Advertisement

ಸೌಲಭ್ಯವಿಲ್ಲದೇ ಶವ ಸಂಸ್ಕಾರ ಮಾಡಲೂ ಪರದಾಟ

04:38 PM Nov 01, 2022 | Team Udayavani |

ಮದ್ದೂರು: 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಮದ್ದೂರು ಪುರಸಭೆ ವ್ಯಾಪ್ತಿಯ 6ಕ್ಕೂ ಅಧಿಕ ಸ್ಮಶಾನಗಳು ಮೂಲ ಸೌಲಭ್ಯಗಳಿಲ್ಲದೆ ಪರಿತಪಿಸುತ್ತಿವೆ.

Advertisement

ಪರದಾಟ: ಪುರಸಭೆ ಸ್ವಾಮ್ಯಕ್ಕೆ ಸೇರಿದ ಒಟ್ಟು 6 ಸ್ಮಶಾನ ಪಟ್ಟಣ ವ್ಯಾಪ್ತಿಯಲ್ಲಿದ್ದು ವಿವಿಧ ಪಂಗಡಗಳ ಜನರಿಗಾಗಿ ಪ್ರತ್ಯೇಕವಾಗಿ ಈ ಹಿಂದಿನಿಂದಲೂ ಇರುವ ಸ್ಮಶಾನಗಳಲ್ಲಿ ಅಗತ್ಯವಿರುವ ಸೌಲಭ್ಯ ಲಭ್ಯ ವಿಲ್ಲದೆ ಶವ ಸಂಸ್ಕಾರದ ಸಂದರ್ಭಗಳಲ್ಲಿ ಸಾರ್ವ ಜನಿಕರು ಪರದಾಡುವ ಸ್ಥಿತಿಯಿದೆ. ಕುಡಿವ ನೀರು, ಮುಗಿಲೆತ್ತರಕ್ಕೆ ಬೆಳೆದು ನಿಂತಿರುವ ಕಳೆ ಸಸ್ಯಗಳು, ಕಾಂಪೌಂಡ್‌ ಅವ್ಯವಸ್ಥೆ, ಅವೈಜ್ಞಾನಿಕ ವಾಗಿ ನಿರ್ಮಿಸಿರುವ ಕಟ್ಟಿಗೆ ಚಿತಾಗಾರ, ಮಳೆ, ಬಿಸಿಲಿನ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ನಿಲ್ಲಲು ಸ್ಥಳವಿಲ್ಲದ ಸ್ಥಿತಿಯಿದೆ.

ಸೌಲಭ್ಯವಿಲ್ಲ: ಸ್ಥಳೀಯ ಪುರಸಭೆ ಪ್ರತಿವರ್ಷ ತನ್ನ ವ್ಯಾಪ್ತಿಯ ಸ್ಮಶಾನಗಳ ಅಭಿವೃದ್ಧಿ ಹಾಗೂ ಇನ್ನಿತರೆ ಚಟುವಟಿಕೆಗಳಿಗಾಗಿ ಲಕ್ಷಾಂತರ ರೂ.ಗಳನ್ನು ತಮ್ಮ ಆಯವ್ಯಯ ಮಂಡನೆ ವೇಳೆ ತೆಗೆದಿರಿಸುತ್ತಿದ್ದರೂ ಇಂದಿಗೂ ಮೂಲ ಸೌಲಭ್ಯ ದೊರಕಿಲ್ಲ. ಪಟ್ಟಣ ಹೊರವಲಯದ ಶಿಂಷಾ ನದಿ ದಡ, ಕೊಲ್ಲಿ ವೃತ್ತ ಸಮೀಪದ ಹೊಳೆಆಂಜನೇಯ ರಸ್ತೆ ಬಳಿಯ ವೀರಶೈವರ ಸ್ಮಶಾನ, ಪಟ್ಟಣ ಹೊರವಲ ಯದ ಪರಿಶಿಷ್ಟರ ಸ್ಮಶಾನ ಸೇರಿದಂತೆ ನೂತನವಾಗಿ ವಾರ್ಡ್‌ ನಂ1ರ ಎಚ್‌ಕೆವಿ ನಗರದಲ್ಲಿ ಸ್ಥಾಪಿಸಿರುವ ಸ್ಮಶಾನಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಟ್ಟಿಗೆ (ಸೌಧೆ) ಚಿತಾಗಾರಗಳಿಗೆ ಅಳವಡಿಸಿರುವ ಕಲಾರ್‌ ಶೀಟ್‌, ಕಬ್ಬಿಣದ ಕಂಬಿ, ಕಳ್ಳಕಾಕರ ಪಾಲಾ ಗಿವೆ. ಇವು ಸೇವೆಯಿಂದಲೇ ದೂರ ಉಳಿದಿರುವುದು ದುರಂತ.

6 ಸ್ಮಶಾನಗಳಲ್ಲಿಯೂ ಕುಡಿವ ನೀರು, ಸಾರ್ವ ಜನಿಕರಿಗೆ ಮಳೆ, ಬಿಸಿಲಿನ ಸಂದರ್ಭಗಳಲ್ಲಿ ನೆರಳು ಕಲ್ಪಿಸುವ ಯಾವುದೇ ವ್ಯವಸ್ಥೆ ಇಲ್ಲ. ಇನ್ನು ಸ್ಮಶಾನಕ್ಕೆ ಸಾಗುವ ರಸ್ತೆಯ ಇಕ್ಕೆಲಗಳು ಒತ್ತುವರಿ ಯಾಗಿವೆ. ಹೀಗಾಗಿ ತಾಲೂಕು ಆಡಳಿತ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮವಹಿಸಬೇಕೆಂಬುದೇ ಸ್ಥಳೀಯರ ಆಗ್ರಹವಾಗಿದೆ.

ಮಳೆ ಅವಾಂತರ: ಕಳೆದ ಹಲವಾರು ದಿನಗಳಿಂ ದಲೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂ ದಾಗಿ ಸ್ಮಶಾನ ಜಾಗ ಕೆಸರುಗದ್ದೆಯಾಗಿದೆ. ಸಂಸ್ಕಾರಕ್ಕೆ ಶವ ಸಾಗಿಸುವ ವೇಳೆ ಹರಸಾಹಸ ಪಡಬೇಕಾದ ಸ್ಥಿತಿಯಿದೆ. ಡಾಂಬರೀಕರಣ ಕಾಣದೆ ಹಲವು ವರ್ಷ ಗಳೇ ಕಳೆದಿದ್ದರೂ ಇದುವರೆಗೂ ದುರಸ್ಥಿ ಕಾರ್ಯಕ್ಕೆ ಮುಂದಾಗದಿರುವುದು ನಾಚಿಕೆಗೇಡಿನ ಸಂಗತಿ.

Advertisement

ಸಂಜೆಯಾದರೆ ಇಸ್ಪೀಟ್‌ : ಈ ಹಿಂದೆ ಪಟ್ಟಣದ ಶಿಂಷಾ ನದಿ ದಡದ ಸ್ಮಶಾನದಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡಿ ಸಾರ್ವಜನಿಕರ ಉಪಯೋಗಕ್ಕಾಗಿ ಅಳವಡಿಸಿದ್ದ ಸೋಪಾನಕಟ್ಟೆಗಳು ಇಲ್ಲದಂತಾಗಿವೆ. ಕೆಲ ಸ್ಮಶಾನಗಳಲ್ಲಿ ಕಳೆ ಸಸ್ಯಗಳು ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದು ನಿರ್ಜನ ಪ್ರದೇಶ ಹಿನ್ನೆಲೆಯಲ್ಲಿ ಕೆಲ ಯುವಕರ ಗುಂಪು ಮಧ್ಯಾಹ್ನದ ವೇಳೆ ಜೂಜಾಟ, ಸಂಜೆಯಾಗುತ್ತಿದ್ದಂತೆ ಮದ್ಯಪಾನ ಮತ್ತಿತರ ಕೃತ್ಯಗಳಿಗೆ ಸ್ಮಶಾನಗಳನ್ನು ಆಶ್ರಯಿಸಿಕೊಂಡಿದ್ದಾರೆ.

ಪುರಸಭೆ ವ್ಯಾಪ್ತಿಯ ಸ್ಮಶಾನಗ ಳಿಗೆ ಮೂಲ ಸೌಲಭ್ಯಕ್ಕಾಗಿ 15ನೇ ಹಣಕಾಸು ಯೋಜನೆಯಡಿ 9 ಲಕ್ಷ ರೂ. ಬಿಡುಗಡೆಯಾಗಿದೆ.  ಕೆಲ ಸ್ಮಶಾನ ದುರಸ್ತಿಗೊಳಿಸಿ ಉಳಿಕೆ ಅನುದಾನ ಬಿಡುಗಡೆಯಾದ ಬಳಿಕ ಸೌಲಭ್ಯ ಕಲ್ಪಿಸಲು ಮುಂದಾಗುವೆ. ಸುರೇಶ್‌ಕುಮಾರ್‌, ಪುರಸಭೆ ಅಧ್ಯಕ್ಷರು.

ಕೆಲ ಸ್ಮಶಾನಗಳು ಹಲವಾರು ವರ್ಷದಿಂದಲೂ ಅದ್ವಾನಗೊಂಡಿವೆ. ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಇತ್ತ ಗಮನಹರಿಸಬೇಕಿದೆ. ಇನ್ನು ಬಿಡುಗಡೆಯಾಗುವ ಅನುದಾನದಲ್ಲಿ ಕುಡಿವ ನೀರು ಚಿತಾಗಾರ, ನೆರಳಿನ ಸೌಲಭ್ಯ ಕಲ್ಪಿಸಬೇಕಿದೆ. ಸಿ.ಎಸ್‌.ಪ್ರಕಾಶ್‌, ಪಟ್ಟಣ ನಿವಾಸಿ  

-ಎಸ್‌.ಪುಟ್ಟಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next