ಹೊಸದಿಲ್ಲಿ: ದೇಶದ ವಿವಿಧ ಭಾಗಗಳಲ್ಲಿ ಬೇಸಗೆಯ ಪ್ರಭಾವ ಕಾಣಿಸಿಕೊಳ್ಳಲಾರಂಭಿಸಿದೆ. ಅದಕ್ಕೆ ಪೂರಕವಾಗಿ ದೇಶದ ವಿದ್ಯುತ್ ಉತ್ಪಾದನಾ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದೆ. ಅದರಲ್ಲೂ ಕೆಲ ವಿದ್ಯುತ್ ಸ್ಥಾವರಗಳಲ್ಲಿ ಕೇವಲ ಒಂದು ದಿನಕ್ಕೆ ಬೇಕಾಗುವಷ್ಟು ಮಾತ್ರ ಕಲ್ಲಿದ್ದಲು ಇದೆ ಎಂದು “ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕಲ್ಲಿದ್ದಲು ಸಚಿವಾಲಯ, ಅಂಥ ಪರಿಸ್ಥಿತಿಯೇ ಉದ್ಭವಿಸಿಲ್ಲ ಎಂದು ಹೇಳಿದೆ. ಇಂಧನ, ಕಲ್ಲಿದ್ದಲು ಮತ್ತು ರೈಲ್ವೆ ಸಚಿವಾಲಯ ಪರಿಸ್ಥಿತಿ ಮೇಲೆ ನಿಗಾ ಇರಿಸಿದೆ ಎಂದೂ ಸಚಿವಾಲಯ ಹೇಳಿದೆ.
ಈ ಕುರಿತು ಶುಕ್ರವಾರ ಪ್ರತಿಕ್ರಿಯಿಸಿರುವ ಇಂಧನ ಖಾತೆ ಕಾರ್ಯದರ್ಶಿ ಅಜಯ ಕುಮಾರ್ ಭಲ್ಲಾ, “11 ವಿದ್ಯುತ್ ಸ್ಥಾವರಗಳಲ್ಲಿ ಒಂದು ವಾರಕ್ಕೆ ಸಾಕಾಗುವಷ್ಟು ಕಲ್ಲಿದ್ದಲು ಸಂಗ್ರಹ ಇದೆ. 14 ಸ್ಥಾವರಗಳಲ್ಲಿ ಕೇವಲ ನಾಲ್ಕು ದಿನಗಳಿಗೆ ಆಗುವಷ್ಟು ಮಾತ್ರ ಇದೆ’ ಎಂದಿದ್ದಾರೆ. ಆದರೆ ಕಲ್ಲಿದ್ದಲು ಖಾತೆ ಕಾರ್ಯದರ್ಶಿ ಸುಶೀಲ್ ಕುಮಾರ್, “ದೇಶದಲ್ಲಿ ಕಲ್ಲಿದ್ದಲು ಕೊರತೆ ಎದುರಾಗಿಲ್ಲ. ಹೀಗಾಗಿ ಗೊಂದಲ ಅಥವಾ ಭೀತಿಯ ಅಗತ್ಯವಿಲ್ಲ. ಕಲ್ಲಿದ್ದಲು ಸಾಗಿಸಲು ರೈಲು ರೇಕ್‌ಗಳ ಕೊರತೆ ಉಂಟಾಗಿದೆಯಷ್ಟೆ. 68.69 ದಶಲಕ್ಷ ಟನ್‌ಗಳಷ್ಟು ಕಲ್ಲಿದ್ದಲನ್ನು ಈ ಹಣಕಾಸು ವರ್ಷದ ಆರಂಭದಲ್ಲಿಯೇ ಉತ್ಪಾದಿಸಿದ್ದೇವೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕನಿಷ್ಠ ಸಂಗ್ರಹ ಎಂದರೆ 7.3 ದಶಲಕ್ಷ ಟನ್‌ಗಳಿಗೆ ತಗ್ಗಿತ್ತು ಎಂದಿದ್ದಾರೆ.