ದೇವನಹಳ್ಳಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಣದಲ್ಲಿ ಮಳೆ ಸುರಿದಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಸುರಿದಿರುವುದರಿಂದ ಬಿತ್ತನೆ ಕಾರ್ಯ ಗಣನೀಯ ಪ್ರಮಾಣದಲ್ಲಿ ಕುಂಠಿತಗೊಂಡಿದೆ. ಜಿಲ್ಲೆಯಲ್ಲಿ ಶೇ.23ರಷ್ಟು ಮಾತ್ರ ಬಿತ್ತನೆಯಾಗಿದ್ದು, ಶೇ.77ರಷ್ಟು ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ರೈತರು ಭೂಮಿಯನ್ನು ಬಿತ್ತನೆಗೆ ಹದಗೊಳಿಸಿದ್ದು, ಮಳೆಯ ಕೊರತೆಯಿಂದಾಗಿ ಕಾರ್ಯ ಸ್ಥಗಿತಗೊಂಡಿದೆ.
ರೈತರು ಸಂಕಷ್ಟಕ್ಕೆ ಸಿಲುಕುವ ಭೀತಿ: ಕೃಷಿ ಇಲಾಖಾಧಿ ಕಾರಿಗಳ ಪ್ರಕಾರ ಜುಲೈ ತಿಂಗಳಾಂತ್ಯಕ್ಕೆ 299 ಮಿ.ಮೀ. ಮಳೆಯಾಗಿದೆ. ಆದರೆ ವಾಡಿಕೆ ಮಳೆಗಿಂತ ಭಾರೀ ಪ್ರಮಾಣದಲ್ಲಿ ಕಡಿಮೆ ಮಳೆ ಸುರಿದಿದೆ. 2019ರ ಜುಲೈ ತಿಂಗಳಾಂತ್ಯಕ್ಕೆ 13,940 ಹೆಕ್ಟೇರ್‌ನಷ್ಟು ವಿಸ್ತೀರ್ಣದಲ್ಲಿ ರಾಗಿ, ಮುಸುಕಿನ ಜೋಳ, ತೊಗರಿ, ಅಲಸಂದೆೆ, ಅವರೆ ಇತ್ಯಾದಿ ಬೆಳೆಗಳನ್ನೊಳಗೊಂಡಂತೆ ಶೇ.23ರಷ್ಟು ಬಿತ್ತನೆಯಾಗಿರುತ್ತದೆ.
ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾದ ಕಾರಣ ರೈತರು ಜಮೀನನ್ನು ಹದಗೊಳಿಸಿ ಬಿತ್ತನೆಗೆ ಸಿದ್ಧಪಡಿಸಿದ್ದಾರೆ. ಆದರೆ ಬಳಿಕ ಸುರಿಯಬೇಕಿದ್ದ ಮಳೆ, ಸುರಿಯದ ಕಾರಣ ಬಿತ್ತನೆ ಕಾರ್ಯವಾಗಲಿಲ್ಲ. ಕಳೆದ ಸಾಲಿನಲ್ಲಿ 17,867 ಹೆಕ್ಟೇರ್ ವಿಸ್ತೀರ್ಣದ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಆದರೆ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಬೆಳೆಗಳು ಕಾಳುಕಟ್ಟದೆ, ರೈತರು ನಷ್ಟ ಅನುಭವಿಸಿದ್ದರು. ಈ ಬಾರಿಯೂ ಮಳೆಯಾಗದೆ ಇದ್ದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಭೀತಿಯಲ್ಲಿದ್ದಾರೆ.
ಹಿಂಗಾರು ನಿರೀಕ್ಷೆಯಲ್ಲಿ ರೈತರು: ಜಿಲ್ಲೆಯಲ್ಲಿ ಸಾಮಾನ್ಯವಾಗಿ ಆಗಸ್ಟ್‌ನಿಂದ ಸೆಪ್ಟೆಂಬರ್ ಮೊದಲನೆ ವಾರದವರೆಗೂ ಶೇ.80ರಷ್ಟು ಬಿತ್ತನೆ ಕಾರ್ಯವಾಗುತ್ತದೆ. ಪ್ರಸಕ್ತದಲ್ಲಿ ಉತ್ತಮ ಮಳೆ ಸುರಿದರೆ ಪೂರ್ಣ ಪ್ರಮಾಣದಲ್ಲಿ ಬಿತ್ತನೆ ಕಾರ್ಯವಾಗುವ ಸಾಧ್ಯತೆಗಳಿವೆ. ಹೀಗಾಗಿ ಹಿಂಗಾರು ಬಿತ್ತನೆಗಾಗಿ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜದ ದಾಸ್ತಾನ ಇದೆ. ಭತ್ತ 58.7 ಕ್ವಿಂ., ರಾಗಿ 981.35 ಕ್ವಿಂ., ಮುಸುಕಿನ ಜೋಳ 679.8 ಕ್ವಿಂ., ಅಲಸಂದೆೆ 22.8 ಕ್ವಿಂ., ತೊಗರಿ 71.5 ಕ್ವಿಂ., ನೆಲಗಡಲೆ 108 ಕ್ವಿಂ. ಲಭ್ಯವಿರುತ್ತದೆ. ಒಂದು ವೇಳೆ ನಿರೀಕ್ಷೆಗೆ ತಕ್ಕಂತೆ ಮಳೆಯಾಗದಿದ್ದ ಪಕ್ಷದಲ್ಲಿ ಪರ್ಯಾಯ ಬೆಳೆ ಯೋಜನೆ ರೂಪಿಸಲಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ತಾಲೂಕುವಾರು ಬಿತ್ತನೆ: ದೇವನಹಳ್ಳಿ ಭತ್ತ 67 ಹೆಕ್ಟೇರ್, ದೊಡ್ಡಬಳ್ಳಾಪುರ 34 ಹೆಕ್ಟೇರ್, ಹೊಸಕೋಟೆ 433 ಹೆಕ್ಟೇರ್, ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಸಾಧನೆ ಶೂನ್ಯವಾಗಿದೆ. ನೆಲಮಂಗಲ 71 ಹೆಕ್ಟೇರ್ ಗುರಿ ಇಡಲಾಗಿತ್ತು. ಆದರೆ 6 ಹೆಕ್ಟೇರ್ ಮಾತ್ರ ಸಾಧನೆಯಾಗಿದೆ. ಒಟ್ಟು ಜಿಲ್ಲೆಯಲ್ಲಿ ಜು. 30ರ ಪ್ರಗತಿಯಲ್ಲಿ 148 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತ ಬಿತ್ತನೆಯಾಗಿದೆ. ರಾಗಿ 10178 ಹೆಕ್ಟೇರ್ ಬಿತ್ತನೆಯಾಗಿದ್ದರೆ, ಮುಸುಕಿನ ಜೋಳ 5130 ಹೆಕ್ಟೇರ್, ತೃಣ ಧಾನ್ಯಗಳು 10 ಹೆಕ್ಟೇರ್, ಮೇವಿನ ಜೋಳ 533 ಹೆಕ್ಟೇರ್, ಮುಸುಕಿನ ಜೋಳ 172 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯವಾಗಿದೆ.
ದ್ವಿದಳ ಧಾನ್ಯ ಬೆಳೆಗಳಾದ ತೊಗರಿ, ಹೆಸರು, ಹುರುಳಿ, ಅಲಸಂಧೆ, ಅವರೆ, ಉದ್ದು ಬೆಳೆಗಳನ್ನು ಶೇ.23ರಷ್ಟು ಮಾತ್ರ ಬಿತ್ತನೆಯಾಗಿರುತ್ತದೆ. ಎಣ್ಣೆಕಾಳು ಬೆಳೆಗಳು 234 ಹೆಕ್ಟೇರ್ ಪ್ರದೇಶದಲ್ಲಿ ಶೇ.12 ಮಾತ್ರ ಬಿತ್ತನೆಯಾಗಿದೆ. ಕಬ್ಬು ಜಿಲ್ಲೆಯಲ್ಲಿ ಶೂನ್ಯವಾಗಿದ್ದು, ಸರಾಸರಿ ಒಟ್ಟು ಎಲ್ಲಾ ಬೆಳೆಗಳ ಬಿತ್ತನೆ ಕಾರ್ಯ ಪ್ರಸಕ್ತ 2019ರಲ್ಲಿ ಶೇ.23ರಷ್ಟಾಗಿದೆ.
ದೃಢೀಕರಣ ಸ್ವೀಕಾರ:
ಕಿಸಾನ್ ಸಮ್ಮಾನ್ ಯೋಜನೆಯಡಿ, ಕರ್ನಾಟಕ ರಾಜ್ಯದ ಯಾವುದೇ ಭಾಗದಿಂದ ಅರ್ಹ ರೈತರು ಫಲಾನುಭವಿಗಳ ದೃಢೀಕರಣ ಮಾಹಿತಿ ನಿರ್ವಹಣೆಗೆ ವೆಬ್‌ಸೈಟ್ಅಭಿವೃದ್ಧಿ ಪಡಿಸಲಾಗಿದೆ. ಇಲ್ಲಿಂದಲೇ ದಾಖಲೆ ಸ್ವೀಕರಿಸಲಾಗುತ್ತದೆ. ಕೃಷಿ, ತೋಟಗಾರಿಕೆ, ಕಂದಾಯ, ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ದೃಢೀಕರಣ ಸ್ವೀಕರಿಸಲಾಗುತ್ತಿದೆ.
● ಎಸ್ ಮಹೇಶ್