ದೇವನಹಳ್ಳಿ: ಮುಂಗಾರು ಪ್ರಾರಂಭವಾಗಿರುವುದರಿಂದ ರೈತರಿಗೆ ಸಕಾಲದಲ್ಲಿ ಸರ್ಕಾರದಿಂದ ಬರುವಂತಹ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ ಹಾಗೂ ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳ ಕೊರತೆ ಎದ್ದುಕಾಣುತ್ತಿದ್ದು, ತಾಲೂಕಿನ ಕುಂದಾಣ ರೈತ ಸಂಪರ್ಕ ಕೇಂದ್ರದಲ್ಲಿ ಖಾಲಿ ಇರುವ ಕೃಷಿ ಅಧಿಕಾರಿ ಹುದ್ದೆ ಹಾಗೂ ಕೃಷಿ ಸಹಾಯಕ ಅಧಿಕಾರಿ ಹುದ್ದೆಗಳನ್ನು ನೇಮಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.
ಕುಂದಾಣ ಹೋಬಳಿಯ ರೈತ ಸಂಪರ್ಕ ಕೇಂದ್ರವಿದ್ದರೂ ಸಹ ರೈತರಿಗೆ ಪ್ರಯೋಜನವಾಗುತ್ತಿಲ್ಲ. ಜಿಲ್ಲಾಡಳಿತ ಕಚೇರಿಯಿಂದ ಕೇವಲ ಒಂದೂವರೆ ಕಿ.ಮೀ. ದೂರದಲ್ಲಿರುವ ರೈತ ಸಂಪರ್ಕ ಕೇಂದ್ರದ ಸ್ಥಿತಿ ಹೀಗಾದರೆ ಹೇಗೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳೇ ಇಲ್ಲ: ಮುಂಗಾರು ಸಕಾಲದಲ್ಲಿ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಕೆಲ ರೈತರು ಉಳುಮೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತೇ ಕೆಲವರು ಬಿತ್ತನೆಗಾಗಿ ಪರದಾಡುತ್ತಿದ್ದಾರೆ. ಕುಂದಾಣ ಹೋಬಳಿ ವ್ಯಾಪ್ತಿಗೆ ಬರುವ ಕಾರಹಳ್ಳಿ ಕ್ರಾಸ್, ಕಾರಹಳ್ಳಿ, ಮಜ್ಜಿಗೆ ಹೊಸಹಳ್ಳಿ ಕಡೆಯಿಂದ ಕುಂದಾಣ ರೈತ ಸಂಪರ್ಕ ಕೇಂದ್ರಕ್ಕೆ ಸುಮಾರು 12 ಕಿ.ಮೀ. ದೂರವಿದ್ದು, ದೇವನಹಳ್ಳಿಗೆ ಬಂದು ಚಪ್ಪರದಕಲ್ಲು ಕ್ರಾಸಿನಿಂದ ಬಸ್‌ನಲ್ಲಿ ತೆರಳಿ ಒಂದೂವರೆ ಕಿ.ಮೀ. ನಡೆದು ರೈತ ಸಂಪರ್ಕ ಕೇಂದ್ರಕ್ಕೆ ಬಂದರೆ, ರೈತರ ನೆರವಿಗೆ ಅಧಿಕಾರಿಗಳೇ ಇಲ್ಲದಿದ್ದರೆ ರೈತರ ಸ್ಥಿತಿ ಏನಾಗಬೇಕು. ತಾಲೂಕಿನಲ್ಲಿ ಏನಾಗುತ್ತಿದೆ ಎಂಬುವುದು ಅರ್ಥವಾಗುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.
ಸೂಕ್ತ ಮಾಹಿತಿ ನೀಡಿದ ಅಧಿಕಾರಿಗಳು: ಕೃಷಿ ಇಲಾಖೆ ಅಧಿಕಾರಿಗಳ ಕೆಲಸ ಮುಂಗಾರು ಪ್ರಾರಂಭದಲ್ಲಿ ಮೂರು ತಿಂಗಳ ಹಿಂಗಾರಿನಲ್ಲಿ ಒಂದು ತಿಂಗಳು ಮಾತ್ರ ರೈತರೊಂದಿಗೆ ನಿರಂತರ ಸಂಪರ್ಕದಲ್ಲಿ ಇರಬೇಕಾದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇರುವುದಿಲ್ಲ ಎಂದ ಮೇಲೆ ಉಳುಮೆ ಮಾಡುವ ರೈತರ ಜಮೀನುಗಳಿಗೆ ಹೋಗಿ ರೈತರಿಗೆ ಮಾಹಿತಿ ನೀಡುವುದೇ ಇಲ್ಲ, ಸರ್ಕಾರದ ಯೋಜನೆಗಳು ಎಲ್ಲಿ ಹೋಗುತ್ತದೆ. ಎಲ್ಲಿ ಬರುತ್ತದೆ ಎಂಬುವುದೇ ಗೊತ್ತಾಗುತ್ತಿಲ್ಲ.
ವಾರಕ್ಕೆರಡು ಬಾರಿ ಬರುವ ಅಧಿಕಾರಿಗಳು: ಹೋಬಳಿ ಕೇಂದ್ರ ಸ್ಥಾನದಲ್ಲಿ ಸುಮಾರು 10 ವರ್ಷಗಳ ಹೋರಾಟದ ಪ್ರಮಾಣದಲ್ಲಿ 22 ಲಕ್ಷ ವೆಚ್ಚದಲ್ಲಿ ಹೊಸ ರೈತ ಸಂಪರ್ಕ ಕಚೇರಿ ಕಳೆದ ಒಂದು ವರ್ಷದ ಹಿಂದೆ ಉದ್ಘಾಟನೆಗೊಂಡಿತ್ತು. ಐದಾರು ತಿಂಗಳುಗಳಿಂದ ರೈತ ಸಂಪರ್ಕ ಕೇಂದ್ರದಲ್ಲಿ ವಾರಕ್ಕೆ ಒಂದೆರಡು ಬಾರಿ ಅಧಿಕಾರಿ ಬಂದು ಹೋಗುವುದು ಯಾರಿಗೂ ತಿಳಿಯುವುದಿಲ್ಲ.
ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿ: ಈ ರೀತಿ ಆಗುತ್ತಿರುವುದರಿಂದ ರೈತರಿಗೆ ಅನಾನುಕೂಲವಾಗುತ್ತಿದೆ. ಸಂಬಂಧಿಸಿದ ಶಾಸಕರು, ಕೃಷಿ ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಿ ಕೂಡಲೇ ಖಾಲಿ ಹುದ್ದೆಗಳನ್ನು ತುಂಬಿಸುವ ಕೆಲಸ ಮಾಡಬೇಕು ಎಂದು ರೈತ ಕೃಷ್ಣಪ್ಪ ಆಗ್ರಹಿಸಿದ್ದಾರೆ.
ಈ ಬಗ್ಗೆ ಕೃಷಿಕ ಸಮಾಜದ ನಿರ್ದೇಶಕ ಎಚ್.ಎಂ.ರವಿಕುಮಾರ್ ಉದಯವಾಣಿ ಜೊತೆ ಮಾತನಾಡಿ, ರೈತ ಸಂಪರ್ಕ ಕೇಂದ್ರದಲ್ಲಿ ಇರುವುದು ಒಬ್ಬರೇ ಗುತ್ತಿಗೆ ಆಧಾರದಲ್ಲಿರುವ ಸಿಬ್ಬಂದಿ, ಅಧಿಕಾರಿಗಳ ಕೊಠಡಿ ಖಾಲಿಯಾಗಿರುತ್ತದೆ. ಇರುವ ಒಬ್ಬ ಸಿಬ್ಬಂದಿಗೆ ಕೃಷಿ ಬಗ್ಗೆ ಮಾಹಿತಿ ಇಲ್ಲದ ಪಕ್ಷದಲ್ಲಿ ಕೂಡಲೇ ಉಸ್ತುವಾರಿ ಕೃಷಿ ಅಧಿಕಾರಿಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಇಲಾಖಾಧಿಕಾರಿಗಳ ಸಂಪರ್ಕವೇ ರೈತಾಪಿ ವರ್ಗದವರಿಗೆ ಇಲ್ಲದಂತೆ ಆಗಿದೆ. ಇಲ್ಲಿಗೆ ಶಾಶ್ವತವಾಗಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
● ಎಸ್.ಮಹೇಶ್