Advertisement
ನಗರ ಜಿಲ್ಲಾ ಪಂಚಾಯ್ತಿಯ ಹಲವು ಪ್ರದೇಶಗಳು ಸಿಲಿಕಾನ್ ಸಿಟಿಗೆ ಹೊಂದಿಕೊಂಡಿದ್ದು, ದಿನೇ ದಿನೆ ವೇಗವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿವೆ. ಆದರೆ, ಜನಸಂಖ್ಯೆ ಹೆಚ್ಚಿದಂತೆ ಘನತಾಜ್ಯ ಅಧಿಕವಾಗು ತ್ತಿದ್ದು, ಸಮರ್ಪಕ ತಾಜ್ಯವಿಲೇವಾರಿ ಸವಾಲಿನ ಪ್ರಶ್ನೆಯಾಗಿದೆ. ಘನತಾಜ್ಯ ನಿರ್ವಹಣೆಗಾಗಿ ಭೂಮಿ ನೀಡುವಂತೆ ಈ ಹಿಂದೆ ಬೆಂಗಳೂರು ನಗರ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆಯಲ್ಲಿ ಸಲ್ಲಿಸಿತ್ತು. ಆದರೆ, ಸರ್ಕಾರದಿಂದ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಜಾಗದ ಸಮಸ್ಯೆ ಎದುರಾಗಿದೆ.
Related Articles
Advertisement
ಗ್ರಾಪಂ ಮಟ್ಟದಲ್ಲಿ ಘನ ತಾಜ್ಯ ನಿರ್ವಹಣೆ ಘಟಕಗಳನ್ನು ತೆರೆದು ಗ್ರಾಪಂಗಳಿಗೆ ಆದಾಯ ತಂದುಕೊಡುವ ಯೋಜನೆಗಳನ್ನು ಜಿಲ್ಲಾಡಳಿತ ರೂಪಿಸಿದೆ. ರಾಜಾನುಕುಂಟೆ, ಬೆಟ್ಟಲಸೂರು, ಶಾಂತಿಪುರ, ಚಿಕ್ಕಜಾಲ ಸೇರಿದಂತೆ ಹಲವು ಕಡೆಗಳಲ್ಲಿ ಕಸದಿಂದ ಸಾವಯವ ಗೊಬ್ಬರ ತಯಾರಿಸಲಾಗುತ್ತಿದೆ. ಅದೇ ರೀತಿಯಲ್ಲಿ ಎಲ್ಲ ಗ್ರಾಪಂಗಳಲ್ಲಿ ಯೋಜನೆ ಜಾರಿಗೆ ಸಂಬಂಧ ಯೋಜನೆ ರೂಪಿಸಲಾಗಿದೆ. ಆದರೆ, ಜಾಗದ ಸಮಸ್ಯೆ ಯೋಜನೆ ಜಾರಿಗೆ ಅಡ್ಡಿಯಾಗಿದೆ ಎನ್ನುತ್ತಾರೆ.
ಜಿಪಂ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ: ಈ ಹಿಂದೆ ಬೆಂ. ನಗರ ಜಿಪಂನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಸ ವಿಲೇವಾರಿಗೆ ಜಾಗದ ಕೊರತೆ ಬಗ್ಗೆ ಆಡಳಿತ ಮತ್ತು ಪ್ರತಿ ಪಕ್ಷಗಳ ಸದಸ್ಯರು ಧ್ವನಿ ಎತ್ತಿದ್ದರು. ಜಿಪಂ ವ್ಯಾಪ್ತಿ ಗ್ರಾಮಗಳು ದಿನೇ ದಿನೆ ಬೆಳೆಯುತ್ತಿವೆ. ಜನತೆ ಅಷ್ಟೇ ಪ್ರಮಾಣದ ಸಮಸ್ಯೆಗಳು ಅಧಿಕವಾಗುತ್ತಿವೆ. ಕೆಲವು ಕಡೆಗಳಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡಲಾಗುತ್ತಿದೆ ಎಂಬುವುದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಕೆ.ಶ್ರೀನಿವಾಸ್ ಅವರು ಬೆಂ. ನಗರ ಜಿಪಂನಲ್ಲಿ ಎಲ್ಲೆಲ್ಲಿ ಸರ್ಕಾರಿ ಜಾಗವಿದೆ ಎಂಬುವುದನ್ನು ಗುರುತಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಒಂದು ವೇಳೆ ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗವಿದ್ದರೆ ಅದನ್ನು ಘನ ತ್ಯಾಜ್ಯ ವಿಲೇವಾರಿಗೆ ಬಳಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದರು.
ಗ್ರಾಮಗಳ ಸ್ವಚ್ಛತೆಗೆ ಬೆಂ. ನಗರ ಜಿಪಂ ಆದ್ಯತೆ ನೀಡಿದೆ. ಆ ಹಿನ್ನೆಲೆಯಲ್ಲಿ ಗ್ರಾಮಗಳ ಹಳ್ಳಿಗಳನ್ನು ಸ್ವತ್ಛವಾಗಿರಿಸಲು ಹಲವು ಕಾರ್ಯಕ್ರಮ ರೂಪಿಸಿದೆ. ಆದರೆ ಜಿಲ್ಲಾಡಳಿತದ ವ್ಯಾಪ್ತಿಯ ಹಲವು ಗ್ರಾಪಂನ ಪ್ರದೇಶಗಳು ಬಿಬಿಎಂಪಿಗೆ ಹೊಂದಿ ಕೊಂಡಿದ್ದು ವೇಗವಾಗಿ ಬೆಳೆಯುತ್ತಿವೆ. ಹೀಗಾಗಿ ಸಮಪರ್ಕ ಕಸವಿಲೇವಾರಿಗೆ ಜಾಗದ ಕೊರತೆ ಎದುರಾಗಿದೆ. ●ಡಾ.ನೋಮೇಶ್ ಕುಮಾರ್, ಬೆಂ.ನಗರ ಜಿಪಂ ಉಪಕಾರ್ಯದರ್ಶಿ
–ದೇವೇಶ ಸೂರಗುಪ್ಪ