Advertisement

ಶೌಚ ಗೃಹ ಇಲ್ಲದ ಸ್ಥಳದಲ್ಲಿ ಜನರ ಕ್ವಾರಂಟೈನ್‌!

05:46 AM May 22, 2020 | Suhan S |

ಸೇಡಂ: ಇಲಿಗೆ ಹೆದರಿ ಹುಲಿ ಬೋನಿಗೆ ಬಿದ್ದಂತಾಗಿದೆ ತಾಲೂಕಿನ ಕೋವಿಡ್‌-19 ಕ್ವಾರಂಟೈನ್‌ ಕೇಂದ್ರದಲ್ಲಿರುವ ಜನರ ಬದುಕು. ಹೌದು. ಹೊರ ರಾಜ್ಯಕ್ಕೆ ಕೂಲಿ ಅರಸಿ ಹೋಗಿದ್ದವರು ಈಗ ಕೋ ಮಹಾಮಾರಿಗೆ ಹೆದರಿ ತವರಿಗೆ ಬಂದಿದ್ದು, ಅವರಲ್ಲಿ ಸಂತಸಕ್ಕಿಂತ ಅಸೂಯೆ ಮನೆ ಮಾಡಿದೆ. ಹೊಟ್ಟೆಗೆ ಅನ್ನ, ನೀರು ಹಾಕುವ ಸರ್ಕಾರ ಶೌಚಕ್ಕೆ ವ್ಯವಸ್ಥೆ ಮಾಡುವಲ್ಲಿ ಎಡವಿರುವುದು ತಾಲೂಕಿನಲ್ಲಿರುವ ಬಹುತೇಕ ಕ್ವಾರಂಟೈನ್‌ ಕೇಂದ್ರಕ್ಕೇ ಭೇಟಿ ನೀಡಿದರೆ ಅರಿವಾಗುತ್ತದೆ.

Advertisement

ತಾಲೂಕಿನಾದ್ಯಂತ 53 ಕ್ವಾರಂಟೈನ್‌ ಕೇಂದ್ರಗಳಲ್ಲಿ 1,523 ಜನರನ್ನು ಇರಿಸಲಾಗಿದೆ. ಆದರೆ ಬಹುತೇಕ ಕೇಂದ್ರಗಳಲ್ಲಿ ಶೌಚಾಲಯಗಳ ಕೊರತೆ ಇದೆ. ಹೆಚ್ಚಿನ ಜನರನ್ನು ಕ್ವಾರಂಟೈನ್‌  ಮಾಡಿರುವ ಮುಧೋಳ, ಮೋತಕಪಲ್ಲಿ, ಕೋಡ್ಲಾ, ದುಗನೂರು ಇನ್ನುಳಿದ ಕಡೆ ಸೂಕ್ತ ಶೌಚಾಲಯಗಳಿಲ್ಲದೆ ಜನರ ಅಕ್ಕ-ಪಕ್ಕದ ಜಮೀನುಗಳನ್ನು ಅವಲಂಬಿಸಿದ್ದಾರೆ.

ಹಗಲಲ್ಲೇ ಬಯಲಿಗೆ ಹೋಗಲಾಗದ ಮಹಿಳೆಯರು ಬಾಟಲಿಗಳಲ್ಲಿ ಮೂತ್ರ ಮಾಡಿ ಎಸೆಯುವ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಇಷ್ಟಾದರೂ ಸಹ ತಾಲೂಕು ಆಡಳಿತ ಜಾಣಕುರುಡುತನ ಪ್ರದರ್ಶಿಸುತ್ತಿದೆ ಎಂಬುದು ಅಲ್ಲಿರುವ ಜನರ ಆರೋಪ. ದುಗನೂರು ಪ್ರೌಢಶಾಲೆಯಲ್ಲಿರುವ ಶೌಚಾಲಯ ನಾಮಕೆವಾಸ್ತೆ ಎಂಬಂತಿವೆ. ಅಳಿದುಳಿದ ಶೌಚಾಲಯ ಕಟ್ಟಡಕ್ಕೆ ಬಾಗಿಲುಗಳಿಲ್ಲ. ಪ್ರಚಾರಕ್ಕೆ ಬಳಸುವ ಫ್ಲೆಕ್ಸ್‌ಗಳನ್ನು ಪರದೆ ರೀತಿಯಲ್ಲಿ ಕಟ್ಟಿ ಶೌಚಾಲಯ ಬಳಸುವಂತಾಗಿದೆ. ಮೋತಕಪಲ್ಲಿಯಲ್ಲಿರುವ ಕೇಂದ್ರಗಳ ಪೈಕಿ ಒಂದರಲ್ಲಿ ಶೌಚಾಲಯವಿದೆ. ಆದರೆ ಬಳಕೆಗೆ ಯೋಗ್ಯವಿಲ್ಲ. ಇನ್ನೊಂದರಲ್ಲಿ ಹತ್ತಾರು ಜನರಿಗೆ ಎರಡು ಶೌಚಗೃಹಗಳಿವೆ. ಕೋಣೆಗಳಲ್ಲಿ ಫ್ಯಾನ್‌ ವ್ಯವಸ್ಥೆ ಇಲ್ಲದ ಪರಿಣಾಮ ಮಹಿಳೆಯರು ರಾತ್ರಿ ಹೋರಾಂಗಣದಲ್ಲೇ ನಿದ್ರಿಸುವಂತಾಗಿದೆ.

100ಕ್ಕೂ ಅಧಿಕ ಜನರಿರುವ ಮುಧೋಳ ಗ್ರಾಮದ 6 ಕೇಂದ್ರಗಳ ಪೈಕಿ ಮೂರರಲ್ಲಿ ಶೌಚಾಲಯಗಳಿಲ್ಲ. ಇರುವ ಹೊಸ ಶೌಚಾಲಯಗಳು ಲಾಕ್‌ ಮಾಡಲಾಗಿದೆ. ಜೊತೆಗೆ ಸಂಜೆಯಾದರೆ ಗ್ರಾಮದ ನೂರಾರು ಜನ ಕ್ವಾರಂಟೈನ್‌ ನಲ್ಲಿರುವವರನ್ನು ಭೇಟಿಯಾಗಿ, ಆಹಾರ ತಂದು ಕೊಡುತ್ತಿದ್ದಾರೆ. ಪೊಲೀಸ್‌ ಠಾಣೆ ಪಕ್ಕದಲ್ಲೇ ಕೇಂದ್ರವಿದ್ದರೂ ಈ ರೀತಿ ಕಾನೂನು ಉಲ್ಲಂಘನೆಯಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು. ಇನ್ನು ಬಹುತೇಕ ಕೇಂದ್ರಗಳಿಗೆ ನಿತ್ಯ ಹೊರಗಿನವರು ಬಂದು ಭೇಟಿ ನೀಡುವುದು ಸಾಮಾನ್ಯ ಎನ್ನಲಾಗಿದೆ.

ಶೌಚಾಲಯಗಳಿಲ್ಲದ ಕ್ವಾರಂಟೈನ್‌ ಕೇಂದ್ರಗಳನ್ನು ಗುರುತಿಸುವುದರ ಜತೆಗೆ ಇದ್ದ ಶೌಚಗೃಹಗಳ ದುರಸ್ತಿ ಕಾರ್ಯ ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜನರಿಗೆ ಸಮಸ್ಯೆಯಾಗದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾವು ಸಹ ಅನೇಕ ಕೇಂದ್ರಗಳನ್ನು ವೀಕ್ಷಿಸಿದ್ದೇವೆ. –ಬಸವರಾಜ ಬೆಣ್ಣೆಶಿರೂರ, ಸೇಡಂ ತಹಶೀಲ್ದಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next