಂದಾದರೂ ಸಂಚಾರಿ ನಿಯಮಗಳನ್ನು ಪಾಲಿಸಲಿ ಎಂಬುದೇ ಸರ್ಕಾರದ ಇರಾದೆ. ದಂಡದ ಮೊತ್ತ ಹೆಚ್ಚಾಗಿರುವುದರಿಂದ ಇನ್ನು ಮುಂದೆಯಾದರೂ ವಾಹನ ಸವಾರರು ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಬೇಕು. ಅಪಘಾತ ಪ್ರಮಾಣ ತಡೆಗಟ್ಟಲು ಇದು ಅನುಕೂಲಕರವಿದೆ. ಕಾನೂನಿಗೆ ಗೌರವ ಕೊಟ್ಟು ಎಲ್ಲರೂ ಪಾಲಿಸಬೇಕು.
• ಪುರುಷೋತ್ತಮ,ಜಂಟಿ ಸಾರಿಗೆ ಆಯುಕ್ತರು, ಬೆಳಗಾವಿ ವಿಭಾಗ
ವಾಯು ಮಾಲಿನ್ಯ ತಪಾಸಣೆ ಪ್ರತಿ ವಾಹನಕ್ಕೆ ಅಗತ್ಯವಿದೆ. ಈ ಮುಂಚೆಯಿಂದಲೂ ಕಾನೂನು ಇದ್ದರೂ ಜನರು ಅಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಈಗ ದಂಡದ ಮೊತ್ತ ಹೆಚ್ಚಾಗಿದ್ದರಿಂದ ಪ್ರಮಾಣ ಪತ್ರ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಕಡ್ಡಾಯವಾಗಿ ಪ್ರತಿಯೊಬ್ಬರೂ ವಾಯು ಮಾಲಿನ್ಯ ತಪಾಸಣೆ ಮಾಡಿಕೊಳ್ಳಬೇಕು. ತಪಾಸಣೆ ಮಾಡುವಲ್ಲಿ ಕೇಂದ್ರದವರ ವಿರುದ್ಧ ಗ್ರಾಹಕರು ದೂರು ಕೊಟ್ಟರೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
• ಶಿವಾನಂದ ಮಗದುಮ್ಮ,ಪ್ರಾದೇಶಿಕ ಸಾರಿಗೆ ಅಧಿಕಾರಿ ಬೆಳಗಾವಿ
•ಭೈರೋಬಾ ಕಾಂಬಳೆ