Advertisement
ಕಡಬ: ಕೊಂಬಾರು ಗ್ರಾ.ಪಂ.ನ ವ್ಯಾಪ್ತಿಯಲ್ಲಿರುವ ಸಿರಿಬಾಗಿಲು ಗ್ರಾಮ ಭೌಗೋಳಿಕವಾಗಿ ವಿಶಾಲವಾಗಿದ್ದರೂ ಇಲ್ಲಿ ಜನವಸತಿ ಬಲು ಕಡಿಮೆ. ಗ್ರಾಮದ ಬಹುಪಾಲು ಅರಣ್ಯ ವ್ಯಾಪಿಸಿಕೊಂಡಿದೆ. ಹೆಸರಿಗೆ ಮಾತ್ರ ಇದು ಸಿರಿ ಬಾಗಿಲು. ಇಲ್ಲಿ ಮೂಲ ಸೌಕರ್ಯ ಕೊರತೆಯೇ ಬಲುದೊಡ್ಡ ಸಮಸ್ಯೆ
Related Articles
Advertisement
ಗ್ರಾಮದ ಬಹುತೇಕ ಎಲ್ಲ ರಸ್ತೆಗಳು ಸರ್ವಋತು ರಸ್ತೆಗಳಾಗಿ ಅಭಿವೃದ್ಧಿ ಯಾಗಬೇಕಿದೆ. ಇರುವ ಕಚ್ಛಾ ರಸ್ತೆಗಳು ಮಳೆಗಾಲದಲ್ಲಿ ತೋಡಿ ನಂತಾಗುತ್ತವೆ. ನದಿ, ತೊರೆಗಳಿದ್ದು ಸೇತುವೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಗ್ರಾಮಕ್ಕೆ ಸಂಬಂಧಿಸಿದ ಸರಕಾರಿ ಆಸ್ಪತ್ರೆ ಸುಮಾರು 10 ಕಿ.ಮೀ. ದೂರದ ಶಿರಾಡಿಯಲ್ಲಿದೆ. ಸೂಕ್ತ ರಸ್ತೆ ಸಂಪರ್ಕ ಇಲ್ಲದೇ ಇರುವುದರಿಂದ ತುರ್ತು ಸಂದರ್ಭಗಳಲ್ಲಿ ಸಹಾಯವಾಗುವಂತೆ ಸಿರಿಬಾಗಿಲು ಗ್ರಾಮಕ್ಕೆ ಪ್ರತ್ಯೇಕ ಆರೋಗ್ಯ ಉಪಕೇಂದ್ರ ತೆರೆಯಬೇಕಿದೆ.
ಕಾಡುವ ವಿದ್ಯುತ್ ಸಮಸ್ಯೆ :
ಅರಣ್ಯದ ನಡುವೆ ವಿದ್ಯುತ್ ಮಾರ್ಗ ಹಾದುಹೋಗುತ್ತಿರುವುದರಿಂದ ಮರದ ಕೊಬೆಗಳು ವಿದ್ಯುತ್ ಲೈನ್‌ನ ಮೇಲೆ ಮುರಿದುಬಿದ್ದು ಇಲ್ಲಿ ಪದೇ ಪದೆ ವಿದ್ಯುತ್ ಸಮಸ್ಯೆ ಕಾಡುತ್ತಿರುತ್ತದೆ.
ನೆಟ್‌ವರ್ಕ್ ಸಮಸ್ಯೆ :
ಈ ಗ್ರಾಮದಲ್ಲಿ ಮೊಬೈಲ್‌ಗಳು ಸದಾ ನಾಟ್‌ರೀಚಬಲ್. ಇದರಿಂದಾಗಿ ಮಕ್ಕಳು ಆನ್‌ಲೈನ್ ತರಗತಿಗಳಿಂದಲೂ ವಂಚಿತರಾಗಿದ್ದಾರೆ. ಮಾತ್ರವಲ್ಲ ಆರೋಗ್ಯ ಸಮಸ್ಯೆ ಸೇರಿದಂತೆ ಯಾವು ದೇ ತುರ್ತು ಸಂದರ್ಭಗಳಲ್ಲಿ ಹೊರ ಪ್ರಪಂಚವನ್ನು ಸಂಪರ್ಕಿಸಲು ಇಲ್ಲಿನ ಜನರಿಗೆ ಸಾಧ್ಯವಾಗುತ್ತಿಲ್ಲ. ನೆಟ್‌ವರ್ಕ್ ಇಲ್ಲದ ಕಾರಣದಿಂದಾಗಿ ಕೋವಿಡ್ ನಿರೋಧಕ ಲಸಿಕೆ ಕ್ಯಾಂಪ್, ಆಧಾರ್ ಕ್ಯಾಂಪ್ ಮುಂತಾದವುಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಮಸ್ಯೆ ಬಗೆಹರಿಸುವುದಾಗಿ ಸಚಿವ ಎಸ್.ಅಂಗಾರ ನೀಡಿದ ಭರವಸೆಯ ಹಿನ್ನೆಲೆಯಲ್ಲಿ ನೆಟ್‌ವರ್ಕ್ ವಿಚಾರದಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದ ಸ್ಥಳೀಯರು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.
ಗ್ರಾಮ ವಾಸ್ತವ್ಯದಲ್ಲಿಯೂ ಚರ್ಚೆ :
ಕೆಲವು ತಿಂಗಳ ಹಿಂದೆ ದ.ಕ.ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕಡಬ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಜಿಲ್ಲಾಧಿಕಾರಿ ನೇತೃ ತ್ವದಲ್ಲಿ ಸ್ಥಳೀಯ ಶಾಸಕರ ಉಪಸ್ಥಿತಿಯಲ್ಲಿ ಜರಗಿದ ಗ್ರಾಮ ವಾಸ್ತವ್ಯದಲ್ಲಿಯೂ ಸ್ಥಳೀಯ ಸಮಸ್ಯೆಗಳನ್ನು ಜನರು ಸರಕಾರದ ಮುಂದಿ ರಿಸಿದ್ದಾರೆ. ಪ್ರಮುಖ ಸಮಸ್ಯೆಗಳನ್ನು ಮನದಟ್ಟು ಮಾಡಿದ್ದಾರೆ. ಕೆಲವು ಸಣ್ಣಪುಟ್ಟ ಸಮಸ್ಯೆಗಳು ಬಗೆ ಹರಿದಿದ್ದರೂ ಪ್ರಮುಖ ಬೇಡಿಕೆಗಳು ಇನ್ನಷ್ಟೇ ಬಗೆಹರಿಯಬೇಕಿದೆ.
ಭೂಮಿಯ ಹಕ್ಕುಪತ್ರ ಪಡೆಯಲೂ ಸಮಸ್ಯೆ :
94 ಸಿ ಹಾಗೂ ಅಕ್ರಮ ಸಕ್ರಮ ಮೂಲಕ ಭೂಮಿಯ ಹಕ್ಕುಪತ್ರ ಪಡೆಯುವ ಅವಕಾಶದಿಂದಲೂ ಹೆಚ್ಚಿನ ಜನರು ವಂಚಿತರಾಗಿದ್ದಾರೆ. ಅರಣ್ಯ ಇಲಾಖೆಯ ಆಕ್ಷೇಪ ಣೆಯಿಂದಾಗಿ ಬಹುತೇಕ ಕಡತಗಳು ವಿಲೇವಾರಿಯಾಗದೆ ಕಂದಾಯ ಕಚೇರಿಯಲ್ಲಿಯೇ ಬಾಕಿಯಾಗಿವೆ.
ಇತರ ಸಮಸ್ಯೆಗಳು :
- ಸಾರ್ವಜನಿಕ ರುದ್ರಭೂಮಿ ಇಲ್ಲದಿರುವುದು
- ಘನ ತ್ಯಾಜ್ಯ ವಿಲೇವಾರಿ ಘಟಕ ಇಲ್ಲ
- ಅನುಷ್ಠಾನವಾಗದ ಶಾಶ್ವತ ಕುಡಿಯುವ ನೀರಿನ ಯೋಜನೆ
- ಗ್ರಾಮೀಣ ರಸ್ತೆಗಳಲ್ಲಿ ವಾಹನ ಸೌಕರ್ಯ ಇಲ್ಲದಿರುವುದು