Advertisement

ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆ ನಡುವೆ ಸಮನ್ವಯ ಕೊರತೆ: ಶ್ರೀರಾಮುಲು ಬೇಸರ

10:08 AM Nov 07, 2019 | Sriram |

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ನಡುವೆ ವೇತನ ತಾರತಮ್ಯ ಮತ್ತು ಸಮನ್ವಯದ ಕೊರತೆ ಇದ್ದು, ಇದರ ಪರಿಣಾಮ ರೋಗಿಗಳ ಮೇಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀ ರಾಮುಲು ಬೇಸರ ವ್ಯಕ್ತಪಡಿಸಿದರು.

Advertisement

ಬೆಂಗಳೂರು ಮೆಡಿಕಲ್‌ ಕಾಲೇಜಿನಲ್ಲಿ ಬುಧವಾರ ನಡೆದ 2018-19 ನೇ ಸಾಲಿನ “ಕಾಯಕಲ್ಪ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಒಂದು ಸಚಿವ ಸ್ಥಾನ ಹೆಚ್ಚಿಸಲೆಂದು ಸರಕಾರಗಳು ತೆಗೆದುಕೊಂಡ ನಿರ್ಧಾರದಿಂದ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಬೇರೆ ಬೇರೆ ಎಂಬಂತಾಗಿವೆ. ಆದರೆ ವಿವಿಧ ಜಿಲ್ಲಾಸ್ಪತ್ರೆಗಳನ್ನು ಆಯಾ ಜಿಲ್ಲೆಗಳ ವೈದ್ಯಕೀಯ ಕಾಲೇಜುಗಳ ಜತೆ ಸೇರಿಸಲಾಗಿದೆ. ಜಿಲ್ಲಾಸ್ಪತ್ರೆಗಳಲ್ಲಿ ಒಂದೇ ಕಡೆ ಕೆಲಸ ಮಾಡುವ ಆರೋಗ್ಯ ಇಲಾಖೆ ಸಿಬಂದಿ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಮೆಡಿಕಲ್‌ ಕಾಲೇಜು ಸಿಬಂದಿ ನಡುವೆ ಸಾಕಷ್ಟು ವೇತನ ತಾರತಮ್ಯ ಇದೆ. ಈ ರೀತಿ ತಾರತಮ್ಯದಿಂದ ವೈದ್ಯರು ಮತ್ತು ಸಿಬಂದಿಯಲ್ಲಿ ಭಾರತ-ಪಾಕಿಸ್ಥಾನದ ಹಾಗೆ ಕಂದಕ ಸೃಷ್ಟಿಯಾಗುತ್ತಿದೆ. ಇದರ ನೇರ ಪರಿಣಾಮ ರೋಗಿಗಳ ಮೇಲಾಗುತ್ತಿದೆ. ವೈದ್ಯಕೀಯ ಕಾಲೇಜು ಡೀನ್‌ಗಳು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯಾಗುತ್ತಿದ್ದು, ಇದರಿಂದ ಆರೋಗ್ಯ ಕಾರ್ಯಕ್ರಮಗಳ ಜಾರಿಗೆ ಸಮಸ್ಯೆಯಾಗುತ್ತಿದೆ ಎಂದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 2,500 ಕೋ. ರೂ.ಬಿಡುಗಡೆಯಾಗಿದೆ. ಇದರಲ್ಲಿ ಈವರೆಗೆ ಶೇ. 30ರಷ್ಟು ಅನುದಾನ ಮಾತ್ರ ಖರ್ಚಾಗಿದೆ. ಮುಂದಿನ ನಾಲ್ಕು ತಿಂಗಳುಗಳಲ್ಲಿ ಬಾಕಿ ಅನುದಾನ ಬಳಸಿ ಗುಣಮಟ್ಟದ ಆರೋಗ್ಯ ಸೇವೆ ಮತ್ತು ವ್ಯವಸ್ಥೆ ಸುಧಾರಣೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಜತೆಗೆ ಆರೋಗ್ಯ ಇಲಾಖೆ ಕಾರ್ಯಕ್ರಮಗಳಿಗೆ ವೈದ್ಯಕೀಯ ಕಾಲೇಜು ಡೀನ್‌ಗಳು ಅಗತ್ಯ ಸಹಕಾರ ನೀಡಬೇಕು ಎಂದವರು ಸೂಚನೆ ನೀಡಿದರು.

ಮುಂದಿನ ದಿನಗಳಲ್ಲಿ ಆಸ್ಪತ್ರೆಗಳ ಸ್ವತ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸದ್ಯ ಇರುವ ಗುತ್ತಿಗೆ ಪದ್ಧತಿ ತೆಗೆದು, ಕಾರ್ಪೊರೆಟ್‌ ಸಂಸ್ಥೆಗಳನ್ನು ನೇಮಿಸಲಾಗುವುದು. ಆಸ್ಪತ್ರೆಗಳಲ್ಲಿ ವಿದ್ಯುತ್‌, ನೀರಿನ ವ್ಯವಸ್ಥೆ ಸಹಿತ ತಾಂತ್ರಿಕ ಕೆಲಸಗಳ ನಿರ್ವಹಣೆಗೆ ಒಬ್ಬ ಎಂಜಿನಿಯರ್‌ರನ್ನು ನೇಮಕ ಮಾಡಲಾಗುತ್ತದೆ. ಇನ್ನು ಆರೋಗ್ಯ ಇಲಾಖೆ ಸಿಬಂದಿ ವೇತನ ತಾರತಮ್ಯವನ್ನು ಮುಂದಿನ ದಿನಗಳಲ್ಲಿ ಬಗೆಹರಿಸುತ್ತೇನೆ. ಗುಡ್ಡಗಾಡು ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರಿಗೆ ವೇತನ ಹೆಚ್ಚಿಸುವ ಪ್ರಯತ್ನವನ್ನು ಈಗಾಗಲೇ ನಡೆಸಲಾಗುತ್ತಿದೆ. ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿನ ತಜ್ಞ ವೈದ್ಯರ ಕೊರತೆಯನ್ನು ನೀಗಿಸಲಾಗುವುದು ಎಂದು ಸಚಿವ ಶ್ರೀರಾಮುಲು ಭರವಸೆ ನೀಡಿದರು.

Advertisement

ವೆನ್‌ಲಾಕ್‌ಗೆ ಪ್ರಶಸ್ತಿ
ಕಾರ್ಯಕ್ರಮದಲ್ಲಿ ಕಾಯಕಲ್ಪ ಪ್ರಶಸ್ತಿಯಲ್ಲಿ ಮೊದಲ ಸ್ಥಾನ ಪಡೆದ ತುಮಕೂರು ಜಿಲ್ಲಾಸ್ಪತ್ರೆ, ಎರಡನೇ ಸ್ಥಾನ ಪಡೆದ ರಾಜೀವ್‌ ಗಾಂಧಿ ಎದೆ ರೋಗಗಳ ಸಂಸ್ಥೆ ಸಹಿತ ತಾಲೂಕು, ಸಮುದಾಯ ಆರೋಗ್ಯ ಕೇಂದ್ರಗಳನ್ನು ಸಮ್ಮಾನಿಸಿದರು. ಜತೆಗೆ ಆಯುಷ್ಮಾನ್‌ ಭಾರತ್‌ ಮತ್ತು ಆರೋಗ್ಯ ಕರ್ನಾಟಕ ಯೋಜನೆಯನ್ನು ಉತ್ತಮವಾಗಿ ಅನುಷ್ಠಾನಗೊಳಿಸಿದ ವೆನ್‌ಲಾಕ್‌ ದಕ್ಷಿಣ ಕನ್ನಡ ಜಿಲ್ಲಾಸ್ಪತ್ರೆ ಮತ್ತು ತುಮಕೂರು ಜಿಲ್ಲಾಸ್ಪತ್ರೆಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಎರಡೂ ಇಲಾಖೆಗೂ ಒಬ್ಬರೇ ಸಚಿವರಾಗಬೇಕು
ಎರಡೂ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಉಭಯ ಇಲಾಖೆಗಳನ್ನು ಒಗ್ಗೂಡಿಸಿ ಒಬ್ಬರೇ ಸಚಿವರನ್ನಾಗಿ ಮಾಡಬೇಕಿದೆ. ಈ ಮೂಲಕ ರಾಜ್ಯದಲ್ಲಿ ಆರೋಗ್ಯ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸಬಹುದು. ಈ ವಿಚಾರವನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರು ಮತ್ತು ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದೇನೆ ಎಂದು ಶ್ರೀರಾಮುಲು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next