Advertisement

ಸಂವಹನ ಕೊರತೆ; ವೇತನ ಇಲ್ಲದೇ ಸಿಬ್ಬಂದಿ ಪರದಾಟ

08:37 AM Jun 24, 2019 | Suhan S |

ಹುಬ್ಬಳ್ಳಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವಾಲಯ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳ ಸಂವಹನ ಕೊರತೆಯಿಂದ ಇಲಾಖೆಯ ಸಾವಿರಾರು ಸಿಬ್ಬಂದಿ ವೇತನವಿಲ್ಲದೆ ಪರದಾಡುವಂತಹ ಸ್ಥಿತಿ ಉದ್ಭವಿಸಿದೆ.

Advertisement

ಜಿಲ್ಲಾ ಆರೋಗ್ಯ ಇಲಾಖೆಯಿಂದ ಪ್ರತಿ ತಿಂಗಳು ವೆಚ್ಚದ ಬಾಬತ್ತನ್ನು ತರಿಸಿಕೊಳ್ಳುತಿದ್ದ ಸಚಿವಾಲಯ ಕಳೆದ ನಾಲ್ಕು ತಿಂಗಳುಗಳಿಂದ ಈ ಪ್ರಕ್ರಿಯೆಗೆ ತಾತ್ಕಾಲಿಕ ಬ್ರೆಕ್‌ ಹಾಕಿದೆ. ಹೀಗಾಗಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಸಿಬ್ಬಂದಿ ವೇತನ ಹಾಗೂ ಮತ್ತಿತರ ಖರ್ಚುಗಳ ಮಾಹಿತಿ ಸಚಿವಾಲಯಕ್ಕೆ ತಲುಪಿಲ್ಲ. ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಸಹ ತಾವಾಗಿಯೇ ಮುಂದಾಗಿ, ಸಚಿವಾಲಯಕ್ಕೆ ಖರ್ಚು-ವೆಚ್ಚದ ಪಟ್ಟಿ ಸಲ್ಲಿಸಲು ಹೋಗಿಲ್ಲ.

ಈ ಹಿಂದೆ ಕೂಡಾ ಹಲವು ತಿಂಗಳವರೆಗೆ ಸಿಬ್ಬಂದಿಗಳಿಗೆ ವೇತನ ಆಗದೇ ಸಮಸ್ಯೆ ಅನುಭವಿಸಿದ್ದು ಉಂಟು. ಪ್ರತಿ ಬಾರಿ ನಾಲ್ಕೈದು ತಿಂಗಳಿಗೊಮ್ಮೆ ವೇತನ ನೀಡುತ್ತಿದ್ದರೆ ಸಿಬ್ಬಂದಿ ಬದುಕುವುದಾದರೂ ಹೇಗೆ ಎನ್ನುವ ಪ್ರಶ್ನೆ ಉದ್ಭವವಾಗಿದೆ. ತಿಂಗಳ ಸಂಬಳವನ್ನೇ ನಂಬಿರುವ ಇಲಾಖೆಯ ಹಲವಾರು ಸಿಬ್ಬಂದಿ, ಸಂಬಳವಿಲ್ಲದೇ ಪರದಾಡುತ್ತಿದ್ದಾರೆ. ಈ ಮಧ್ಯೆ ಮನೆ ಬಾಡಿಗೆ ಹಾಗೂ ಮತ್ತಿತರ ಖರ್ಚುಗಳಿಗೆ ಬೇರೆಯವರ ಬಳಿ ಕೈವೊಡ್ಡುವ ದುಃಸ್ಥಿತಿ ಎದುರಿಸುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸಲು ಲಕ್ಷಾಂತರ ರೂ. ವೇತನದ ಆಮಿಷವೊಡ್ಡುವ ಆರೋಗ್ಯ ಇಲಾಖೆ, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ನೀಡಲು ಮೀನ-ಮೇಷ ಎಣಿಸುತ್ತಿದೆ. ನೂರಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಕೀಯ ಅಧಿಕಾರಿಗಳು, ಹಿರಿಯ ಮತ್ತು ಕಿರಿಯ ಆರೋಗ್ಯ ಮಹಿಳಾ ಸಹಾಯಕರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಚಾಲಕರಿಗೆ ಬಜೆಟ್ ಇಲ್ಲ ಎಂಬ ಕಾರಣವೊಡ್ಡಿ ವೇತನಕ್ಕೆ ಕತ್ತರಿ ಹಾಕಲಾಗುತ್ತಿದೆ.

ಧಾರವಾಡ ಜಿಲ್ಲೆಯಲ್ಲಿ ಹಲವು ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ 293 ಸಿಬ್ಬಂದಿ ವೇತನಕ್ಕೆ ಕಾಯ್ದು ಕುಳಿತಿದ್ದಾರೆ. ವೈದ್ಯಕೀಯ ಕ್ಷೇತ್ರಕ್ಕೆ ಕೋಟ್ಯಂತರ ರೂ. ಮೀಸಲಿಟ್ಟಿರುವುದಾಗಿ ಹೇಳಿಕೊಳ್ಳುವ ಸರಕಾರ ಇದೀಗ, ಕೆಳ ವರ್ಗದ ಆರೋಗ್ಯ ಇಲಾಖೆ ಸಿಬ್ಬಂದಿ ವೇತನ ಮಂಜೂರಿಗೆ ವಿಳಂಬ ಧೋರಣೆ ಅನುಸರಿಸುತ್ತಿದೆ.

Advertisement

ಜಿಲ್ಲೆಯಲ್ಲಿ 2 ಹೆಡ್‌ನೊಳಗೆ ಸುಮಾರು 25ರಿಂದ 30 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ಎಫ್‌ಡಿಸಿ, ಎಸ್‌ಡಿಸಿ, ಚಾಲಕರು, ಸಹಾಯಕರು ಕೆಲಸ ಮಾಡುತ್ತಿದ್ದಾರೆ. 3 ಹೆಡ್‌ನೊಳಗೆ 144 ಕಿರಿಯ ಹಾಗೂ ಒಬ್ಬರು ಹಿರಿಯ ಆರೋಗ್ಯ ಮಹಿಳಾ ಸಹಾಯಕಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಬಜೆಟ್ ಇಲ್ಲ ಹಾಗೂ ಸಂವಹನದ ಕೊರತೆಯಿಂದ ಸಕಾಲಕ್ಕೆ ಹಣ ಬಿಡುಗಡೆಯಾಗುತ್ತಿಲ್ಲ ಎಂಬ ಕಾರಣವನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ಹೇಳುತ್ತಿದ್ದು, ಆರೋಗ್ಯ ಇಲಾಖೆಯ ನಿರ್ಲಕ್ಷ್ಯತನದಿಂದ 293 ಸಿಬ್ಬಂದಿ ವೇತನವಿಲ್ಲದೆ ಪರದಾಡುವಂತಾಗಿದೆ.

ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೊರತುಪಡಿಸಿ 185 ಉಪ ಕೇಂದ್ರಗಳಿದ್ದು, ಸುಮಾರು 3 ಹೆಡ್‌ನ‌ 145 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮಗಳು, ಜನನಿ ಸುರಕ್ಷಾ ಯೋಜನೆ, ತಾಯಿ ಕಾರ್ಡ್‌ ವಿತರಣೆ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಗರ್ಭಿಣಿಯರ ಹೆರಿಗೆ ವೇಳೆ ಸಹಕರಿಸುವುದು ಸೇರಿದಂತೆ ಹಲವಾರು ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.

ಸಕಾಲಕ್ಕೆ ವೇತನ ಬಿಡುಗಡೆಯಾಗದ ಕಾರಣ ಈ ಎಲ್ಲ ಸಿಬ್ಬಂದಿ ಕೌಟುಂಬಿಕ ಸಮಸ್ಯೆಯಿಂದ ನಲುಗುವಂತಾಗಿದೆ. ಆರೋಗ್ಯ ಇಲಾಖೆ ಇನ್ನಾದರೂ ತನ್ನ ಸಿಬ್ಬಂದಿಯ ವೇತನವನ್ನು ಕಾಲಕಾಲಕ್ಕೆ ಬಿಡುಗಡೆ ಮಾಡಬೇಕಿದೆ.

ನಾಲ್ಕೈದು ತಿಂಗಳಿಗೊಮ್ಮೆ ವೇತನ ನೀಡಿದರೆ ಬದುಕುವುದಾದರೂ ಹೇಗೆ?ಸಚಿವಾಲಯಕ್ಕೆ ಖರ್ಚು-ವೆಚ್ಚದ ಪಟ್ಟಿ ಸಲ್ಲಿಸಲು ಹೋಗಿಲ್ಲ ಆರೋಗ್ಯ ಇಲಾಖೆ ಅಧಿಕಾರಿಗಳು

•ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next