ಬೀದರ: ಸ್ವಾತಂತ್ರ್ಯೋತ್ಸವದ ಸ್ವರ್ಣ ಮಹೋತ್ಸವದ ಸವಿನೆನಪಿಗಾಗಿ ನಗರದ ಹೃದಯ ಭಾಗದಲ್ಲಿ ನಿರ್ಮಾಣಗೊಂಡಿರುವ “ಬರೀದ್ ಶಾಹಿ’ ಉದ್ಯಾನ ಸೂಕ್ತ ನಿರ್ವಹಣೆ ಕೊರತೆಯಿಂದ ಅದ್ವಾನವಾಗಿ ಮಾರ್ಪಟ್ಟಿದೆಯಲ್ಲದೇ ಈಗ ಅಕ್ಷರಶಃ ಹಾಳು ಕೊಂಪೆಯಾಗಿದೆ.
ವಿವಿಧ ಬಗೆಯ ಕಲಾಕೃತಿಗಳು, ಐತಿಹಾಸಿಕ ಗುಂಬಜ್ ಮತ್ತು ಆಟಿಕೆಗಳಿಂದಾಗಿ ಸೌಂದರ್ಯ ಮೇಳೈಸಿಕೊಂಡಿರುವ ಈ ಉದ್ಯಾನ ಜನರಿಂದ ದೂರ ಸರಿಯಲಾರಂಭಿಸಿದೆ. ಈ ಉದ್ಯಾನದಲ್ಲಿ ಬರೀದ ಶಾಹಿಯ ಸಮಾಧಿ ಜತೆಗೆ ಆತನ ಬಹು ಪತ್ನಿಯರ ಸಮಾಧಿಗಳಿವೆ.
ಬೃಹದಾಕಾರದ ಸುಂದರ ಕಲಾಕೃತಿಯ ಗುಂಬಜ್ ಗಳನ್ನು ಅವರ ಮಗ ಅಮೀರ ಅಲಿ ಬಾದಶಾಹ ಕ್ರಿ.ಶ. 1530-35ರಲ್ಲಿ ಕಟ್ಟಿಸಿದ್ದಾನೆ. ಐತಿಹಾಸಿಕ ಗುಂಬಜ್ ಗಳನ್ನು ಉಳಿಸಿಕೊಂಡು ಅದರ ಸೊಬಗು ಹೆಚ್ಚಿಸಲು ಆ ಪ್ರದೇಶವನ್ನೇ ಜಿಲ್ಲಾಡಳಿತ ಸ್ವರ್ಣ ಮಹೋತ್ಸವ “ಬರೀದ ಶಾಹಿ’ ಉದ್ಯಾನವನವನ್ನಾಗಿ ನವೀಕರಣಗೊಳಿಸಿದೆ. ಆದರೆ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಬರೀದ್ ಶಾಹಿ ಉದ್ಯಾನದಲ್ಲಿನ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಉದ್ಯಾನದಲ್ಲಿನ ಹಸರೀಕರಣ ಮಾಯವಾಗಿದ್ದು, ಕೆಂಪು ಧೂಳು ಪ್ರತಿಕೃತಿಗಳ ಸೌಂದರ್ಯ ಹಾಳಾಗಿಸಿದೆ. ಮನೋರಂಜನೆ ನೀಡಬೇಕಾದ ಆಟಿಕೆ ಸಾಮಾನುಗಳು ಮುರಿದು ಜೋತಾಡುತ್ತಿದ್ದು, ಸುತ್ತಲಿರುವ ವಿದ್ಯುತ್ ದೀಪಗಳು ನಿರ್ವಹಣೆ ಇಲ್ಲದೆ ಕೆಲವು ಬಂದ್ ಆಗಿವೆ.
ಉದ್ಯಾನವನದಲ್ಲಿ ಈ ಹಿಂದೆ ವಿವಿಧ ನಮೂನೆಯ ಸಸ್ಯ ರಾಶಿಗಳು ಮನಸ್ಸಿಗೆ ಮುದ ನೀಡುತ್ತಿದ್ದರೆ, ಕಟ್ಟೆ ಮೇಲೆ ಕುಳಿತು ಜನರ ಹರಟೆ, ಕೃಷಿ ಕಾಯಕ ಸೇರಿದಂತೆ ಗ್ರಾಮೀಣ ಜನರ ಬದುಕು ಅನಾವರಣಗೊಳಿಸುವಂಥ ಮನುಷ್ಯರು, ಜಾನುವಾರು ಮತ್ತು ಪ್ರಾಣಿಗಳ ಪ್ರತಿಕೃತಿಗಳು ಮತ್ತು ವಿದ್ಯುತ್ ಬೆಳಕಿನಲ್ಲಿ ಹೊರಚಿಮ್ಮುತ್ತಿದ್ದ ವಿವಿಧ ಬಗೆಯ ಕಾರಂಜಿಗಳು ನೋಡುಗರನ್ನು ಆಕರ್ಷಿಸುತ್ತಿದ್ದವು.
ಮತ್ತೊಂದೆಡೆ ರೈತ ಕುಟುಂಬ ಜೋಡಿ ಎತ್ತುಗಳೊಂದಿಗೆ ಹೊಲದಲ್ಲಿ ಬಿತ್ತನೆ ಮಾಡುವುದು, ಭೂಮಿ ಹದ ಮಾಡುವುದು ಅದರ ಪಕ್ಕದಲ್ಲೇ ಬಿತ್ತಿದ ಬೆಳೆಯ ರಾಶಿ ಮಾಡುವ ದೃಶ್ಯ ಗಮನ ಸೆಳೆಯುಂತಿವೆ. ಸ್ವಲ್ಪ ದೂರದಲ್ಲಿ ಬಣ್ಣ ಬಣ್ಣದ ಜಿಂಕೆ ಮರಿಗಳ ಓಟಾಟ, ಅಲ್ಲಿಯೇ ಕುರಿಗಾಹಿ ಮಹಿಳೆಯೊಬ್ಬಳು ಬಾಲಕನೊಂದಿಗೆ ಕುರಿಗಳನ್ನು ಮೇಯಿಸುತ್ತಿರುವ ದೃಶ್ಯ ಮನ ತಣಿಸುವಂತಿವೆ. ಆದರೆ ಸೂಕ್ತ ನಿರ್ವಹಣೆಯತ್ತ ಗಮನ ಹರಿಸದ ಕಾರಣ ಎಲ್ಲೆಡೆ ಹುಲ್ಲು ಬೆಳೆದು ಅಂದವನ್ನೇ ಹಾಳಾಗಿಸಿದೆ.
ಉದ್ಯಾನ ನವೀಕರಣಕ್ಕಾಗಿ ನಾಲ್ಕೈದು ವರ್ಷಗಳ ಹಿಂದೆ ಲಕ್ಷಾಂತರ ರೂ. ವೆಚ್ಚ ಮಾಡಿ ಉದ್ಯಾನದ ಕಳೆ ಹೆಚ್ಚಿಸಲಾಗಿತ್ತು. ಆದರೆ ಈಗ ಈ ಗಾರ್ಡನ್ ಸೊಬಗು ಕಳೆದುಕೊಂಡಿದೆ. ವಿಕೆಂಡ್ ದಿನಗಳಲ್ಲಿ ನೂರಾರು ಜನರು ತಮ್ಮ ಕುಟುಂಬಸ್ಥರು, ಗೆಳೆಯರೊಂದಿಗೆ ಇಲ್ಲಿಗೆ ಭೇಟಿ ನೀಡಿ ದಣಿವು ತಣಿಸಿಕೊಳ್ಳುತ್ತಾರೆ. ಹಾಗಾಗಿ ಜಿಲ್ಲಾಡಳಿತ ಇತ್ತ ಗಮನ ಹರಿಸಿ ಉದ್ಯಾನದ ವೈಭವವನ್ನು ಮರುಕಳಿಸುವ ಕಾರ್ಯ ಮಾಡಬೇಕಿದೆ.
ಸಸ್ಯ ರಾಶಿ, ಗ್ರಾಮೀಣ ಬದುಕು ಚಿತ್ರಿಸುವ ಕಲಾಕೃತಿಗಳಿಂದ ಕೂಡಿದ್ದ ಸುಂದರ ಉದ್ಯಾನ ಕಳೆದೆರಡು ವರ್ಷಗಳಿಂದ ಹಾಳು ಕೊಂಪೆಯಾಗಿದೆ. ಈ ಹಿಂದೆ ದುರಸ್ತಿ ಕಾರ್ಯಗಳಿಂದ ಉದ್ಯಾನಕ್ಕೆ ಹೊಸ ಕಾಯಕಲ್ಪ ಸಿಕ್ಕಿತ್ತು. ವಿದ್ಯುತ್ ದೀಪಾಲಂಕಾರ, ಕಾರಂಜಿಗಳು ಜನರನ್ನು ಸೆಳೆಯುತ್ತಿತ್ತು. ನಗರದ ಏಕೈಕ ಉದ್ಯಾನದ ಅಂದ ಹೆಚ್ಚಿಸಿ ಸೂಕ್ತ ನಿರ್ವಹಣೆ ಮಾಡಬೇಕಿದೆ.
ರವಿ ತಂಬಾಕೆ, ಸ್ಥಳೀಯರು.
ಶಶಿಕಾಂತ ಬಂಬುಳಗೆ