ದೋಟಿಹಾಳ: ಶೈಕ್ಷಣಿಕ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸರ್ವ ಶಿಕ್ಷಣ ಅಭಿಯಾನ, ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ವಿವಿಧ ಯೋಜನೆ ಜಾರಿಗೆ ತಂದಿವೆ.
ಆದರೆ ಹುಲಸಗೇರಿ ಪ್ರಾಥಮಿಕ ಶಾಲೆ ಮಾತ್ರ ಸೌಲಭ್ಯವಿಲ್ಲದೇ ಬಳಲುತ್ತಿದೆ. ಹುಲಸಗೇರಿ ಸರಕಾರಿ ಪ್ರಾಥಮಿಕ ಶಾಲೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಸರಿಯಾದ ಅಡುಗೆ ಕೊಠಡಿಯಿಲ್ಲ. ಸಿಲಿಂಡರ್ ಕೊರತೆಯಿಂದ ಬಿಸಿಯೂಟ ಸಮಸ್ಯೆ ಹೇಳ ತೀರದಾಗಿದೆ.
ಸಿಲಿಂಡರ್ ಬದಲು ಕಟ್ಟಿಗೆ: ಹುಲಸಗೇರಿ ಸರಕಾರಿ ಪ್ರಾಥಮಿಕ ಶಾಲೆಯ 199 ವಿದ್ಯಾರ್ಥಿಗಳಿಗೆ ಬಿಸಿಯೂಟ ತಯಾರಿಸಲು ಅವಶ್ಯಕ ಸಿಲಿಂಡರ್‌ಗಳೇ ಇಲ್ಲದಾಗಿವೆ. ಬಿಸಿಯೂಟ ಪ್ರಾರಂಭವಾಗುವ ವೇಳೆ ಇಲಾಖೆ ಪೂರೈಸಿದ ಎರಡು ಸಿಲಿಂಡರ್ ಮಾತ್ರ. ಆದರೆ ಸರಕಾರದ ನಿಯಮದ ಪ್ರಕಾರ ಬಿಸಿಯೂಟ ಆರಂಭದಿಂದ ಇಲ್ಲಿಯವರಗೆ ಶಾಲೆಗೆ ತಿಂಗಳಿಗೆ 6 ಸಿಲಿಂಡರ್ ಪೂರೈಕೆಯಾಗುತ್ತಿವೆ ಎಂದು ಹೇಳಿದರೂ ಇದರಲ್ಲಿ ಕೇವಲ ಎರಡು ಸಿಲಿಂಡರ್ ಮಾತ್ರ ಪೂರೈಕೆಯಾಗುತ್ತಿದ್ದು, ಉಳಿದ ನಾಲ್ಕು ಸಿಲಿಂಡರಗಳ ಬಗ್ಗೆ ಮಾಹಿತಿ ಇಲ್ಲ. ಇದರ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ತಿಂಗಳಿಗೆ ಕೇವಲ ಎರಡು ಸಿಲಿಂಡರ್‌ಗಳಲ್ಲಿ ಮಕ್ಕಳಿಗೆ ಅಡುಗೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಬಿಸಿಯೂಟದ ತಯಾರಿಕೆಗೆ ಪರ್ಯಾಯವಾಗಿ ಕಟ್ಟಿಗೆ ಉಪಯೋಗಿಸಲಾಗುತ್ತಿದೆ ಬಿಸಿಯೂಟ ತಯಾರಕರು ತಿಳಿಸಿದರು.
ಶಾಲಾ ಆವರಣದಲ್ಲಿ ಅಡುಗೆ: ಸರಿಯಾದ ಬಿಸಿಯೂಟ ತಯಾರಿಸಲು ಅಡುಗೆ ಕೊಠಡಿ ಇಲ್ಲದ ಕಾರಣ ಸುಮಾರು ವರ್ಷಗಳಿಂದ ಈ ಶಾಲೆಯಲ್ಲಿ ಹೊರಗಡೆ ಬಿಸಿಯೂಟದ ಅಡುಗೆ ಮಾಡುತ್ತಿದ್ದಾರೆ. ಶಾಲಾವರಣದಲ್ಲಿ ಸಾಕಷ್ಟು ಜಾಗವಿದ್ದರೂ ಅಡುಗೆ ಕೊಠಡಿ ನಿರ್ಮಾಣ ಮಾಡದಿರುವುದು ಕಂಡು ಬರುತ್ತಿದೆ. ಮಳೆಗಾಲದಲ್ಲಿ ಮಳೆ ಬಂದಾಗ ಸಣ್ಣ ಕೊಠಡಿಯಲ್ಲಿ ಅಡುಗೆ ಮಾಡಬೇಕು. ಇದರಿಂದಮಕ್ಕಳಿಗೆ ಸರಿಯಾದ ಸಮಯಕ್ಕೆ ಅಡುಗೆ ಮಾಡಲು ತೊಂದರೆಯಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಒಂದು ಅಡುಗೆ ಕೊಠಡಿ ನಿರ್ಮಿಸಲು ಕ್ರಮ ಕೈಗೊಳ್ಳಬೇಕಿದೆ.
ಬಿಸಿಯೂಟ ಆರಂಭದಿಂದ ಇಲ್ಲಿಯವರೆಗೂ ಶಾಲೆಗೆ ಕೇವಲ ಎರಡು ಸಿಲಿಂಡರ್ ಮಾತ್ರ ಪೂರೈಕೆಯಾಗಿವೆ. ಉಳಿದ ನಾಲ್ಕು ಸಿಲಿಂಡರ್ ಗಳ ಬಗ್ಗೆ ಮಾಹಿತಿ ಇಲ್ಲ. ಇದರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ.-
ಕಳಕಮಲ್ಲೇಶ್ವರ, ಶಾಲಾ ಮುಖ್ಯೋಪಾಧ್ಯಾಯರು.
-ಮಲ್ಲಿಕಾರ್ಜುನ ಮೆದಿಕೇರಿ