ಗಂಗಾವತಿ: ತಾಲೂಕು ಪಂಚಾಯತ್‌ಗೆ ಕಾಯಂ ಕಾರ್ಯನಿರ್ವಾಹಕ ಅಧಿಕಾರಿ ಇಲ್ಲದೇ ಸರಕಾರದ ಹಲವು ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದು, ಪ್ರಭಾರಿ ಅಧಿಕಾರಿಗಳಿಂದ ನಿರೀಕ್ಷಿತ ಕಾರ್ಯವಾಗುತ್ತಿಲ್ಲ. ಇದರಿಂದ ಸರಕಾರ ಮಹತ್ವಾಕಾಂಕ್ಷಿ ಯೋಜನೆಗಳು ನನೆಗುದಿಗೆ ಬಿದ್ದಿವೆ.
ಎರಡು ವರ್ಷಗಳ ಹಿಂದೆ ತಾಪಂ ಇಒ ಆಗಿದ್ದ ವೆಂಕೋಬಪ್ಪ ಎಂಬ ಅಧಿಕಾರಿಯನ್ನು ವರ್ಗಾವಣೆ ಮಾಡಿದ ನಂತರ ಪೂರ್ಣಾವಧಿಗೆ ಇಬ್ಬರು ಇಒಗಳು ಬಂದರೂ ಸರಿಯಾಗಿ ಆರು ತಿಂಗಳು ಕಾರ್ಯ ನಿರ್ವಹಿಸದೇ ವರ್ಗಾವಣೆಗೊಂಡಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಕುಡಿಯವ ನೀರು ಉದ್ಯೋಗಖಾತ್ರಿ ಯೋಜನೆ ಅನುಷ್ಠಾನ ಶೌಚಾಲಯ ನಿರ್ಮಾಣದಂತಹ ಮಹತ್ವದ ಯೋಜನೆಗಳು ಕುಂಠಿತಗೊಂಡಿವೆ. ಇಡೀ ತಾಲೂಕಿನ ಹಲವು ಅನುದಾನ ಮತ್ತು ಕೆಲ ಇಲಾಖೆಗೆ ಸಿಬ್ಬಂದಿ ವೇತನ ಇಒ ಅವರ ರುಜುವಿನಲ್ಲಿ ಆಗಬೇಕಾಗಿದ್ದು ಪ್ರತಿ 6 ತಿಂಗಳಿಗೊಮ್ಮೆ ಇಒ ಬದಲಾವಣೆಯಿಂದ ಖಜಾನೆ ಇಲಾಖೆ ಮತ್ತು ತಾಪಂ ಬ್ಯಾಂಕ್ ಖಾತೆಯಲ್ಲಿ ಇಒ ಸಹಿ ಗುರುತು ಪದೇ ಪದೆ ಬದಲಾವಣೆ ಮಾಡುತ್ತಿರುವುದರಿಂದ ಕಿರಿಕಿರಿಯುಂಟಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಿಂದ ಪ್ರತಿ ತಾಪಂ ಇಒ ಅವರಿಗೆ ನೀಡಲಾಗುವ ಡೊಂಗಲ್ ಮಿಷನ್ ವಿತರಣೆ ಮಾಡಲಾಗು ತ್ತದೆ. ಪ್ರತಿ 6 ತಿಂಗಳಿಗೊಬ್ಬ ಇಒ ಬದಲಾವಣೆ ಯಿಂದ ಡೊಂಗಲ್ ಮಿಷನ್ ವಿತರಣೆ ವಿಳಂಬವಾಗುತ್ತಿದೆ.
ಅಭಿವೃದ್ಧಿ ಕಾರ್ಯ ಕುಂಠಿತ: ತಾಪಂಗೆ ಖಾಯಂ ಇಒ ಇಲ್ಲದೇ ಇರುವುದರಿಂದ ಗ್ರಾಮೀಣ ಭಾಗದ ಗ್ರಾಪಂ.ಆಡಳಿತಕ್ಕೆ ತೊಂದರೆಯಾಗಿದೆ. ತಾಪಂ ಇಒ ಅವರು ಪಿಡಿಒಗಳ ಮೇಲುಸ್ತುವಾರಿಯಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಗಂಗಾವತಿ ಅಖಂಡ ತಾಲೂಕಿನಲ್ಲಿ 42 ಗ್ರಾಪಂಗಳಿದ್ದು ಕುಡಿಯುವ ನೀರು, ಗ್ರಾಮಸಭೆ, ಮಹಾತ್ಮ ಗಾಂಧಿ ಉದ್ಯೋಗಖಾತ್ರಿ ಯೋಜನೆ ಅನುಷ್ಠಾನ ವೈಯಕ್ತಿಕ ಶೌಚಾಲಯ ನಿರ್ಮಾಣ, ಮನೆಗಳ ಖಾತಾ ಮ್ಯುಟೇಶನ್ ಸೇರಿ ಶಿಕ್ಷಣ, ಮಹಿಳಾ ಮಕ್ಕಳ ಕಲ್ಯಾಣ ಕೃಷಿ, ತೋಟಗಾರಿಕೆ ಸೇರಿ ಹಲವು ಇಲಾಖೆ ಪ್ರತಿ ವರ್ಷದ ಬಜೆಟ್ ಮಾಡುವುದು ವೇತನ ಬಿಲ್ ಮಾಡುವ ಕಾರ್ಯವನ್ನು ಇಒ ಅವರು ಮಾಡಬೇಕಾಗುತ್ತದೆ. ತಾಪಂ ಕೆಡಿಪಿ ಸಭೆ, ಸಾಮಾನ್ಯ ಸಭೆ ಕರೆದು ತಾಲೂಕಿನಲ್ಲಿ ಕೈಗೊಳ್ಳಬೇಕಾಗಿರುವ ಅಭಿ ವೃದ್ಧಿ ಕಾರ್ಯಗಳನ್ನು ಕುರಿತು ಚರ್ಚೆ ಮಾಡ ಬೇಕಾಗಿದ್ದು ಖಾಯಂ ಇಒ ಅಧಿಕಾರಿಗಳಿದ್ದರೆ ಅನುಕೂಲವಾಗುತ್ತದೆ.
ನೂತನ ತಾಪಂ ರಚನೆ ವಿಳಂಬ: ಕನಕಗಿರಿ, ಕಾರಟಗಿ ಪ್ರತ್ಯೇಕ ತಾಲೂಕುಗಳಾಗಿದ್ದು, ಗಂಗಾವತಿ ತಾಪಂನಿಂದ ವಿಭಜಿಸಿ ಪ್ರತ್ಯೇಕ ತಾಪಂ ರಚನೆ ಮಾಡಲು ಹಲವು ದಾಖಲೆ ಸೇರಿ ಅಗತ್ಯ ಮಾಹಿತಿ ಸರಕಾರಕ್ಕೆ ರವಾನೆ ಮಾಡಬೇಕಿದೆ. ಪದೇ ಪದೇ ಇಒ ವರ್ಗಾವಣೆಯಿಂದ ಪ್ರತ್ಯೇಕ ತಾಪಂ ರಚನೆ ಕಾರ್ಯ ವಿಳಂಬವಾಗುತ್ತಿದೆ. ಗಂಗಾವತಿ ತಾಪಂ ವ್ಯಾಪ್ತಿಗೆ ಗಂಗಾವತಿ ಮತ್ತು ಕನಕಗಿರಿ ವಿಧಾನಸಭಾ ಕ್ಷೇತ್ರಗಳು ಬರುತ್ತಿದ್ದು, ಶಾಸಕರು ಮತ್ತು ಅವರ ಬೆಂಬಲಿಗರು ಹಲವು ಕೆಲಸಗಳ ಒತ್ತಡಕ್ಕೆ ಹೆದರಿ ಗಂಗಾವತಿ ಇಒ ಆಗಿ ಕಾರ್ಯನಿರ್ವಹಿಸಲು ಹಲವು ಇಒಗಳು ಹಿಂದೇಟು ಹಾಕುತ್ತಿದ್ದಾರೆ. ತಾಲೂಕಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಅನುಷ್ಠಾನವಾಗಲು ಖಾಯಂ ಆಗಿ ಇಒ ಒಬ್ಬರ ಅಗತ್ಯವಿದೆ. ಪ್ರಭಾರಿ ಇಒಗಳಿಂದ ಕೆಲಸಗಳ ನಿರೀಕ್ಷೆ ಮಾಡಲಾಗದು.