ಮುಂಬೈ: ಶ್ರಮಿಕರ ಬಗ್ಗೆ, ಕೆಲಸದ ಬಗ್ಗೆ ಗೌರವವಿಲ್ಲದಿರುವುದೇ ದೇಶದಲ್ಲಿ ನಿರುದ್ಯೋಗವಿರುವುದಕ್ಕೆ ಕಾರಣ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜನರು ಉದ್ಯೋಗ ಹುಡುಕಿಕೊಂಡು ವಿವಿಧ ಕಂಪನಿಗಳಿಗೆ ಅರ್ಜಿ ಹಾಕುವುದನ್ನು ಬಿಡಬೇಕು. ಯಾವುದೇ ಕೆಲಸ ದೊಡ್ಡದು, ಸಣ್ಣದು ಎಂದು ಪಟ್ಟಿ ಹಚ್ಚಬಾರದು ಎಂದರು.
ನೀವು ಯಾವುದೇ ಕೆಲಸ ಮಾಡಿ, ಅದನ್ನು ಗೌರವಿಸಬೇಕು. ಆ ಗೌರವವಿಲ್ಲದಿರುವುದೇ ಇವತ್ತಿನ ಪರಿಸ್ಥಿತಿಗೆ ಕಾರಣ. ಕೆಲವೊಂದು ಕೆಲಸಗಳಿಗೆ ದೈಹಿಕ ಶ್ರಮ, ಇನ್ನು ಕೆಲವಕ್ಕೆ ಬುದ್ಧಿಶಕ್ತಿ ಬೇಕಾಗುತ್ತದೆ. ಕೆಲವುಕಡೆ ಕಠಿಣ ಪರಿಶ್ರಮ ಹಾಕಬೇಕಾಗುತ್ತದೆ, ಕೆಲವು ಕಡೆ ಮಾಮೂಲಿ ಕೌಶಲಗಳು ಸಾಕಾಗುತ್ತವೆ. ಅದೇನೆ ಇರಲಿ ಎಲ್ಲವನ್ನೂ ಗೌರವಿಸಬೇಕು. ಈಗ ಎಲ್ಲರೂ ಉದ್ಯೋಗದ ಹಿಂದೆ ಬಿದ್ದಿದ್ದಾರೆ.
ಸರ್ಕಾರ ಶೇ. 10, ಖಾಸಗಿ ವಲಯ ಶೇ.20ರಷ್ಟು ಉದ್ಯೋಗ ಸೃಷ್ಟಿಸಬಲ್ಲದು. ಇದಕ್ಕಿಂತ ಹೆಚ್ಚನ್ನು ಇಡೀ ಜಗತ್ತಿನಲ್ಲಿ ಎಲ್ಲೂ ಸೃಷ್ಟಿಸಲು ಸಾಧ್ಯವಿಲ್ಲ ಎಂದರು.
ಒಬ್ಬ ವ್ಯಕ್ತಿ ತನ್ನ ಜೀವನಕ್ಕಾಗಿ ದುಡಿಯುತ್ತಿದ್ದಾನೆ ಎಂದರೆ ಆತ ಸಮಾಜದ ಬಗ್ಗೆ ಕಾಳಜಿ ವಹಿಸಲೇಬೇಕಾಗುತ್ತದೆ. ಪ್ರತಿಯೊಬ್ಬರೂ ಸಮಾಜಕ್ಕಾಗಿಯೇ ಕೆಲಸ ಮಾಡುವಾಗ ಯಾವುದೇ ಆದರೂ ಹೇಗೆ ದೊಡ್ಡದು, ಚಿಕ್ಕದು ಆಗಲು ಸಾಧ್ಯ ಎಂದು ಭಾಗವತ್ ಪ್ರಶ್ನಿಸಿದ್ದಾರೆ.