ಹಾವೇರಿ: ಬಡವರ ಹೋಟೆಲ್ ಎನಿಸಿದ ಇಂದಿರಾ ಕ್ಯಾಂಟೀನ್‌ಗಳು ಸಹ ಕೋವಿಡ್ ಆರ್ಭಟಕ್ಕೆ ತತ್ತರಿಸಿದ್ದು, ಗಣನೀಯ ಪ್ರಮಾಣದಲ್ಲಿ ಗ್ರಾಹಕರ ಕೊರತೆ ಎದುರಿಸುತ್ತಿವೆ.
ಬಡವರಿಗೆ ಕಡಿಮೆ ದರದಲ್ಲಿ ಊಟ, ಉಪಾಹಾರ ನೀಡುವ ಉದ್ದೇಶದಿಂದ ತೆರೆಯಲಾದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಗ್ರಾಹಕರ ಸಂಖ್ಯೆ ಅರ್ಧಕ್ಕರ್ಧ ಕಡಿಮೆಯಾಗಿದೆ. ಇದರಿಂದ ಕ್ಯಾಂಟೀನ್ ನಿರ್ವಹಣೆ ಮಾಡುವ ಗುತ್ತಿಗೆದಾರರು ಸಹ ನಷ್ಟ ಎದುರಿಸುವಂತಾಗಿದೆ. ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಕಳೆದ ಫೆಬ್ರವರಿಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾದಾಗ ದಿನಕ್ಕೆ 500ಕ್ಕಿಂತ ಹೆಚ್ಚು ಜನರು ಬಂದು ಊಟ, ಉಪಾಹಾರ ಸೇವಿಸುತ್ತಿದ್ದರು. ಜನ ಸರದಿಯಲ್ಲಿ ನಿಂತು ಟೋಕನ್ ಪಡೆಯುವ ಸ್ಥಿತಿ ಇತ್ತು. ಬಸ್‌ನಿಲ್ದಾಣ, ಮಾರುಕಟ್ಟೆ, ಜಿಲ್ಲಾಸ್ಪತ್ರೆ, ಕೃಷಿ ಉತ್ಪನ್ನ ಮಾರುಕಟ್ಟೆ, ಶಿವಲಿಂಗೇಶ್ವರ ಕಾಲೇಜು ಹೀಗೆ ಜನನಿಬಿಡ ಪ್ರದೇಶಗಳಿಗೆ ಕ್ಯಾಂಟೀನ್ ಹತ್ತಿರವಾಗಿದ್ದರಿಂದ ಸುತ್ತಲಿನ ಜನರು ಊಟ, ಉಪಾಹಾರಕ್ಕಾಗಿ ಇಂದಿರಾ ಕ್ಯಾಂಟೀನ್‌ಗೆ ಬರುತ್ತಿದ್ದರು.
ಕೋವಿಡ್ ಲಾಕ್‌ಡೌನ್ ಜಾರಿಯಾದಾಗಿನಿಂದ ಅಂದರೆ ಮಾರ್ಚ್ ಕೊನೆಯ ವಾರದಿಂದ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತ ಬಂದಿದೆ. ಲಾಕ್‌ಡೌನ್ ಆರಂಭದಲ್ಲಿ ಒಂದಿಷ್ಟು ಪಾರ್ಸಲ್ ಸೇವೆ ನೀಡಲಾಗುತ್ತಿತ್ತು. ಆಗಾಗ ವಿಧಿ ಸುವ ಕರ್ಫ್ಯೂ, ಲಾಕ್ ಡೌನ್‌ನಿಂದಾಗಿ ಗ್ರಾಹಕರ ಸಂಖ್ಯೆ ಅರ್ಧಕ್ಕೆ ಕುಸಿದಿದೆ. ಇಂದಿರಾ ಕ್ಯಾಂಟೀನ್ ಜಿಲ್ಲಾಸ್ಪತ್ರೆಗೆ ಹತ್ತಿರ ಇರುವುದರಿಂದ ಆಸ್ಪತ್ರೆಯ ರೋಗಿಗಳಿಗೆ, ಪೋಷಕರಿಂದ ಹೆಚ್ಚು ವ್ಯಾಪಾರ ಆಗುತ್ತಿತ್ತು. ಇತ್ತೀಚೆಗೆ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಿದ್ದರಿಂದ ಜಿಲ್ಲಾಸ್ಪತ್ರೆಗೆ ಬರುವ ಸಾರ್ವಜನಿಕರೂ ಕಡಿಮೆಯಾಗಿದ್ದಾರೆ. ಇದರಿಂದಲೂ ಕ್ಯಾಂಟೀನ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಇನ್ನು ಕಾಲೇಜು ವಿದ್ಯಾರ್ಥಿಗಳು, ಹಳ್ಳಿಗಳಿಂದ ನಗರಕ್ಕೆ ಬಂದ ಜನರು ಸಹ ಹೆಚ್ಚಿನ ಸಂಖ್ಯೆಯಲ್ಲಿ ರಿಯಾಯಿತಿ ದರದ ಊಟ, ಉಪಾಹಾರ ಸೇವಿಸುತ್ತಿದ್ದರು. ಈಗ ಶಾಲಾ-ಕಾಲೇಜುಗಳು ಬಂದ್ ಇರುವುದರಿಂದ, ಗ್ರಾಮೀಣ ಜನರ ನಗರ ಓಡಾಟ ಕಡಿಮೆಯಾಗಿದ್ದರಿಂದ ಇದೂ ಕೂಡ ಇಂದಿರಾ ಕ್ಯಾಂಟೀನ್ ವ್ಯಾಪಾರಕ್ಕೆ ಕೊಡಲಿ ಪೆಟ್ಟು ನೀಡಿದೆ.
ಸುರಕ್ಷಾ ಕ್ರಮಕ್ಕೆ ಆದ್ಯತೆ : ಕೋವಿಡ್ ಹಾವಳಿ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಕ್ಯಾಂಟೀನ್‌ನಲ್ಲಿ ಸುರಕ್ಷಾ ಕ್ರಮಗಳನ್ನೂ ಪಾಲಿಸಲಾಗುತ್ತಿದೆ. ಅಡುಗೆ ಹಾಗೂ ಇತರ ಸಿಬ್ಬಂದಿಗೆ ಮಾಸ್ಕ್, ಗ್ಲೌಸ್ ನೀಡಲಾಗಿದ್ದು ಸ್ವತ್ಛತೆಗೆ ಆದ್ಯತೆ ನೀಡಲಾಗಿದೆ. ಆದರೂ ಕೋವಿಡ್ ಕಾರಣದಿಂದ ಜನರ ಓಡಾಟ, ವ್ಯಾಪಾರ- ವ್ಯವಹಾರ ಕಡಿಮೆಯಾಗಿರುವುದು, ಹಲವರು ಹೊರಗಿನ ಊಟ, ಉಪಾಹಾರ ಸೇವನೆ ಕಡಿಮೆ ಮಾಡಿದ್ದರಿಂದ ನಷ್ಟದ ಬಿಸಿ ಇಂದಿರಾ ಕ್ಯಾಂಟೀನ್‌ಗೂ ತಟ್ಟಿದೆ. ಜಿಲ್ಲೆಯ ಉಳಿದ ತಾಲೂಕುಗಳಲ್ಲಿರುವ ಇಂದಿರಾ ಕ್ಯಾಂಟೀನ್‌ಗಳ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಎಲ್ಲ ಇಂದಿರಾ ಕ್ಯಾಂಟೀನ್‌ಗಳು ಗ್ರಾಹಕರನ್ನು ಎದುರು ನೋಡುತ್ತಿವೆ.
ನಿರಂತರ ಸೇವೆ ನೀಡಿದರೂ.. : ಲಾಕ್‌ಡೌನ್, ಕರ್ಫ್ಯೂ ಏನೇ ಇದ್ದರೂ ಇಂದಿರಾ ಕ್ಯಾಂಟೀನ್ ಮಾತ್ರ ತನ್ನ ಸೇವೆ ನಿರಂತರವಾಗಿಟ್ಟುಕೊಂಡು ಬಂದಿರುವುದು ಗಮನಾರ್ಹ. ಲಾಕ್‌ಡೌನ್ ಅವ ಧಿಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್, ಇತರ ಅಧಿಕಾರಿ, ಸಿಬ್ಬಂದಿಗೆ ದೊಡ್ಡ ಪ್ರಮಾಣದಲ್ಲಿ ಊಟ, ಉಪಾಹಾರದ ಸೇವೆ ನೀಡಿದೆ. ಸ್ಥಳೀಯ ಸೇವೆಗೆ ನಿರ್ಬಂಧ ವಿಧಿಸಿದಾಗ ಪಾರ್ಸಲ್ ಸೇವೆ ನೀಡಿದೆ. ಹೀಗೆ ಕ್ಯಾಂಟೀನ್ ನಿರಂತರ ಸೇವೆ ನೀಡುತ್ತಿದ್ದರೂ ಗ್ರಾಹಕರ ಕೊರತೆ ಕಾಡುತ್ತಲೇ ಇದೆ.
ಕಾರ್ಮಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಈಗ ಶಾಲಾ-ಕಾಲೇಜುಬಂದ್ ಇರುವುದರಿಂದ, ನಗರ ಪ್ರದೇಶಗಳಲ್ಲಿ ಕಾಮಗಾರಿಗಳೂ ಕಡಿಮೆಯಾಗಿದ್ದರಿಂದ ಕ್ಯಾಂಟೀನ್ ಗ್ರಾಹಕರ ಸಮಸ್ಯೆ ಎದುರಿಸುತ್ತಿದೆ. ಆರಂಭದಲ್ಲಿ ನಿತ್ಯ 500ಕ್ಕೂ ಹೆಚ್ಚು ಜನರು ಬರುತ್ತಿದ್ದರು. ಈಗ ಗ್ರಾಹಕರ ಸಂಖ್ಯೆ 250ಕ್ಕೆ ಇಳಿದಿದೆ. ಆದರೂ ಸೇವಾ ಮನೋಭಾವದಿಂದ ಕ್ಯಾಂಟೀನ್ ಮುಂದುವರಿಸಿದ್ದೇವೆ. ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದು ಶಾಲಾ-ಕಾಲೇಜು, ಎಲ್ಲ ಕಾಮಗಾರಿಗಳು, ಆರ್ಥಿಕ ಚಟುವಟಿಕೆಗಳು ಶುರುವಾದರೆ ಮತ್ತೆ ಗ್ರಾಹಕರು ಹೆಚ್ಚಾಗುವ ನಿರೀಕ್ಷೆ ಇದೆ. –
ಶೊಯಬ್, ಇಂದಿರಾ ಕ್ಯಾಂಟೀನ್ ನಿರ್ವಾಹಕ
–ಎಚ್.ಕೆ. ನಟರಾಜ