ಚಿಕ್ಕಬಳ್ಳಾಪುರ: ಜಿಲ್ಲೆಯ ಜನರ ಪಾಲಿಗೆ ಕೋವಿಡ್ 19 ಸಂಕಷ್ಟ ಒಂದೆಡೆಯಾದರೆ, ಮತ್ತೂಂದೆಡೆ ದಿನದಿಂದ ದಿನಕ್ಕೆ ದಾಹ ತಣಿಸುವ ಕುಡಿಯುವ ನೀರಿಗೂ ತೀವ್ರ ಸಂಕಷ್ಟ ಎದುರಾಗಿದೆ. ಬೇಸಿಗೆ ಆರಂಭದಲ್ಲಿ ಜಿಲ್ಲಾದ್ಯಂತ ನೀರಿನ ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆ 150 ದಾಟಿದೆ.
ಕೆಲ ದಿನಗಳ ಹಿಂದೆ 70 ರಿಂದ 80 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು ಒಂದೇ ತಿಂಗಳಲ್ಲಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಇರುವ ಗ್ರಾಮಗಳು ಈಗ 80 ಗ್ರಾಮಗಳು ಹೆಚ್ಚಾಗಿದ್ದು, ಕೋವಿಡ್ 19 ತಡೆಯುವುದರ ಜೊತೆಗೆ ಈಗ ಜನರಿಗೆ ಅಗತ್ಯ ನೀರು ದಕ್ಕಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ.
ಬತ್ತಿ ಹೋಗಿರುವ ಕೊಳವೆಬಾವಿ: ಜಿಲ್ಲೆಯಲ್ಲಿ ಬೇಸಿಗೆ ಆರಂಭ ಗೊಂಡಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಮೂಲ ಆಸರೆ ಆಗಿರುವ ಕೊಳವೆ ಬಾವಿಗಳು ಒಂದೆಡೆ ಬತ್ತಿ ಹೋಗುತ್ತಿದ್ದರೆ, ಮತ್ತೂಂದೆಡೆ ಕೆರೆ, ಕುಂಟೆಗಳಲ್ಲಿ ಹಾಗೂ ಜಲಾಶಯಗಳಲ್ಲಿ ನೀರು ಖಾಲಿಯಾಗಿ ಬರಿದಾಗುತ್ತಿರುವುದು ಕುಡಿಯುವ ನೀರಿನ ಬೇಗುದಿ ಹೆಚ್ಚಿಸಿದೆ.
ಅಸಹಾಯಕತೆ: ಜಿಲ್ಲೆಯಲ್ಲಿ 153 ಗ್ರಾಮಗಳಲ್ಲಿ ಸದ್ಯಕ್ಕೆ ಕುಡಿಯುವ ನೀರಿಗೆ ಬರ ಇದ್ದು, ಒಂದೆರೆಡು ತಿಂಗಳಲ್ಲಿ 400 ರಿಂದ 500ಕ್ಕೆ ಏರಿಕೆ ಆಗುವ ಆತಂಕ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಕೆಲವು ಕಡೆ ಕೊರೊನಾ ಸೋಂಕು ಹರಡುವ ಭೀತಿಯಿಂದ ಟ್ಯಾಂಕರ್ ನೀರು ಸರಬರಾಜಿಗೆ ಮುಂದೆ ಬರುತ್ತಿಲ್ಲ. ಬಂದರೆ ಸಾವಿರಾರು ರೂ. ಬಾಡಿಗೆ ಕೇಳುತ್ತಾರೆಂದು ಅಧಿಕಾರಿಗಳು ಅಸಹಾಯ ಕತೆ ವ್ಯಕ್ತಪಡಿಸುತ್ತಿದ್ದಾರೆ. ಕೋವಿಡ್ 19 ಸೋಂಕು ಜಿಲ್ಲಾದ್ಯಂತ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳ ಅರಿವು ಮೂಡಿಸುವ ಕಾರ್ಯದಲ್ಲಿ ಅಧಿಕಾರಿ ಗಳು ತೊಡಗಿದ್ದಾರೆ. ಆದರೆ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ದಿಸೆಯಲ್ಲಿ ಕಾಳಜಿ ವಹಿಸುತ್ತಿಲ್ಲ ಎಂಬ ಆರೋಪ ನಾಗರಿಕರಿಂದ ಕೇಳಿ ಬರುತ್ತಿದೆ.
ಜಿಲ್ಲೆಯಲ್ಲಿ ಸದ್ಯಕ್ಕೆ 150 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೆಲವು ಕಡೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜಿಗೆ ಯಾರು ಮುಂದೆ ಬರುತ್ತಿಲ್ಲ. ಹೊಸ ಕೊಳವೆ ಬಾವಿಗಳನ್ನು ಕೊರೆಸಲಿಕ್ಕೆ ಬೋರ್‌ವೆಲ್ ಕೂಲಿ ಕಾರ್ಮಿಕರು ಸಿಗುತ್ತಿಲ್ಲ.
– ಶಿವಕುಮಾರ್ ಲಾಕೋರ್, ಇಇ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ
–ಕಾಗತಿ ನಾಗರಾಜಪ್ಪ