ಹಿರೇಕೆರೂರ: ಪಟ್ಟಣದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವೈದ್ಯರ ಹಾಗೂ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದ್ದು, ಬಡ ರೋಗಿಗಳು ಪರದಾಡುವಂತಾಗಿದೆ. ಈ ಭಾಗದ ಸಾರ್ವಜನಿಕರಿಗೆ ಅನಕೂಲವಾಗುವಂತಹ ಅತೀ ಪ್ರಮುಖ ವೈದ್ಯರ ಕೊರೆತೆಯಿಂದ ರೋಗಿಗಳು ಬೇರೆಡೆಗೆ ಹೋಗುವ ಅನಿವಾರ್ಯತೆ ಎದುರಾಗಿದೆ.
ಬಡ ಮತ್ತು ಮಧ್ಯಮ ವರ್ಗದ ಜನತೆ ಹೆಚ್ಚಾಗಿರುವ ಈ ಭಾಗದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದಾಗಿ ಬಡ ಜನತೆ ಬೇರೆಡೆಗೆ ಇಲ್ಲವೇ ಖಾಸಗಿ ಆಸ್ಪತ್ರೆಗಳತ್ತ ಮುಖಮಾಡುವಂತಾಗಿದೆ. ಮುಖ್ಯವಾಗಿ ಸ್ತ್ರೀರೋಗ ತಜ್ಞರು ಇಲ್ಲದೇ ಇರುವುದರಿಂದ ಮಹಿಳಾ ರೋಗಿಗಳಿಗೆ ಹೆಚ್ಚು ಅನಾನುಕೂಲವಾಗುತ್ತಿದೆ. ಹೆರಿಗೆ ರೋಗಿಗಳು ಬಂದಾಗ ಪ್ರಸೂತಿ ವೈದ್ಯರು ಇಲ್ಲದ ಕಾರಣ ಕ್ಲಿಸ್ಟಕರ ಹೆರಿಗೆ ರೋಗಿಗಳನ್ನು ಬೇರೆಡೆಗೆ ಕಳುಹಿಸಲಾಗುತ್ತಿದೆ. ಇದರಿಂದ ಬಡ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.
ಅರವಳಿಕೆ ತಜ್ಞರ ಹುದ್ದೆ ಖಾಲಿ ಇರುವುದರಿಂದ ಶಸ್ತ್ರ ಚಿಕಿತ್ಸೆಗೆ ತೊಂದರೆಯಾಗುತ್ತಿದೆ. ಕೀಲು ಮೂಳೆ ತಜ್ಞರು ಇರದ ಕಾರಣ ಸಣ್ಣಪುಟ್ಟ ಚಿಕಿತ್ಸೆಗೆ ಈ ಭಾಗದ ಬಡ ಜನತೆ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಎಲ್ಲ ಸೌಲಭ್ಯಗಳನ್ನು ಹೊಂದಿದ್ದರೂ ನುರಿತ ಮತ್ತು ಪರಿಣಿತಿ ಪಡೆದ ವೈದ್ಯರು ಮತ್ತು ಸಿಬ್ಬಂದಿ ಇರದ ಕಾರಣ ಅದು ನಿರುಪಯುಕ್ತವಾಗಿದೆ. ಸರ್ಕಾರ ಲಕ್ಷಾಂತರ ಹಣ ವ್ಯಯ ಮಾಡಿದ್ದರೂ ಸಾರ್ವಜನಿಕರ ಉಪಯೋಗಕ್ಕೆ ಸಿಗದಂತಾಗಿದೆ.
ಈ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ, ವಿವಿಧ ತಂತ್ರಜ್ಞರು ಸೇರಿದಂತೆ ಒಟ್ಟು 77 ಮಂಜೂರಾತಿ ಹುದ್ದೆಗಳ ಪೈಕಿ 32 ಹುದ್ದೆಗಳು ಭರ್ತಿಯಾಗಿದ್ದು, 45 ಹುದ್ದೆಗಳು ಖಾಲಿ ಇವೆ. ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳು ತಜ್ಞ, ನೇತ್ರ ತಜ್ಞ, ಜನರಲ್ ಸರ್ಜನ್, ಇಎನ್‌ಟಿ ತಜ್ಞ, ಚರ್ಮರೋಗ ತಜ್ಞ, ದಂತ ವೈದ್ಯ, ನೇತ್ರಾಧಿಕಾರಿ, ಹಿರಿಯ ಫಾರ್ಮಾಸಿಸ್ಟ್ ತಲಾ ಒಬ್ಬರಂತೆ ಶುಶ್ರೂಷಕಿ 17, ಕಿ.ಪ್ರ. ತಂತ್ರಜ್ಞ 2, ಕ್ಷ ಕಿರಣ ತಂತ್ರಜ್ಞ 1, ವಾಹನ ಚಾಲಕ 2, ಡ ವರ್ಗ 2, ಸೇರಿದಂತೆ ಒಟ್ಟು 32 ಸಿಬ್ಬಂದಿಯವರು ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯ ವೈದ್ಯಾಧಿಕಾರಿ, ಜನರಲ್ ಸರ್ಜನ್ 1, ಸ್ತ್ರೀರೋಗ ತಜ್ಞರು 1, ಕೀಲು ಮೂಳೆ ತಜ್ಞರು 1, ಜನರಲ್ ಮೆಡಿಶನ್ 1, ಅರವಳಿಕೆ ತಜ್ಞ 1, ಹಿರಿಯ ವೈದ್ಯಾಧಿ ಕಾರಿ 1, ಕಿರಿಯ ವೈದ್ಯಾಧಿ ಕಾರಿ 1, ಪತ್ರಾಂಕಿತ ಸಹಾಯಕ 1, ನರ್ಸಿಂಗ್ ಅಧಿಕ್ಷಕ 1, ಕಚೇರಿ ಅ ಕ್ಷಕ 1, ಪ್ರಥಮ ದರ್ಜೆ ಸಹಾಯಕರು 2, ದ್ವಿತೀಯ ದರ್ಜೆ ಸಹಾಯಕ 1, ಕಿರಿಯ ಮಕ್ಕಳ ಆರೋಗ್ಯ ಸಹಾಯಕಿ 1, ಹಿರಿಯ ಫಾರ್ಮಾಸಿಸ್ಟ್ 1, ಡ ವರ್ಗದ 30 ಹುದ್ದೆಗಳು ಸೇರಿದಂತೆ 45 ವಿವಿಧ ಖಾಯಂ ಹುದ್ದೆಗಳು ಖಾಲಿ ಇವೆ. ಪ್ರಮುಖವಾಗಿ ಸ್ತ್ರೀರೋಗ, ಅರವಳಿಕೆ, ಕೀಲು ಮೂಳೆ ತಜ್ಞರು ಮತ್ತು ಫಿಜಿಶಿಯನ್ ಕೊರತೆಯಿಂದ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಸಿಗುವಲ್ಲಿ ವ್ಯತ್ಯಯವಾಗುತ್ತಿದೆ.
ಲಿಪಿಕ್ ಸಿಬ್ಬಂದಿಯ ಕೊರತೆಯಿಂದ ಆಸ್ಪತ್ರೆಯ ನಿತ್ಯ ಚಟುವಟಕೆಗಳನ್ನು ನಿರ್ವಹಿಸಲು ಮತ್ತು ಸರ್ಕಾರದ ಅನುದಾನ ಸಮರ್ಪಕ ಬಳಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈಗಾಗಲೇ ಒಂದು ಅಂಬ್ಯುಲೆನ್ಸ್ ಇದ್ದು ಇನ್ನೊಂದು ಅಂಬ್ಯುಲೆನ್ಸ್‌ನ ಅವಶ್ಯಕತೆ ಇದೆ. ಆಸ್ಪತ್ರೆಯ ಹಿಂಭಾಗದಲ್ಲಿ ರೋಗಿಗಳಿಗೆ ಅನಕೂಲವಾಗುವಂತೆ ಕ್ಯಾಂಟೀನ್ ಮತ್ತು ಹಾಪ್ ಕಾಮ್ಸ್ ತೆರೆಯಲು ನಾಗರಿಕ ಸೌಲಭ್ಯಗಳ ಸಂಕೀರ್ಣ ನಿರ್ಮಿಸಲಾಗಿದೆ. ಸೌಲಭ್ಯಗಳನ್ನು ಕಲ್ಪಿಸಲು ಎರಡು ಬಾರಿ ಟೆಂಡರ್ ಕರೆಯಲಾಗಿದ್ದು, ಟೆಂಡರ್‌ದಾರರೂ ಭಾಗವಹಿಸದ ಕಾರಣ ನಾಗರಿಕ ಸೌಲಭ್ಯಗಳ ಸಂಕೀರ್ಣ ನಿರುಪಯುಕ್ತವಾಗಿ ಸಾರ್ವಜನಿಕರಿಗೆ ಸಿಗಬೇಕಾಗಿದ್ದ ಸೌಲಭ್ಯಗಳು ಮರೀಚಿಕೆಯಾಗಿವೆ. ಆಸ್ಪತೆಯಲ್ಲಿ ಶಸ್ತ್ರ ಚಿಕಿತ್ಸಾ ಕೊಠಡಿ, ಪ್ರಯೋಗಾಲಯ, ಡಯಾಲಿಸಿಸ್ ಘಟಕ ಇದ್ದು, ಕಿವಿ ಮೂಗು ಮತ್ತು ಜನರಲ್ ಸರ್ಜರಿಗಳನ್ನು ಮಾಡಲಾಗುತ್ತಿದೆ. ಒಟ್ಟಾರೆಯಾಗಿ ವೈದ್ಯರು ಸೇರಿದಂತೆ ಸಮರ್ಪಕ ಸಿಬ್ಬಂದಿಗಳನ್ನು ನೇಮಿಸುವ ಮೂಲಕ ಬಡ ರೋಗಿಗಳಿಗೆ ಅನಕೂಲ ಮಾಡಿಕೊಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಸೆಯಾಗಿದೆ.
ಸಾರ್ವಜನಿಕರ ಆಸ್ಪತೆಯಲ್ಲಿ ವೈದ್ಯರ ಕೊರತೆ ಇದ್ದು, ವೈದ್ಯರನ್ನು ನೇಮಿಸುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರದ ಮುಖೇನ ಮನವಿ ಮಾಡಲಾಗಿದೆ. ಈಗಿರುವ ವೈದ್ಯರು ಮತ್ತು ಸಿಬ್ಬಂದಿಯೊಂದಿಗೆ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯ ನಿರ್ವಹಿಸುತ್ತಿದ್ದೇವೆ. –
ಡಾ| ಹೊನ್ನಪ್ಪ ಜೆ.ಎಂ., ಸಾರ್ವಜನಿಕ ಆಸ್ಪತ್ರೆ ಹಿರೇಕೆರೂರ ಆಡಳಿತಾಧಿ ಕಾರಿ
-ಸಿದ್ಧಲಿಂಗಯ್ಯ ಗೌಡರ್