ಗಜೇಂದ್ರಗಡ: ರೈತ ಕಾಯಕ ಕೆರೆ, ಊಳುವ ಭೂಮಿ, ರಸ್ತೆ ಬದಿಯ ಜಾಗವೇ ಮುಕ್ತಿಧಾಮ. ಎರಡು ಕಿಮೀ ವರೆಗೂ ಹೋಗಿ ಅಂತ್ಯಸಂಸ್ಕಾರ ಮಾಡಬೇಕಾದ ಪರಿಸ್ಥಿತಿ. ಇದು ಸಮೀಪದ ಬೆಣಚಮಟ್ಟಿ ಮತ್ತು ಗೌಡಗೇರಿ ಗ್ರಾಮಸ್ಥರ ದುಸ್ಥಿತಿ.
ತಾಲೂಕಿನ ಕುಂಟೋಜಿ ಗ್ರಾಪಂ ವ್ಯಾಪ್ತಿಯ ಬೆಣಚಮಟ್ಟಿ ಮತ್ತು ಗೌಡಗೇರಿ ಗ್ರಾಮದಲ್ಲಿನ ಜನರು ಯಾರಾದರೂ ಮೃತಪಟ್ಟರೆ ಶವ ಸಂಸ್ಕಾರದ ಪಡಿಪಾಟಲು ಹೇಳತೀರದು. ಹಲವು ದಶಕಗಳು ಕಳೆದರೂ ಈ ಪುಟ್ಟ ಗ್ರಾಮಗಳಿಗೆ ಈವರೆಗೂ ರುದ್ರಭೂಮಿ ಇಲ್ಲದಿರುವುದರಿಂದ ಅಲ್ಲಿನ ನಿವಾಸಿಗಳ ಕಷ್ಟ ದೇವರಿಗೆ ಪ್ರೀತಿಯಾಗಿದೆ. ಗೌಡಗೇರಿಯಲ್ಲಿ 800ಕ್ಕೂ ಅ ಧಿಕ ಜನರು ವಾಸಿಸುತ್ತಿದ್ದಾರೆ. ಅಲ್ಲದೇ ಬೆಣಚಮಟ್ಟಿ ಗ್ರಾಮಲ್ಲಿ 1500ಕ್ಕೂ ಹೆಚ್ಚು ಜನರಿದ್ದಾರೆ.
ಈವೆರೆಡು ಗ್ರಾಮದಲ್ಲಿ ಬಹುತೇಕ ಹಿಂದುಳಿದ ಸಮುದಾಯದ ಜನರೆ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಸಾವು ಎಂಬ ಶಬ್ದ ಬದುಕಿದವರ ಎದೆ ನಡುಗಿಸುವಂತಾಗಿದೆ. ಸತ್ತವರಿಗಾಗಿ ಒತ್ತರಿಸಿ ಬರುವ ದುಖಃಕ್ಕಿಂತ ಎಲ್ಲಿ ಅತ್ಯಕ್ರಿಯೆ ಮಾಡುವುದು ಎಂಬ ಪ್ರಶ್ನೆ ಕಾಡುವಂತಿದೆ.
ಎರಡು ಕಿ.ಮೀ. ನಡಿಗೆ: ಬೆಣಚಮಟ್ಟಿ ಗ್ರಾಮದಲ್ಲಿನ ಜನರು ಕೃಷಿ ಆಧಾರಿತರಾಗಿದ್ದು, ಬೆರಳೆಣಿಕೆಯಷ್ಟು ಕುಟುಂಬಗಳನ್ನು ಹೊರತುಪಡಿಸಿದರೆ, ಗ್ರಾಮದ ಬಹುತೇಕ ಕುಟುಂಬಗಳು ಜಮೀನುಗಳನ್ನು ಹೊಂದಿದ್ದಾರೆ. ಆದರೆ ಈ ಗ್ರಾಮದಲ್ಲಿ ಯಾರಾದರು ಮೃತಪಟ್ಟರೆ ಎರಡು ಕಿ.ಮೀನಷ್ಟು ನಡೆದುಕೊಂಡೆ ಅವರವರ ವೈಯಕ್ತಿಕ ಜಮೀನುಗಳಲ್ಲಿಯೇ ಅಂತ್ಯಸಂಸ್ಕಾರ ಕೈಗೊಳ್ಳುತ್ತಾರೆ. ರುದ್ರಭೂಮಿಗಾಗಿ ಗ್ರಾಪಂ, ಕ್ಷೇತ್ರದ ಶಾಸಕರಿಗೆ ಹಲವಾರು ಬಾರಿ ಮನವಿ ಮಾಡಿದರೂ ಫಲ ಮಾತ್ರ ಶೂನ್ಯ ಎನ್ನುವುದು ಗ್ರಾಮಸ್ಥರ ಅಳಲಾಗಿದೆ.
ರಸ್ತೆ ಬದಿಯಲ್ಲೇ ಸ್ಮಶಾನ: ಗೌಡಗೇರಿ ಗ್ರಾಮದಲ್ಲಿ ಮೂಲ ಸೌಲಭ್ಯಗಳು ಸಮರ್ಪಕವಾಗಿಲ್ಲ. ಸ್ಮಶಾನ ಭೂಮಿಯೂ ಇಲ್ಲವಾಗಿದೆ. ಗ್ರಾಮಕ್ಕೆಪ್ರವೇಶಿಸುವ ಮುನ್ನ ರಸ್ತೆ ಬದಿಯ ಖಾಸಗಿಯವರ ಜಮೀನಿನಲ್ಲಿಯೇ ಹಲವಾರು ವರ್ಷಗಳಿಂದಗ್ರಾಮಸ್ಥರು ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ.ಬೆಣಚಮಟ್ಟಿ ಮತ್ತು ಗೌಡಗೇರಿ ಗ್ರಾಮದಲ್ಲಿರುದ್ರಭೂಮಿ ಇಲ್ಲದ ಪರಿಣಾಮ ಯಾರೇ ಸತ್ತರೂ ಹೆಣ ಹೊತ್ತುಕೊಂಡು ಕಿಮೀ ಗಟ್ಟಲೆ ಅಲೆದಾಟ ಮಾತ್ರ ತಪ್ಪಿಲ್ಲ. ರುದ್ರಭೂಮಿಗಾಗಿ ಖಾಸಗಿಯವರ ಜಮೀನನ್ನು ಗುರುತಿಸಿದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಿ ಸರ್ಕಾರಿ ಸ್ಮಶಾನ ಭೂಮಿ ನೀಡಲು ಮುಂದಾಗದೇ ನಿರ್ಲಕ್ಷಿಸುತ್ತಿದ್ದಾರೆ. ಆಡಳಿತ ವ್ಯವಸ್ಥೆಯ ಲೋಪದಿಂದ ಮನುಷ್ಯ ಸತ್ತಮೇಲೂ ಮುಕ್ತಿದೊರೆಯದಂತಾಗಿದೆ ಎನ್ನುವುದು ಗ್ರಾಮಸ್ಥರ ಆಕ್ರೋಶವಾಗಿದೆ.
ಅಂತ್ಯಸಂಸ್ಕಾರಕ್ಕಾಗಿ ಈ ಹಿಂದೆ ಕೆರೆಯಲ್ಲಿ ಬೆಣಚಮಟ್ಟಿ ಗ್ರಾಮದ ಹಿರಿಯರೆಲ್ಲರೂ ಸೇರಿ ಕೆರೆಯ ಒಂದು ಭಾಗದಲ್ಲಿ ಜಾಗ ಗುರುತಿಸಲಾಗಿತ್ತು. ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಸರ್ಕಾರಿ ರುದ್ರಭೂಮಿ ಒದಗಿಸಿ ಎಂದು ಗ್ರಾಪಂ ಆಡಳಿತಕ್ಕೆ ಮತ್ತು ಶಾಸಕರಿಗೆ ಈ ಹಿಂದೆ ಹಲವಾರು ಬಾರಿ ಮನವಿ ಮಾಡಲಾಗಿದೆ. ಕೆರೆಯ ಒಂದು ಭಾಗದಲ್ಲಿ ಅಂತ್ಯಕ್ರಿಯೆಗೆ ಸರ್ಕಾರಿ ಜಾಗ ಕಲ್ಪಿಸಿಕೊಡಬೇಕಿದೆ. –
ಅಂಬರೇಶ ನಾಯಕ್, ಬೆಣಚಮಟ್ಟಿ ಸದಸ್ಯ
-ಡಿ.ಜಿ. ಮೋಮಿನ್