Advertisement

ಕುಡಿವ ನೀರಿಗೆ ಅನುದಾನವಿಲ್ಲದ ಪರಿಸ್ಥಿತಿ

02:36 PM Feb 12, 2020 | Team Udayavani |

ಕುಷ್ಟಗಿ: ಬರುವ ಮಾರ್ಚ್‌ ತಿಂಗಳ ಬಳಿಕ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳಲಿದ್ದು, ಸರ್ಕಾರದಿಂದ ಯಾವುದೇ ಅನುದಾನವಿಲ್ಲದ ಅನಾಥ ಪರಿಸ್ಥಿತಿಯಲ್ಲಿ ಸಮಸ್ಯೆ ಪರಿಹರಿಸುವುದೇ ಸವಾಲಾಗಲಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಹೇಳಿದರು.

Advertisement

ನಗರದ ಸರ್ಕ್ನೂಟ್‌ ಹೌಸ್‌ನಲ್ಲಿ ನಡೆದ ತಾಪಂ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಕಳೆದ ವರ್ಷ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಾಕಷ್ಟು ಅನುದಾನವಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಗ್ರಾಪಂ-ತಾಪಂ-ಜಿಪಂ ಹಾಗೂ ವಿಶೇಷವಾಗಿ ಕುಡಿಯುವ ನೀರಿಗಾಗಿ, ಅಭಾವ ಪರಿಹಾರ ನಿ ಧಿಯಿಂದ ಯಾವುದೇ ಅನುದಾನ ಬಿಡುಗಡೆ ಲಕ್ಷಣಗಳಿಲ್ಲ. ಈ ಪರಿಸ್ಥಿತಿಯಲ್ಲಿ ಕೊಳವೆಬಾವಿ ಕೊರೆಸಲು, ಹೊಸ ಮೋಟಾರ್‌ ಅಳವಡಿಕೆ, ಪೈಪ್‌ ಲೈನ್‌ ಮೊದಲಾದವುಗಳಿಗೆ ಹಣಕಾಸಿನ ಕೊರತೆ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಹನುಮನಾಳ ಜಿಪಂ ಸದಸ್ಯ ನೇಮಣ್ಣಮೇಲಸಕ್ರಿ ಮಾತನಾಡಿ, ಕಳೆದ ವರ್ಷ ಹಣ ಇದ್ದಾಗ ನಮ್ಮ ಜಿಪಂ ಕ್ಷೇತ್ರದಲ್ಲಿ ಏನೂ ಮಾಡಲಾಗಲಿಲ್ಲ. ಈ ವರ್ಷದಲ್ಲಿ ಏನಾಗುವುದೋ ಗೊತ್ತಿಲ್ಲ ಕಳವಳ ವ್ಯಕ್ತಪಡಿಸಿದರು.

ಶುದ್ಧ ನೀರಿನ ಘಟಕಕ್ಕೆ ಆದ್ಯತೆ: ಈ ಪರಿಸ್ಥಿತಿಯಲ್ಲಿ ಶುದ್ಧ ನೀರಿನ ಘಟಕ ಸುಸ್ಥಿತಿಯಲ್ಲಿಡುವುದು ಮೊದಲಾದ್ಯತೆ ಆಗಬೇಕಿದೆ. ಅರೆಬರೆ, ರಿಪೇರಿ ಹಂತದಲ್ಲಿರುವ ಶುದ್ಧ ನೀರಿನ ಘಟಕಗಳ ದುರಸ್ತಿಗೆ ಎಷ್ಟು ಹಣ ಲಭ್ಯವೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ನಿಧಿಯಿಂದ ಬಿಡುಗಡೆಗೆ ಯತ್ನಿಸಲಾಗುತ್ತಿದೆ. ಶುದ್ಧ ನೀರಿನ ಘಟಕಗಳ ವಾಸ್ತವ ಸ್ಥಿತಿ ವರದಿ ನೀಡಲು ಪಿಡಿಒಗಳಿಗೆ ಸೂಚಿಸಿದರು.

ಪ್ರತಿ ಗ್ರಾಪಂ ಪೈಪ್‌ಲೈನ್‌ ದುರಸ್ತಿ ಸೇರಿದಂತೆ ಸಣ್ಣ ಪುಟ್ಟ ಅಗತ್ಯಗಳಿಗೆ ಕನಿಷ್ಠ 1 ಲಕ್ಷ ರೂ. ಮಿತಿಯಲ್ಲಿ ಖರ್ಚು ಮಾಡೋಣ. ಗುಡ್ಡದದೇವಲಾಪುರದಲ್ಲಿ ವರ್ಷ ಪೂರ್ತಿ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಅಭಾವ ಪರಿಹಾರದ ಅನುದಾನದಲ್ಲಿ ಮಾತ್ರ ಕಂದಾಯ ಇಲಾಖೆ ಟ್ಯಾಂಕರ್‌ ಮೂಲಕ ನೀರು ಪೂರೈಸಿದ ವೆಚ್ಚ ಪಾವತಿಸುತ್ತದೆ.ಉಳಿದ ತಿಂಗಳು ಗ್ರಾಪಂ ಪಾವತಿಸುವುದು ಹೊರೆಯಾಗುತ್ತಿದೆ. ಹೀಗಾಗಿ ಗ್ರಾಪಂ ಪಿಡಿಒ ಜಿಲ್ಲಾಧಿಕಾರಿಗೆ ವರ್ಷಪೂರ್ತಿಯ ವೆಚ್ಚ ಜಿಲ್ಲಾಡಳಿತ ಭರಿಸಲು ಪತ್ರ ಬರೆಯಲು ಸಲಹೆ ನೀಡಿದರು.

ತಪ್ಪು ಮಾಹಿತಿ: ಕಳೆದ ಬಾರಿ ಅಸಮರ್ಪಕ ಮಳೆ ಹಿನ್ನೆಲೆಯಲ್ಲಿ ಅವೈಜ್ಞಾನಿಕ ಮಳೆ ಮಾಪನಾ ತಪ್ಪು ವರದಿ ಅನುದಾನಕ್ಕೆ ತಡೆಗೆ ಕಾರಣವಾಗಿದೆ. ಗ್ರಾಪಂ ಪಿಡಿಒ ಮೊದಲು ತಮ್ಮ ಗ್ರಾಪಂ ಮೇಲಿರುವ ಮಳೆ ಮಾಪನಾ ಯಂತ್ರ ಪರೀಕ್ಷಿಸಿ ಸುಸ್ಥಿತಿ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

Advertisement

ಗ್ರಾಮೀಣ ನೀರು, ನೈರ್ಮಲ್ಯ ಇಲಾಖೆ ಎಇಇ ಭರತಕುಮಾರ ಮಾತನಾಡಿ, ಹಿಂದಿನ ಎನ್‌ಆರ್‌ಡಬ್ಲೂಪಿ ಯೋಜನೆ ಬದಲಿಗೆ ಕೇಂದ್ರ ಸರ್ಕಾರದ ಜಲ ಜೀವನ ಮಿಷನ್‌ ಅನುಷ್ಠಾನಗೊಂಡಿದೆ. ಈ ಯೋಜನೆಯಲ್ಲಿ ಅಗತ್ಯಕ್ಕನುಗುಣವಾಗಿ ನೀರು ಪೂರೈಕೆಗೆ ಪ್ರತಿ ಮನೆಗಳ ಸರ್ವೆ ಮಾಡಿ ಅನುದಾನ ಬಿಡುಗಡೆ ಮಾಡಲಿದೆ ಎಂದರು.

ತಾಲೂಕಿನಲ್ಲಿ ಹಳೆಯ ಓವರ್‌ ಹೆಡ್‌ ಟ್ಯಾಂಕ್‌ಗಳನ್ನು ತೆರವುಗೊಳಿಸಲು ಗದಗ ಏಜೆನ್ಸಿಗೆ ವಹಿಸಲಾಗಿದೆ. ಸಂಬಂಧಿಸಿದ ಇಲಾಖೆ ಅಧಿ ಕಾರಿಗಳು ಓಎಚ್‌ಟಿ ದುರ್ಬಲವಾಗಿದ್ದರೆ ಅದನ್ನು ತೆರವುಗೊಳಿಸಲಾಗುತ್ತಿದ್ದು, ಏಜೆನಿ, ಕಬ್ಬಿಣದ ಸರಳು ಮಾತ್ರ ತೆಗೆದುಕೊಳ್ಳುವ ಒಪ್ಪಂದದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು.

ವೈಜ್ಞಾನಿಕ ಇಂಗು ಗುಂಡಿ: ನರೇಗಾ ಯೋಜನೆಯಲ್ಲಿ ಕೈಪಂಪ್‌ ಹಾಗೂ ನೀರಿನ ತೊಟ್ಟಿ ಬಳಿ ವೈಜ್ಞಾನಿಕ ನೀರು ಇಂಗಿಸುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದರು. ಶಾಸಕ ಅಮರೇಗೌಡ ಬಯ್ನಾಪೂರ, ಈ ಹಿಂದೆ ಕೈಪಂಪ್‌ ಬಳಿ ನೀರು ಇಂಗಿಸುವ ಕಾಮಗಾರಿಗಳು ಅವೈಜ್ಞಾನಿಕವಾಗಿರುವುದನ್ನು ಸಭೆಗೆಪ್ರಸ್ತಾಪಿಸಿ ಈ ಬಾರಿ ಹಿಂದಿನಂತಾಗದೇ 10 ಮೀ. ಆಳ, 3 ಮೀ. ಅಗಲದ ಗುಂಡಿ ತೆಗೆದು ವೈಜ್ಞಾನಿಕ ಇಂಗು ಗುಂಡಿ ನಿರ್ಮಿಸುವಂತಾಗಬೇಕು ಎಂದರು.

ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಸಲು, ಪೈಪ್‌ಲೈನ್‌ಗಾಗಿ ಅರಣ್ಯ ಇಲಾಖೆ ಕಾಯ್ದಿಟ್ಟ ಅರಣ್ಯ ಪ್ರದೇಶದ ಅನುಮತಿಗೆ ಅಧಿ ಕಾರಿಗಳು ತಕರಾರು ಮಾಡದಿರಿ ಎಂದು ಪ್ರಾದೇಶಿಕ ವಲಲಯ ಅರಣ್ಯಾಧಿಕಾರಿಗೆ ಸೂಚಿಸಿದ ಅವರು, ಗಿಡಮರಗಳಿಗೆ ಧಕ್ಕೆಯಾಗದಂತೆ ಕುಡಿಯುವ ನೀರಿಗೆ ಅರಣ್ಯ ಇಲಾಖೆ ಜಾಗೆ ಬಳಸಿಕೊಳ್ಳಬೇಕು ಎಂದರು. ತಾಪಂ ಅಧ್ಯಕ್ಷೆ ಮಹಾಂತಮ್ಮ ಪೂಜಾರಿ, ಉಪಾಧ್ಯಕ್ಷೆ ವಿಶಾಲಾಕ್ಷಿ, ಜಿಪಂ ಸದಸ್ಯರಾದ ಕೆ. ಮಹೇಶ, ನೇಮಣ್ಣ ಮೇಲಸಕ್ರಿ, ವಿಜಯ ನಾಯಕ, ಹನುಮಗೌಡ ಪಾಟೀಲ, ತಹಶೀಲ್ದಾರ್‌ ಸಿದ್ದೇಶ ಎಂ., ತಾಪಂ ಇಒ ಕೆ. ತಿಮ್ಮಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next