ಹುಮನಾಬಾದ: ದೈಹಿಕವಾಗಿ ಸದೃಢರಾಗಲು ಮನುಷ್ಯನಿಗೆ ಕ್ರೀಡೆಗಳು ಅವಶ್ಯ ಎಂದು ಅನೇಕರು ಹೇಳುತ್ತಾರೆ. ಆದರೆ ಇಲ್ಲಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸೂಕ್ತ ಕ್ರೀಡಾಂಗಣ ಹಾಗೂ ಸೌಲಭ್ಯಗಳ ಕೊರತೆಯಿಂದಾಗಿ ಕ್ರೀಡೆಗೆ ಗ್ರಹಣ ಹಿಡಿದಂತಾಗಿದೆ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ 12ನೇ ಹಣಕಾಸು ಯೋಜನೆಯಡಿ ಕೆಆರ್‌ಐಡಿಎಲ್ ವತಿಯಿಂದ 42.25 ಲಕ್ಷ ರೂ. ವೆಚ್ಚದಲ್ಲಿ ಮಾಣಿಕನಗರದಲ್ಲಿ ನಿರ್ಮಾಣಗೊಂಡ ಕ್ರೀಡಾಂಗಣದಲ್ಲಿ ಸೌಲಭ್ಯಗಳ ಕೊರತೆ ಇದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಚುನಾಯಿತ ಜನ ಪ್ರತಿನಿಧಿಗಳು, ಅಧಿಕಾರಿಗಳಿಗೆ ಹಿಡಿ ಶಾಪ ಹಾಕುವಂತಾಗಿದೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹಿಂದುಳಿಯುವ ಬೀದರ ಜಿಲ್ಲೆಯ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲೂ ಕೊನೆ ಸ್ಥಾನದಲ್ಲಿದ್ದಾರೆ. ಕಾರಣ ಮೂಲ ಸೌಲಭ್ಯಗಳ ಕೊರತೆ ಎಂಬುದು ದೈಹಿಕ ಶಿಕ್ಷಣ ಶಿಕ್ಷಕರ ಮಾತು. ಹೋಬಳಿ, ವಲಯ, ತಾಲೂಕು, ಜಿಲ್ಲೆ, ವಿಭಾಗೀಯ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಳುವ ಕ್ರೀಡಾಪಟುಗಳು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಸೋಲು ಅನುಭವಿಸುವುದು ಖಚಿತ. ಕಾರಣ ಜಿಲ್ಲೆಯ ಯಾವ ತಾಲೂಕು ಕೇಂದ್ರಗಳಲ್ಲೂ ಕ್ರೀಡೆಗಳ ಪ್ರೋತ್ಸಾಹಕ್ಕೆ ಸೂಕ್ತ ವ್ಯವಸ್ಥೆ ಇಲ್ಲ. ಅಲ್ಲದೇ ಬಹುತೇಕ ಶಾಲೆಗಳಲ್ಲಿ ಆಟದ ಮೈದಾನ ಕೂಡ ಇಲ್ಲ ಎಂಬುವುದು ಶಿಕ್ಷಕರ ಮಾತು. ಈ ಹಿನ್ನೆಲೆಯಲ್ಲಿ ಕ್ರೀಡೆಗಳ ಪ್ರೋತ್ಸಾಹಕ್ಕೆ ಸರ್ಕಾರ ಚಿಂತನೆ ನಡೆಸುವ ಅವಶ್ಯಕತೆ ಇದೆ. ಸೌಕರ್ಯ ಕೊರತೆ: ಪ್ರತಿವರ್ಷ ವಲಯ ಮಟ್ಟ ಹಾಗೂ ತಾಲೂಕು ಮಟ್ಟದ ಕ್ರೀಡಾಕೊಟಗಳು ಮಾಣಿಕ ನಗರದ ಕ್ರೀಡಾಂಗಣದಲ್ಲಿ ನಡೆಯುತ್ತವೆ. ಆದರೆ ಕ್ರೀಡಾಂಗಣದಲ್ಲಿ ಶೌಚಾಲಯ, ಕುಡಿವ ನೀರಿನ ಕೊರತೆ ಇದ್ದು, ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರು ಹೆಚ್ಚು ಸಮಸ್ಯೆ ಎದುರಿಸುವಂತಾಗಿದೆ. ವಲಯ ಮಟ್ಟದ ಕ್ರೀಡೆಗೆ ಸುಮಾರು 500, ತಾಲೂಕು ಮಟ್ಟದ ಕ್ರೀಡೆಗಳಲ್ಲಿ ಸುಮಾರು 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಮಳೆ ಬಂದರೆ ಮಕ್ಕಳು ನಿಲ್ಲಲೂ ಕೂಡ ಛಾವಣಿಯ ವ್ಯವಸ್ಥೆ ಇಲ್ಲಿಲ್ಲ. ಖೋ ಖೋ, ಕಬ್ಬಡಿ, ವಾಲಿಬಾಲ್, ಹಾಕಿ, ಫುಟ್‌ಬಾಲ್, ಬಾಸ್ಕೇಟ್ ಬಾಲ್, ಬ್ಯಾಟ್‌ಮೆಂಟನ್, ಬಾಲ್ ಬ್ಯಾಟಮೀಟನ್, ಟೇಬಲ್ ಟೆನ್ನಿಸ್, ಥ್ರೋಬಾಲ್, ಕುಸ್ತಿ, ಅಥ್ಲೆಟಿಕ್ಸ್, ಯೋಗ, ಚಕ್ರ ಎಸೆತ, ಗುಂಡು ಎಸೆತ, ಎತ್ತರ ಜಿಗಿತ, ಉದ್ದ ಜಿಗಿತ, ಓಟದ ಸ್ಪರ್ಧೆಗಳು ಇಲ್ಲಿ ನಡೆಯುತ್ತವೆ. ಆದರೆ ಕಬ್ಬಡಿ ಸ್ಪರ್ಧೆಗೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಗಾಯಗೊಂಡ ಘಟನೆಗಳು ನಡೆಯುತ್ತಿವೆ. ಬ್ಯಾಟ್ ಮೆಂಟನ್, ಬಾಲ್ ಬ್ಯಾಟಮೀಟನ್ ಆಟಗಳಿಗೆ ಒಳಾಂಗಣ ಕ್ರೀಡಾಂಗಣ ವ್ಯವಸ್ಥೆ ಇಲ್ಲದ ಕಾರಣ ಸೂಕ್ತ ಸೌಲಭ್ಯಗಳಿಲ್ಲದ ಖಾಸಗಿ ಗೋದಾಮಿನಲ್ಲಿ ಆಟ ಆಡಿಸುವ ಅನಿವಾರ್ಯತೆ ಶಿಕ್ಷಕರಿಗೆ ಎದುರಾಗಿದೆ. ಅಲ್ಲದೆ ಭಾಸ್ಕೇಟ್ ಬಾಲ್ ಕ್ರೀಡೆಗಂತೂ ಯಾವುದೇ ಸೌಕರ್ಯ ಇಲ್ಲದ ಕಾರಣ ಯಾವ ಶಾಲೆಯೂ ಈ ಸ್ಪರ್ಧೆಗೆ ಮುಂದಾಗುತ್ತಿಲ್ಲ. ಅನುದಾನ ಕೊರತೆ: ವಿವಿಧ ಹಂತದ ಕ್ರೀಡಾಕೂಟಗಳಿಗೆ ಶಿಕ್ಷಣ ಇಲಾಖೆ ಅಥವಾ ಸರ್ಕಾರದಿಂದ ಸೂಕ್ತ ಪ್ರಮಾಣದ ಅನುದಾನ ದೊರೆಯದ ಕಾರಣ ಶಿಕ್ಷಣ ಇಲಾಖೆ ಖಾಸಗಿ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕ್ರೀಡಾಕೂಟಗಳನ್ನು ಏರ್ಪಡಿಸುವ ಸ್ಥಿತಿ ನಿರ್ಮಾಣಗೊಂಡಿದೆ. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಸಾವಿರಾರೂ ರೂ. ಖರ್ಚು ಮಾಡಿ ಕ್ರೀಡಾಕೂಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಶಾಲೆಗಳಿಂದ ವಸೂಲಿ ಮಾಡುವ ಕ್ರೀಡಾ ನಿಧಿ ಹಣವನ್ನು ಕ್ರೀಡೆಗೆ ಬರುವ ಕ್ರೀಡಾಪಟು ಹಾಗೂ ಮೇಲ್ವಿಚಾರಕರಿಗೆ ನೀಡಲು ಬಳಸಲಾಗುತ್ತಿದೆ ಎಂದು ದೈಹಿಕ ಶಿಕ್ಷಕರು ತಿಳಿಸಿದ್ದು, ಕ್ರೀಡೆಗಳ ಪ್ರೋತ್ಸಾಹಕ್ಕೆ ಸರ್ಕಾರ ವಿಶೇಷ ಅನುದಾನ ನೀಡುವ ಕುರಿತು ಚಿಂತನೆ ನಡೆಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ
ದುರ್ಯೋಧನ ಹೂಗಾರ