Advertisement
ಕಾರ್ಕಳ ನಗರ ವ್ಯಾಪ್ತಿಯಲ್ಲಿ ಪೊಲೀಸರ ವಾಸ್ತವ್ಯಕ್ಕಾಗಿ ವಸತಿಗೃಹ ನಿರ್ಮಾಣಗೊಂಡಿದ್ದರೂ ಅದಕ್ಕಿನ್ನೂ ಮೂಲ ಸೌಕರ್ಯ ಜೋಡಿಸದೆ ಬಾಕಿ ಉಳಿದಿದೆ. ಆದ್ದರಿಂದ ಬಳಕೆಗಿನ್ನೂ ಕಾಲ ಕೂಡಿ ಬಂದಿಲ್ಲ. ಮೂಲ ಸೌಕರ್ಯ ಕೊರತೆಗಳಿರುವ ಸೋರುವ ಮನೆಗಳಲ್ಲೆ ಅವರು ಈಗಲೂ ತಮ್ಮ ವಾಸ್ತವ್ಯವನ್ನು ಮುಂದುವರೆಸುತ್ತಿದ್ದಾರೆ.
Related Articles
Advertisement
ಪೊಲೀಸ್ ವಸತಿ ಸಮುಚ್ಚಯದಲ್ಲಿ ಎರಡು ಅಂತಸ್ತಿನ 4 ಬ್ಲಾಕ್‌ಗಳಲ್ಲಿ ಒಟ್ಟು 48 ವಸತಿ ಗೃಹಗಳಿವೆ. ಇದರಿಂದ ಕಾರ್ಕಳ ನಗರ, ಗ್ರಾಮಾಂತರ ಹಾಗೂ ಅಜೆಕಾರು ಪೊಲೀಸ್ ಠಾಣೆಯ 48 ಪೊಲೀಸ್ ಕುಟುಂಬಕ್ಕೆ ಪ್ರಯೋಜನವಾಗಲಿದೆ. ಇವರೆಲ್ಲರೂ ಈಗ ಹಳೆ ವಸತಿ ಗೃಹಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಕೆಲವರು ಬಾಡಿಗೆಗೆ ಮನೆ ಪಡೆದು ವ್ಯಾಸ್ತವ್ಯ ಹೊಂದಿದ್ದಾರೆ.
ಸೌಕರ್ಯ ಜೋಡಣೆ ಸಮಸ್ಯೆಯಿದೆ :
ಸಮುತ್ಛಯ ಭವನಕ್ಕೆ ನೀರು ಪೂರೈಕೆ, ಡ್ರೈನೇಜ್‌ಗೆ ಸಂಬಂಧಿಸಿ ಕೆಲಸ ಕಾರ್ಯಗಳು ಪೂರ್ಣವಾಗಿಲ್ಲ. ಗುತ್ತಿಗೆದಾರರು ಕಟ್ಟಡ ನಿರ್ಮಿಸಿ ಸುಮ್ಮನಿದ್ದಾರೆ. ನೀರು ಸಂಪರ್ಕ, ಇನ್ನಿತರ ಮೂಲ ಸೌಕರ್ಯ ಒದಗಿಸುವಲ್ಲಿ ಗುತ್ತಿಗೆದಾರರ ಮತ್ತು ಇಲಾಖೆ ಮಧ್ಯೆ ಹೊಂದಾಣಿಕೆ ಕೊರತೆಯಿದೆ. ಪರಿಣಾಮ ಕಟ್ಟಡ ಮಾತ್ರ ನಿರ್ಮಾಣಗೊಂಡು ನಿಂತಿದೆ. ಪಕ್ಕದಲ್ಲೇ ಇರುವ ಸರಕಾರಿ ಬಾವಿಗೆ ಪಂಪ್ ಅಳವಡಿಸಿ ಪೈಪ್‌ಲೈನ್ ಸಂಪರ್ಕ ನೀಡಿದಲ್ಲಿ ನೀರಿನ ಸಮಸ್ಯೆ ಬಗೆಹರಿಯಲಿದೆ.
ಹಳೆಯ ಕಟ್ಟಡ ಶಿಥಿಲ :
35ಕ್ಕೂ ಅಧಿಕ ವರ್ಷದ ಹಿಂದೆ ನಿರ್ಮಾಣವಾದ ಪೊಲೀಸ್ ವಸತಿಗೃಹಗಳು ಶಿಥಿಲಾವಸ್ಥೆಯಲ್ಲಿದ್ದು, ಮನೆ ಛಾವಣಿ ಕುಸಿಯುವ ಭೀತಿ ಹಂತಕ್ಕೆ ತಲುಪಿದೆ. ಪ್ರತಿ ಮಳೆಗಾಲದಲ್ಲಿ ನೀರು ಸೋರುತ್ತಿರುತ್ತದೆ. ಮನೆ ಸಮಸ್ಯೆ ಸಿಬಂದಿಯನ್ನು ಕಾಡುತ್ತಿದೆ.
ಕಟ್ಟಡ ಸಿದ್ಧವಾಗಿದ್ದರೂ ಲೋಕಾರ್ಪಣೆ ವಿಳಂಬವಾಗಿದೆ. ಅಧಿವೇಶನ ಮುಗಿದ ತತ್‌ಕ್ಷಣ ಉದ್ಘಾಟನೆಗೆ ಕ್ರಮ ವಹಿಸಲಾಗುವುದು. -ವಿ.ಸುನಿಲ್ ಕುಮಾರ್, ಶಾಸಕರು, ಕಾರ್ಕಳ
ಸಮುಚ್ಛಯ ನಿರ್ಮಾಣಗೊಂಡು ಸಿದ್ಧವಾಗಿದೆ. ಒಳಚರಂಡಿಗೆ ಸಂಬಂಧಿಸಿದ ಕೆಲಸವಷ್ಟೇ ಬಾಕಿಯಿದೆ. ಶೀಘ್ರ ಬಳಕೆಗೆ ಸಿಗುವಂತೆ ಮಾಡಲು ಇಲಾಖೆ ಗಮನಕ್ಕೆ ತರಲಾಗಿದೆ. ಶೀಘ್ರ ಬಳಕೆಗೆ ಸಿಗುವ ವಿಶ್ವಾಸವಿದೆ. -ಭರತ್ ರೆಡ್ಡಿ , ಡಿವೈಎಸ್ಪಿ , ಕಾರ್ಕಳ