ಶಿವಮೊಗ್ಗ: ಕೊರೊನಾ ಲಾಕ್‌ಡೌನ್ ಕಾರಣ ಬೇಸಿಗೆ ರಜೆಯಲ್ಲಿ ಭರ್ಜರಿ ಆದಾಯ ನೋಡಬೇಕಿದ್ದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ತೀವ್ರ ನಿರಾಸೆಯಾಗಿದೆ. ಒಂದು ಕಡೆ ಆದಾಯ ಖೋತಾ ಆದರೆ ಇತ್ತ ನಿರ್ವಹಣೆಗೂ ಆರ್ಥಿಕ ಸಂಕಷ್ಟ ಎದುರಾಗಿದೆ. ಮೃಗಾಲಯ ಪ್ರಾ ಧಿಕಾರ ವ್ಯಾಪ್ತಿಗೆ ಹೋದ ಬಳಿಕ ಶಿವಮೊಗ್ಗ ಮೃಗಾಲಯ ಮತ್ತು ಸಫಾರಿ ಎಂದು ಹೆಸರು ಬದಲಾಗಿದೆ.
ಜತೆಗೆ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಉದ್ದೇಶದಿಂದ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜತೆಗೆ ಹೊಸ ಎನ್‌ಕ್ಲೋಸರ್‌ಗಳನ್ನೂ ನಿರ್ಮಾಣ ಮಾಡಲಾಗುತ್ತಿದೆ. ಬಹುತೇಕ ಶೇ.80-90 ಕಾಮಗಾರಿ ಮುಗಿದಿದೆ. ಈ ಕೊರೊನಾ ಬಾರದಿದ್ದರೆ ಇಷ್ಟೊತ್ತಿಗಾಗಲೇ ಎಲ್ಲ ಎನ್‌ಕ್ಲೋಸರ್‌ಗಳ ಕೆಲಸ ಮುಗಿಯುತ್ತಿತ್ತು. ಸದ್ಯ ಕೂಲಿಕಾರ್ಮಿಕರು ಸಿಗದೇ ಕೆಲಸ ಅರ್ಧಂಬರ್ಧ ಆಗಿದೆ. ಹೀಗಾಗಿ, ಉದ್ದೇಶಿತ ಹೊಸ ಪ್ರಾಣಿಗಳನ್ನೂ ತರಲು ಸಾಧ್ಯವಾಗುತ್ತಿಲ್ಲ.
ನೀರಾನೆ, ಕಾಡು ಕೋಣ ಸಫಾರಿ ಸೇರಿದಂತೆ ವಿವಿಧ ಪ್ರಭೇದದ ಪ್ರಾಣಿ, ಪಕ್ಷಿಗಳ ಆಗಮನ ವಿಳಂಬವಾಗಲಿದೆ. ತ್ಯಾವರೆಕೊಪ್ಪದಲ್ಲಿರುವ ಶಿವಮೊಗ್ಗ ಮೃಗಾಲಯ ಮತ್ತು ಸಫಾರಿಗೆ ಹೊಸದಾಗಿ ಸೇರ್ಪಡೆಯಾಗಬೇಕಿದ್ದ “ಹುಲಿ’ರಾಯನ ಆಗಮನ ಕೊರೊನಾದಿಂದಾಗಿ ಇನ್ನಷ್ಟು ವಿಳಂಬವಾಗಲಿದೆ. ಹುಲಿ ಸಂತತಿ ಅಭಿವೃದ್ಧಿಯ ಮಹತ್ವಾಕಾಂಕ್ಷೆಯಿಂದ ವ್ಯಾಘ್ರನನ್ನು ಕರೆಸಿಕೊಳ್ಳಲು ಬಹುತೇಕ ಎಲ್ಲ ಸಿದಟಛಿತೆ ಮಾಡಿಕೊಳ್ಳಲಾಗಿತ್ತು.
ಒಂದು ವೇಳೆ, ಎಲ್ಲವೂ ಸರಿಯಾಗಿಯೇ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಪ್ರವಾಸಿಗರಿಗೆ ಇನ್ನೊಂದು ಹುಲಿಯ ದರ್ಶನ ಭಾಗ್ಯ ಪ್ರಾಪ್ತವಾಗುತ್ತಿತ್ತು. ಕಳೆದ 13 ವರ್ಷಗಳಿಂದ ಮೃಗಾಲಯದಲ್ಲಿ ಹುಲಿಗಳು ಮರಿ ಹಾಕಿಲ್ಲ. ಸದ್ಯ ಎರಡು ಹೆಣ್ಣು, ಐದು ಗಂಡು ಸೇರಿ ಏಳು ಹುಲಿಗಳಿವೆ. ಇವುಗಳಲ್ಲಿ ಬಹುತೇಕ 12-17 ವಯೋಮಾನದ್ದೇ ಇವೆ. ಸಾಮಾನ್ಯವಾಗಿ ನಾಲ್ಕೆದು ವರ್ಷಕ್ಕೆ ಹುಲಿಗಳು ಪ್ರೌಢ ಅವಸ್ಥೆಗೆ ಬರುತ್ತವೆ. ಗರ್ಭಧಾರಣೆಗೆ ಇದು ಹೇಳಿ ಮಾಡಿಸಿದ ಕಾಲಾವಧಿ. ಆದರೀಗ, ಸಫಾರಿಯಲ್ಲಿರುವ ಹೆಣ್ಣು ಹುಲಿಗಳಿಗೆ ವಯಸ್ಸಾಗಿದ್ದು ಗರ್ಭಧರಿಸಲು ಸಾಧ್ಯವಿಲ್ಲ.
ಈ ಅಂಶವನ್ನು ಗಮನದಲ್ಲಿಟ್ಟುಕೊಂಡೇ ಹೊಸ ವ್ಯಾಘ್ರನನ್ನು ಶಿವಮೊಗ್ಗಕ್ಕೆ ತರಲು ಯೋಜನೆ ರೂಪಿಸಲಾಗಿತ್ತು. 2013ರಲ್ಲಿ ಕೊನೆಯುಸಿರು ಎಳೆದಿದ್ದ 20 ವರ್ಷದ ಹಿರಿಯ ಹುಲಿ ಚಾಮುಂಡಿ ಹೊಟ್ಟೆಯಲ್ಲಿ 2007ರಲ್ಲಿ ವಿಜಯ, ದಶಮಿ ಅವಳಿಗಳು ಹುಟ್ಟಿದ ಬಳಿಕ ಸಫಾರಿಯಲ್ಲಿ ಹುಲಿಗಳ ಸಂತಾನೋತ್ಪತ್ತಿಯೇ ಆಗಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಬಳಿಕವೇ ಹೊಸ ಅತಿಥಿಯನ್ನು ಮೃಗಾಲಯ ಮತ್ತು ಸಫಾರಿಗೆ ಕರೆಸಿಕೊಳ್ಳಲು ಯೋಜನೆ ರೂಪಿಸಲಾಗಿತ್ತು. ಅದರ ಮೇಲೆಯೂ ಕೊರೊನಾ ಪರಿಣಾಮ ಬೀರಿದೆ.
ಲಾಕ್‌ಡೌನ್ ಪರಿಣಾಮ ಹಲವು ಯೋಜನೆಗಳಿಗೆ ಹಿನ್ನಡೆಯಾಗಿದೆ. ಅಂದಾಜು 50 ಲಕ್ಷ ರೂ. ನಷ್ಟವಾಗಿದೆ. ಈ ವೇಳೆಗೆ ನೀರಾನೆ ತರಿಸುವ ಉದ್ದೇಶ ಇತ್ತು. ಅದನ್ನೂ ಮುಂದೂಡಲಾಗಿದೆ. ಸರಕಾರದಿಂದ ಅವಕಾಶ ಸಿಕ್ಕರೆ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರವಾಸಿಗರನ್ನು ಬಿಡುವ ಚಿಂತನೆ ಇದೆ.
-ಮುಕುಂದಚಂದ್ರ, ಇ.ಡಿ. ಶಿವಮೊಗ್ಗ ಮೃಗಾಲಯ, ಸಫಾರಿ
* ಶರತ್ ಭದ್ರಾವತಿ