Advertisement

ಇನ್ನೂ ಸಿಕ್ಕಿಲ್ಲ ರುದ್ರಭೂಮಿಗೆ ಜಾಗ

12:02 PM Jan 12, 2020 | Suhan S |

ರೋಣ: ರಾಜ್ಯ ಸರ್ಕಾರ ರುದ್ರಭೂಮಿ ಖರೀದಿಗೆ ನೀಡುವ ಹಣ ಕಡಿಮೆಯಾದ ಕಾರಣ ಭೂಮಾಲೀಕರು ತಮ್ಮ ಫಲವತ್ತಾದ ಭೂಮಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಸಾರ್ವಜನಿಕರು ರುದ್ರಭೂಮಿ ಇಲ್ಲದೇ ರಸ್ತೆ ಬದಿಯಲ್ಲಿಯೇ ಶವ ಸಂಸ್ಕಾರ ಮಾಡಬೇಕಾದ ಪರಿಸ್ಥಿಯಿದೆ.

Advertisement

ಹೌದು. ಈ ಪರಿಸ್ಥಿತಿ ಇರುವುದು ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ. ಜಿಲ್ಲಾಧಿಕಾರಿಗಳು ರುದ್ರಭೂಮಿಗೆ ಜಾಗ ಖರೀದಿಸಲು ಆಯಾ ತಾಲೂಕು ನೋಂದಣಿ ಇಲಾಖೆಯಲ್ಲಿ ಗ್ರಾಮವಾರು ನೊಂದಾವಣೆಯಾಗಿರುವ ದರಕ್ಕೆ ಮೂರು ಪಟ್ಟು ಹೆಚ್ಚು ನೀಡಿ ಖರೀದಿಸುತ್ತಿದ್ದಾರೆ. ಆದರೆ ಖಾಸಗಿ ವ್ಯಕ್ತಿಗಳು ಭೂಮಿ ಖರೀದಿಸುವಾಗ ತೆರಿಗೆ ಉಳಿಸಿಕೊಳ್ಳಲು ಕಡಿಮೆ ದರಕ್ಕೆ ನೊಂದು ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ಖಾಸಗಿ ವ್ಯಕ್ತಿ1 ಲಕ್ಷ ರೂ.ಗೆ ಒಂದು ಎಕರೆ ಖರೀದಿ ಮಾಡಿದ್ದರೆ, ಸರ್ಕಾರ 3 ಲಕ್ಷ ಹಣವನ್ನು ನೀಡುತ್ತದೆ. ಆದರೆ ಕಪ್ಪು ಮಣ್ಣನ್ನು ಹೊಂದಿದ ಪ್ರದೇಶದಲ್ಲಿ 6 ಲಕ್ಷಕ್ಕೂ ಅಧಿಕ ದರದಲ್ಲಿ ಒಂದು ಎಕರೆ ಭೂಮಿ ಮಾರಾಟವಾಗುತ್ತಿದೆ. ಇದರಿಂದ ಸ್ಮಶಾನಕ್ಕೆ ಭೂಮಿ ಕೊಡಲು ಇಲ್ಲಿನ ರೈತರು ಹಿಂದೇಟು ಹಾಕುತ್ತಿದ್ದಾರೆ.

ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮಾನವ ಸೂಚಾಂಕ ಹೊಂದಿದ ಗ್ರಾಮವೆಂದು ಪ್ರಶಸ್ತಿ ಪಡೆದ ತಾಲೂಕಿನ ಕುರಹಟ್ಟಿ ಗ್ರಾಮಕ್ಕೆ ಇಲ್ಲಿಯವರೆಗೆ ಒಂದು ರುದ್ರಭೂಮಿಯಿಲ್ಲ. ಇದರಿಂದ ಇಲ್ಲಿನ ಜನರು ಗ್ರಾಮದಲ್ಲಿ ಯಾರಾದರು ಮೃತಪಟ್ಟರೆ ಅವರನ್ನು ಗ್ರಾಮದ ಪಕ್ಕದಲ್ಲಿಯೇ ಹಾಗೂ ರಸ್ತೆ ಮೇಲೆ ಸುಡುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಈ ಗ್ರಾಮಕ್ಕೊಂದು ಗ್ರಾಪಂ ಇದ್ದು, 1000 ಮನೆಗಳು, 5000 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಆದರೆ ಇಷ್ಟೊಂದು ದೊಡ್ಡ ಗ್ರಾಮದಲ್ಲಿ ಹೆಣ ಸುಡಲು ರುದ್ರಭೂಮಿಯಿಲ್ಲ. ಇದರಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ.

ರಸ್ತೆಯಲ್ಲೇ ಶವ ಸಂಸ್ಕಾರ :  ಆರ್ಥಿಕವಾಗಿ ಸಬಲರಾಗಿರುವರು ಮೃತಪಟ್ಟರೆ ಅವರದೆ ಊರ ಪಕ್ಕದಲ್ಲಿ ಇರುವ ಹೊಲದಲ್ಲಿ ಅಂತ್ಯಕ್ರಿಯೆ ಮಾಡುತ್ತಾರೆ. ಅವರ ಭೂಮಿ ಇಲ್ಲವಾದರೆ ಸಂಬಂಧಿಕರ ಹೊಲದಲ್ಲಿ ವಿಧಿವಿಧಾನಗಳು ನಡೆಸುತ್ತಾರೆ. ಆದರೆ ಬಡವರು, ನಿರ್ಗತಿಕರ ಕುಟುಂಬದವರು ಸತ್ತರೆ ಅವರಿಗೆ ಹೂಳಲು ಭೂಮಿಯಿಲ್ಲ, ಸುಡಲು ಜಾಗವಿಲ್ಲ. ಇದರಿಂದ ಗ್ರಾಮದಿಂದ ಮುದೇನಗುಡಿ ರಸ್ತೆಯಲ್ಲಿ ಹೆಣಗಳನ್ನು ಸುಡುತ್ತಾರೆ. ಗ್ರಾಮದಿಂದ ಕೂದಲೆಳೆಯ ಅಂತರದಲ್ಲಿರುವ ಮನೆಗಳಿಗೆ ಹೊಗೆ ಹಾಗೂವಾಸನೆ ಬಂದು ವಾಯುಮಾಲಿನ್ಯ ಆಗುತ್ತಿದೆ. ಇದರ ಪರಿಣಾಮ ಇಲ್ಲಿರುವ ದಲಿತ ಹಾಗೂ ಹಿಂದುಳಿದ ಕುಟುಂಬಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ಸ್ವತಂತ್ರ ಬಂದು ಏಳು ದಶಕ ಕಳೆದಿದ್ದೇವೆ. ಆದರೆ ಗ್ರಾಮಕ್ಕೊಂದು ರುದ್ರಭೂಮಿ ಪಡೆಯುವಲ್ಲಿ ನಾವು ಹಾಗೂ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ರಸ್ತೆಯ ಪಕ್ಕದಲ್ಲಿ ಅಂತ್ಯಕ್ರಿಯೆ ವಿಧಾನ ನಡೆಸುವುದರಿಂದ ಗ್ರಾಮ ತುಂಬೆಲ್ಲ ವಾಯುಮಾಲಿನ್ಯ ಆಗುತ್ತಿದೆ. ಆದ್ದರಿಂದ ಕೂಡಲೇ ಗ್ರಾಮಕ್ಕೆ ಸ್ಮಶಾನ ಮಂಜೂರು ಮಾಡಬೇಕು.ರಾಮನಗೌಡ ಪಾಟೀಲ, ಸ್ಥಳೀಯ

Advertisement

 

-ಯಚ್ಚರಗೌಡ ಗೋವಿಂದಗೌಡ್ರ

Advertisement

Udayavani is now on Telegram. Click here to join our channel and stay updated with the latest news.

Next