Advertisement

ರಫ್ತು ಆಮದಿಗೆ ಕಂಟೈನರ್‌ ಕೊರತೆ; ಕರಾವಳಿಗೆ ಹೊಡೆತ 

01:09 AM Sep 05, 2021 | Team Udayavani |

ಮಂಗಳೂರು: ಕೊರೊನಾ ಕಾರಣ ಸ್ತಬ್ಧವಾಗಿದ್ದ ರಫ್ತು-ಆಮದು ವ್ಯವಹಾರ ಚೇತರಿಸಿಕೊಳ್ಳುತ್ತಿದೆ ಎನ್ನುವಷ್ಟರಲ್ಲಿ ಬಂದರು ಗಳಲ್ಲಿ ಕಂಟೈನರ್‌ ಕೊರತೆ ಉದ್ಭವಿಸಿದ್ದು, ವಾಣಿಜ್ಯ ಚಟುವಟಿಕೆಗಳಿಗೆ ಹೊಡೆತ ನೀಡಿದೆ.

Advertisement

ಕಂಟೈನರ್‌ ಕೊರತೆ ಬಂದರು ನಗರಿ ಮಂಗಳೂರಿಗೂ ತಟ್ಟಿದ್ದು, ಕರಾವಳಿಯ ರಫ್ತು-ಆಮದು ವ್ಯವಹಾರಕ್ಕೂ ಹೊಡೆತ ನೀಡಿದ್ದು, ವಿದೇಶದಲ್ಲಿ ಮಾರುಕಟ್ಟೆ ಕೈತಪ್ಪುವ ಪರಿಸ್ಥಿತಿ ನಿರ್ಮಾಣವಾಗಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಬಹುತೇಕ ಕಂಟೈನರ್‌ಗಳು ವಿವಿಧ ದೇಶಗಳ ಬಂದರು ಗಳಲ್ಲಿ ಬಾಕಿಯಾಗಿದ್ದವು. ಬಹುತೇಕ ಚೀನದಲ್ಲಿಯೇ ಇವೆ. ಭಾರತ ಸೇರಿದಂತೆ ಕೆಲವು ದೇಶಗಳೊಂದಿಗೆ ಚೀನದ ವಾಣಿಜ್ಯ ವಹಿವಾಟು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುವುದರಿಂದ ಅಲ್ಲಿರುವ ಕಂಟೈನರ್‌ ಲಭ್ಯವಾಗುತ್ತಿಲ್ಲ. ಅಂತೆಯೇ ಇತರ ಕೆಲವು ದೇಶಗಳಲ್ಲೂ ಇರುವ ಕಂಟೈನರ್‌ಗಳು ನಾನಾ ಕಾರಣಗಳಿಂದ ಬಾಕಿಯಾಗಿವೆ.

ಬಾಡಿಗೆ ದುಪ್ಪಟ್ಟು! :

ವಿದೇಶದಿಂದ ಯಾವುದೇ ಸರಕನ್ನು ಮಂಗಳೂರಿಗೆ ಹಡಗಿನ ಮೂಲಕ ತರಬೇಕಾದರೆ ಖಾಲಿ ಕಂಟೈನರನ್ನು ಬಾಡಿಗೆಗೆ ಪಡೆಯಲಾಗುತ್ತದೆ. ಬಾಡಿಗೆಗೆ ನೀಡುವ ಕೆಲವು ಕಂಪೆನಿಗಳು ವಿದೇಶದಲ್ಲಿವೆ. ಲಭ್ಯ ಕೆಲವೇ ಕಂಟೈನರ್‌ಗಳಿಗೆ ಬೇಡಿಕೆ ಅಧಿಕವಾಗಿದ್ದರಿಂದ ಸಕಾಲದಲ್ಲಿ ಲಭ್ಯವಾಗದೆ ಬಾಡಿಗೆ ದರ ದುಪ್ಪಟ್ಟಾಗಿದೆ.

Advertisement

ಗೋಡಂಬಿ ಉದ್ಯಮಿ ಕಲಾºವಿ ಪ್ರಕಾಶ್‌ ಪ್ರಕಾರ, “ಲಾಕ್‌ಡೌನ್‌ ಕಾಲದಲ್ಲಿ ಚೀನದಲ್ಲಿ ಬಾಕಿಯಾಗಿರುವ ಕಂಟೈನರ್‌ಗಳನ್ನು ಸದ್ಯ ನೀಡುತ್ತಿಲ್ಲ. ದೇಶೀಯವಾಗಿ ಬೇಕಾದಷ್ಟು ಲಭ್ಯವಿಲ್ಲ. ಜಾಗತಿಕವಾಗಿ ರಫ್ತು ವಹಿವಾಟು ಏರಿಕೆಯಾಗಿರುವುದರಿಂದ ಈಗ ಕಂಟೈನರ್‌ ಕೊರತೆ ಬಹುವಾಗಿ ಕಾಡುತ್ತಿದೆ. ಕರಾವಳಿಯ ವಿವಿಧ ಉತ್ಪನ್ನಗಳಿಗೆ ವಿದೇಶಗಳಲ್ಲಿ ಉತ್ತಮ ಬೇಡಿಕೆ ಇದ್ದರೂ ರಫ್ತು ಸಾಧ್ಯವಾಗುತ್ತಿಲ್ಲ. ಲಭ್ಯ ಕಂಟೈನರ್‌ ಬಾಡಿಗೆಯನ್ನು 2 ಸಾವಿರ ಡಾಲರ್‌ಗಳಿಂದ ಮೂರೂವರೆ ಸಾವಿರ ಡಾಲರ್‌ಗೂ ಅಧಿಕ ಮಾಡಿರುವುದು ದೊಡ್ಡ ತಲೆನೋವಾಗಿದೆ’ ಎನ್ನುತ್ತಾರೆ ಅವರು.

ಕರಾವಳಿಯ ವಹಿವಾಟಿಗೆ ಹೊಡೆತ

ಗೋಡಂಬಿ, ಮೀನು, ಕಾಫಿ, ಸಕ್ಕರೆ ಸೇರಿದಂತೆ ಆಹಾರ ಉತ್ಪನ್ನ, ಎಂಜಿನಿಯರಿಂಗ್‌ ಉತ್ಪನ್ನ, ತೈಲೋತ್ಪನ್ನಗಳು, ಕಬ್ಬಿಣದ ಅದಿರಿನ ಉಂಡೆಗಳು, ಗ್ರಾನೈಟ್‌ ಶಿಲೆಗಳು ಎನ್‌ಎಂಪಿಟಿ ಮೂಲಕ ರಫ್ತಾಗುತ್ತವೆ. ಕಚ್ಚಾತೈಲ, ಮರದ ದಿಮ್ಮಿಗಳು, ಘನೀಕೃತ ಪುಡಿಗಳು, ಸಿಮೆಂಟ್‌, ಕಲ್ಲಿದ್ದಲು, ರಸಗೊಬ್ಬರ, ಅಡುಗೆ ಎಣ್ಣೆ, ರಾಸಾಯನಿಕಗಳು, ಗ್ರಾನೈಟ್‌, ಮೈದಾ, ತೈಲೋತ್ಪನ್ನಗಳನ್ನು ಆಮದು ಮಾಡಿಕೊಳ್ಳ ಲಾಗುತ್ತದೆ. ಹಡಗಿನಲ್ಲಿ ತಂದ ಕಂಟೈನರ್‌ ಕಾರ್ಗೊವನ್ನು ಬೃಹತ್‌ ಲಾರಿಗಳ ಮೂಲಕ ಸಾಗಾಟ ಮಾಡಲಾಗುತ್ತದೆ. ಆದರೆ ಕೆಲವು ದಿನದ ಹಿಂದೆ ಶಿರಾಡಿ, ಚಾರ್ಮಾಡಿ ಘಾಟಿ ಬಂದ್‌ ಆದ ಕಾರಣವೂ ಕಂಟೈನರ್‌ಗಳು ಅಲ್ಲಲ್ಲಿ ಬಾಕಿಯಾಗಿ ಕರಾವಳಿಯ ವಹಿವಾಟಿಗೆ ಹೊಡೆತ ಬಿದ್ದಿದೆ.

ಕೊರತೆ ಎಷ್ಟು? ಹೇಗೆ? :

ಕೊರೊನಾ ಬಾಧೆಯ ಪೂರ್ವದಲ್ಲಿ ಶೇ. 95ರಷ್ಟು ಕಂಟೈನರ್‌ಗಳು ಲಭ್ಯವಾ ಗುತ್ತಿದ್ದರೆ, ಸದ್ಯ ಶೇ. 40ರಷ್ಟು ಮಾತ್ರ ಲಭ್ಯವಾಗುತ್ತಿವೆ. ಉಳಿದ ಶೇ. 50ಕ್ಕೂ ಅಧಿಕ ಪ್ರಮಾಣದ ಕಂಟೈನರ್‌ಗಳ ಕೊರತೆ ಕಾಡುತ್ತಿದೆ.

ಉದಾಹರಣೆಗೆ ಇತ್ತೀಚೆಗೆ 5 ಸಾವಿರ ಟನ್‌ ಸಕ್ಕರೆಯನ್ನು ಇಲ್ಲಿಂದ ವಿದೇಶಕ್ಕೆ ಸಾಗಿಸಲು ಸುಮಾರು 200 ಕಂಟೈನರ್‌ಗಳ ಅಗತ್ಯವಿತ್ತು. ಸಕಾಲಕ್ಕೆ ಕಂಟೈನರ್‌ ಲಭಿಸದ ಕಾರಣ ಒಂದು ಬಾರಿಗೆ 40 ಕಂಟೈನರ್‌ಗಳಲ್ಲಿ ಸಾಗಿಸಬೇಕಾಯಿತು. ವಾರದ ಬಳಿಕ 100 ಹಾಗೂ ಉಳಿದ ಸಕ್ಕರೆಯನ್ನು 4 ದಿನಗಳ ಬಳಿಕ ಬೇರೆ ಕಂಟೈನರ್‌ಗಳಲ್ಲಿ ಸಾಗಿಸುವ ಪ್ರಮೇಯ ಎದುರಾಗಿತ್ತು. ಇಂತಹ ಹಲವಾರು ಸಂದರ್ಭಗಳು ಎದುರಾಗಿವೆ. ಇದರಿಂದಾಗಿ ವಿದೇಶಗಳಲ್ಲಿ ಮಾರುಕಟ್ಟೆ ಕೈತಪ್ಪುವ ಆತಂಕ ಉಂಟಾಗಿದೆ.

-ದಿನೇಶ್‌ ಇರಾ

 

Advertisement

Udayavani is now on Telegram. Click here to join our channel and stay updated with the latest news.

Next