Advertisement

ಕಾಯಕಲ್ಪಕ್ಕೆ ಕಾಯುತ್ತಿದೆ ಬೆಳ್ಳಾರೆ ಅಂಬೇಡ್ಕರ್‌ ಭವನ

04:30 AM May 29, 2018 | Team Udayavani |

ಬೆಳ್ಳಾರೆ: ಬೆಳ್ಳಾರೆ ಅಂಬೇಡ್ಕರ್‌ ಭವನ ಹಲವು ವರ್ಷಗಳಿಂದ ಕಾಯಕಲ್ಪಕ್ಕಾಗಿ ಕಾಯುತ್ತಿದ್ದು, ದುರಸ್ತಿ ಭಾಗ್ಯ ಇನ್ನೂ ಕೂಡಿಬಂದಿಲ್ಲ. ಹಲವು ವರ್ಷಗಳ ಹಿಂದೆ ಬೆಳ್ಳಾರೆ – ಸುಳ್ಯ ರಸ್ತೆ ಬದಿಯಲ್ಲಿ ಅಂಬೇಡ್ಕರ್‌ ಭವನವನ್ನು ನಿರ್ಮಾಣ ಮಾಡಲಾಗಿತ್ತು. ಈಗ ಅದು ತುಂಬ ಶೋಚನೀಯ ಸ್ಥಿತಿಯಲ್ಲಿದೆ. ಮೇಲ್ಛಾವಣಿ ಕುಸಿದು ನಿಂತಿದ್ದು, ಅಲ್ಲಲ್ಲಿ ಸೋರುತ್ತಿದೆ. ರೀಪು, ಪಕ್ಕಾಸು, ಕಿಟಕಿ-ಬಾಗಿಲು ಎಲ್ಲವೂ ಗೆದ್ದಲು ಹಿಡಿದು ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿವೆ.

Advertisement

ಬೇಡಿಕೆಯ ಅಂಬೇಡ್ಕರ್‌ ಭವನ
ಅಂಬೇಡ್ಕರ್‌ ಭವನವನ್ನು ಬೆಳ್ಳಾರೆ ಗ್ರಾಮ ಪಂಚಾಯತ್‌ ನಿರ್ವಹಣೆ ಮಾಡುತ್ತಿದ್ದು, ಇದು ಸಾರ್ವಜನಿಕ ಕಾರ್ಯಕ್ರಮಗಳು ನಡೆಯುವ ಸ್ಥಳವೂ ಆಗಿದೆ. ಇದಕ್ಕೆ ಸಾಕಷ್ಟು ಬೇಡಿಕೆಯಿದೆ. ಗ್ರಾಮಸಭೆ ಸಹಿತ ಸಾರ್ವಜನಿಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಈ ಕಟ್ಟಡ ಕುಸಿದರೆ, ಸಾರ್ವಜನಿಕ ಕಾರ್ಯಕ್ರಮ ನಡೆಸಲು ಸಮೀಪದಲ್ಲೆಲ್ಲೂ ಸರಕಾರಿ ಕಟ್ಟಡವಿಲ್ಲ. ಸಾವಿರಾರು ರೂ. ಬಾಡಿಗೆ ನೀಡಿ, ಖಾಸಗಿ ಹಾಲ್‌ಗ‌ಳಲ್ಲಿ ಕಾರ್ಯಕ್ರಮ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುವ ಸಾಧ್ಯತೆ ಇದೆ.


ನಿರ್ವಹಣೆ ಇಲ್ಲ

ಅನೇಕ ವರ್ಷಗಳಿಂದ ಅಂಬೇಡ್ಕರ್‌ ಭವನ ನಿರ್ವಹಣೆ ಇಲ್ಲದೆ ಕುಸಿಯುವ ಹಂತವನ್ನು ತಲುಪಿರುವುದು ಸಾರ್ವಜನಿಕರಲ್ಲಿ ನೋವುಂಟು ಮಾಡಿದೆ. ಭವನ ಬೀಳುವ ಸ್ಥಿತಿಯಲ್ಲಿದೆ, ದುರಸ್ತಿಗೆ ಅನುದಾನ ಕೊಡಿ, ತತ್‌ಕ್ಷಣ ದುರಸ್ತಿ ಮಾಡಿಸಿ ಎಂದು ಗ್ರಾಮಸ್ಥರು ಗ್ರಾಮಸಭೆಗಳಲ್ಲಿ ಹಲವು ಬಾರಿ ಒತ್ತಾಯಿಸಿದ್ದರು. ಆದರೆ, ಬೇಡಿಕೆ ಈಡೇರದಿರುವುದು ಅವರು ಆಕ್ರೋಶಕ್ಕೆ ಕಾರಣವಾಗಿದೆ. ಬೆಳ್ಳಾರೆ ಅಂಬೇಡ್ಕರ್‌ ಭವನ ಸುಮಾರು 35 ವರ್ಷಗಳಷ್ಟು ಹಳೆಯ ಕಟ್ಟಡವಾಗಿದ್ದು, ಇದನ್ನು ಅತಿ ಶೀಘ್ರವಾಗಿ ದುರಸ್ತಿ ಮಾಡಬೇಕು. ಅಥವಾ ಬೇರೊಂದು ಭವನವನ್ನು ನಿರ್ಮಾಣ ಮಾಡಬೇಕೆಂದು ಇಲ್ಲಿಯ ಜನರು ಒತ್ತಾಯಿಸಿದ್ದಾರೆ.

ಅನುದಾನ ಬಿಡುಗಡೆಗೆ ಒತ್ತಾಯ
ಅಂಬೇಡ್ಕರ್‌ ಭವನ ದುರಸ್ತಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 10 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಆಗ ಸ್ಥಳೀಯ ಕೆಲವು ಮಂದಿ ಅಂಬೇಡ್ಕರ್‌ ಭವನವನ್ನು ದುರಸ್ತಿ ಮಾಡುವುದು ಬೇಡ. ಸ್ಲ್ಯಾಬ್‌ ಅಳವಡಿಸಬೇಕು. ಇಲ್ಲವೇ ನೂತನ ಭವನ ನಿರ್ಮಾಣ ಮಾಡಬೇಕೆಂದು ಹೇಳಿದ್ದರು. ಇದರಿಂದ ದುರಸ್ತಿ ಕಾರ್ಯ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಬೆಳ್ಳಾರೆ ಅಂಬೇಡ್ಕರ್‌ ಭವನಕ್ಕೆ ಅನುದಾನ ಒದಗಿಸಿಕೊಡಬೇಕೆಂದು ಸುಳ್ಯ ಸಮಾಜ ಕಲ್ಯಾಣ ಇಲಾಖೆಯಿಂದ ರಾಜ್ಯ ಸಮಾಜ ಕಲ್ಯಾಣ ಇಲಾಖೆಗೆ ಬರೆಯಲಾಗಿದೆ.

ದುರಸ್ತಿ ಆಗುತ್ತದೆ
ಈ ಹಿಂದೆ ಅನುದಾನ ಬಿಡುಗಡೆಯಾಗಿತ್ತು. ಸ್ಥಳೀಯರು ದುರಸ್ತಿ ಬೇಡ, ನೂತನ ಭವನ ನಿರ್ಮಾಣ ಮಾಡಬೇಕೆಂದು ಹೇಳಿದ ಕಾರಣ ಅಂಬೇಡ್ಕರ್‌ ಭವನ ಅಭಿವೃದ್ಧಿ ಆಗಿಲ್ಲ. ಈ ಬಾರಿ ಅಂಬೇಡ್ಕರ್‌ ಭವನ ದುರಸ್ತಿ ಆಗುತ್ತದೆ. ಇದರಲ್ಲಿ ಯಾವುದೇ ಸಂಶಯ ಬೇಡ.
– ಶಕುಂತಳಾ ನಾಗರಾಜ್‌, ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷರು

Advertisement

ಇಲಾಖೆಗೆ ಪತ್ರ
ಬೆಳ್ಳಾರೆ ಅಂಬೇಡ್ಕರ್‌ ಭವನಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆಯಲಾಗಿದೆ.
– ಚಂದ್ರಶೇಖರ್‌ ಪೇರಾಲ್‌, ಪ್ರಭಾರ ಸಮಾಜ ಕಲ್ಯಾಣ ಅಧಿಕಾರಿ, ಸುಳ್ಯ

— ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next