Advertisement
ಆಸ್ಪತ್ರೆಯಲ್ಲಿ ನುರಿತ ತಜ್ಞರಿಲ್ಲ. ಬಡ ರೋಗಿಗಳು ಹೆಚ್ಚಿನ ಸೌಲಭ್ಯಗಳಿಗೆ ಖಾಸಗಿ ಆಸ್ಪತ್ರೆಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ಸಮುದಾಯ ಆರೋಗ್ಯ ಕೇಂದ್ರ ವೃದ್ಧಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿವೆ. ಜಿಲ್ಲಾ ಕೇಂದ್ರದಿಂದ ಸುಮಾರು 65 ಕಿಮೀ ದೂರದಲ್ಲಿದ್ದು, 100 ಹಾಸಿಗೆಗೆ ಮೇಲ್ದರ್ಜೆಗೇರಿದ್ದ ಜಯಚಾಮರಾಜೇಂದ್ರ ಆಸ್ಪತ್ರೆಯ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ತಾಲೂಕು ಆರೋಗ್ಯ ಕೇಂದ್ರದಲ್ಲಿ ಸೌಲಭ್ಯ ಹೆಚ್ಚಿದ್ದರೂ ಕೆಲವು ವಿಭಾಗಗಳಲ್ಲಿ ಸೇವೆ ಸಿಗುತ್ತಿಲ್ಲ. ಅತಿ ಹೆಚ್ಚು ಅವಶ್ಯಕತೆ ಇರುವ ಸ್ಕ್ಯಾನಿಂಗ್ ಸೌಲಭ್ಯ, ರೇಡಿಯಾಲಜಿಸ್ಟ್ ಇಲ್ಲದಿರುವುದರಿಂದ ಖಾಸಗಿ ಆಸ್ಪತ್ರೆ ಮೊರೆ ಹೋಗಬೇಕಾಗಿದೆ. ಉಚಿತ ಚಿಕಿತ್ಸೆಗಾಗಿ ಬಡ ರೋಗಿಗಳು ಆಸ್ಪತ್ರೆಗೆ ಬಂದರೆ ಸ್ಕ್ಯಾನಿಂಗ್ ಇಲ್ಲದ ಕಾರಣ 3- 4 ದಿನ ಖಾಸಗಿ ಆಸ್ಪತ್ರೆ ಬಾಗಿಲು ಕಾಯಬೇಕು. ಈಗಿರುವ ವೈದ್ಯರು ಉತ್ತಮ ಸೇವೆ ಸಲ್ಲಿಸುತ್ತಿದ್ದರು. ಬಹಳಷ್ಟು ಆಂತರಿಕ ಸಮಸ್ಯೆಗಳಿಂದ ಗುಣಮಟ್ಟದ ಔಷಧೋಪಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಸೂತಿಗೆಂದು ಬರುವ ತುಂಬು ಗರ್ಭಿಣಿಯರ ವೇದನೆ ಹೇಳತೀರದಾಗಿದೆ. ತಾಲೂಕು ಆಸ್ಪತ್ರೆಯ ಉತ್ತಮ ಸೇವೆಯನ್ನು ಗಮನಿಸಿ ಶೃಂಗೇರಿ, ಕೊಪ್ಪ, ಹೊಸನಗರ, ಎನ್.ಆರ್. ಪುರ, ಬಾಳೆಹೊನ್ನೂರು ಭಾಗದಿಂದ ಚಿಕಿತ್ಸೆಗೆ ಜನ ಬರುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಶಿವಮೊಗ್ಗ, ಮಣಿಪಾಲಕ್ಕೆ ತೆರಳಬೇಕಾಗಿದೆ.
Related Articles
Advertisement
ಹೊಸ ಸ್ಕ್ಯಾನಿಂಗ್ ಯಂತ್ರ ನೀಡಲು ಅನೇಕ ದಾನಿಗಳು ಸಿದ್ಧರಿದ್ದಾರೆ. ಆದರೆ ವೈದ್ಯರಿಲ್ಲ ಎಂಬ ಕಾರಣಕ್ಕೆ ವಿಭಾಗ ಆರಂಭವಾಗುತ್ತಿಲ್ಲ. ಫಿಜಿಯೋಥೆರಪಿಸ್ಟ್ ಸಹಾಯಕರ ತಜ್ಞರಿಗೆ ಬೇಡಿಕೆ ಇದೆ. ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ, ವಂಕಿಧಾರಣೆ, ನುಂಗುವ ಮಾತ್ರೆ, ನಿರೋಧ್ ಪೂರೈಕೆ, ಕುಷ್ಠರೋಗ, ಹೊಸ ರೋಗಿಗಳ ಪತ್ತೆ, ಕಫ ಪರೀಕ್ಷೆ, ಕ್ಷಯ ರೋಗ ಪತ್ತೆ, ಮಲೇರಿಯಾ, ರಕ್ತ ಪರೀಕ್ಷೆ, ರೋಗ ಪತ್ತೆ, ಡೆಂಘ್ಯೂ, ಇಲಿ ಜ್ವರ, ಕೆಎಫ್‌ಡಿ ರೋಗಕ್ಕೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ವಿಭಾಗ ಅತ್ಯವಶ್ಯಕ. ಸುಮಾರು 2 ಲಕ್ಷ ಜನಸಂಖ್ಯೆಗೆ ಉತ್ತಮ ಆರೋಗ್ಯ ಕೇಂದ್ರ ಲಭ್ಯವಾಗದಂತಾಗಿದೆ.
15 ವರ್ಷಗಳ ಹಿಂದೆ ಸ್ಕ್ಯಾನಿಂಗ್ ಯಂತ್ರ ಪೂರೈಕೆ ಆಗಿದ್ದು, ಪ್ರಸ್ತುತ ಬಳಕೆಯಲ್ಲಿ ಇಲ್ಲ. ತಂತ್ರಜ್ಞರು ನೇಮಕಗೊಂಡರೆ ವಿಭಾಗ ಪ್ರಾರಂಭಿಸಲಾಗುತ್ತದೆ. -ಡಾ| ಗಣೇಶ ಭಟ್, ವೈದ್ಯಾಧಿಕಾರಿ, ಸರ್ಕಾರಿ ಜೆಸಿ ಆಸ್ಪತ್ರೆ
-ಶ್ರೀಕಾಂತ್ ವಿ. ನಾಯಕ್