Advertisement

ಸತ್ತರೆ ಸಂಸ್ಕಾರ ಚಿಂತೆ

01:28 PM Jan 18, 2020 | Suhan S |

ನರೇಗಲ್ಲ: ಸಮೀಪದ ಹಾಲಕೆರೆ ಗ್ರಾಮದಲ್ಲಿ ಹಲವು ದಶಕಗಳಿಂದ ರುದ್ರಭೂಮಿಯೇ ಇಲ್ಲ. ಇಲ್ಲಿ ಯಾರಾದರು ಸತ್ತರೆ ಶವ ಎಲ್ಲಿ ಮಣ್ಣು ಮಾಡಬೇಕು, ಸುಡಬೇಕು ಎಂಬ ಚಿಂತೆ ಸ್ಥಳೀಯರಿಗೆ ಕಾಡುತ್ತದೆ.

Advertisement

ಹಾಲಕೆರೆ ಗ್ರಾಮದಲ್ಲಿ ಸುಮಾರು 13 ಸಾವಿರ ಜನಸಂಖ್ಯೆಯಿದೆ. ವೀರಶೈವ ಲಿಂಗಾಯತ, ರಡ್ಡಿ, ಕುರುಬ, ವಾಲ್ಮೀಕಿ, ಚಲವಾದಿ, ಮಾದಿಗ, ಭಜಂತ್ರಿ, ಮುಸ್ಲಿಂ, ಭೋವಿ, ಅಂಭಿಗರ, ಹಡಪದ, ಬಡಿಗೇರ, ಕಮ್ಮಾರ ಸೇರಿದಂತೆ ಹತ್ತು ಹಲವಾರು ಜಾತಿಯಜನರಿದ್ದಾರೆ. ಈ ಎಲ್ಲ ಜನಾಂಗದವರಲ್ಲಿ ಯಾರದರೂ ಸತ್ತರೆ ಇವರ ಮಣ್ಣು ಎಲ್ಲಿ ಮಾಡಬೇಕು ಎನ್ನುವ ಪ್ರಶ್ನೆ ಸಮಾಜದ ಹಿರಿಯರನ್ನು ಕಾಡಲು ಪ್ರಾರಂಭಿಸುತ್ತದೆ. ಗ್ರಾಮದಿಂದ ಕುರಮುಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯದಲ್ಲಿರುವ ಮಾಲ್ಕಿ ಜಮೀನು ಅಥವಾ ಕಮ್ಮಾರ ಕಾಲುವೆಯ ರಸ್ತೆಯ ಪಕ್ಕದಲ್ಲಿ ಶವ ಸಂಸ್ಕಾರ ಅಥವಾ ಸುಡುವ ಪ್ರಸಂಗ ಎದುರಾಗುತ್ತದೆ. ಲಿಂಗಾಯತ ಜನಾಂಗದವರಲ್ಲಿ ಯಾರದರೂ ಸತ್ತರೆ ಊರ ಮುಂದಿನ ಕರೆಯ ದಡದಲ್ಲಿಅನೇಕ ವರ್ಷಗಳಿಂದ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಉಳಿದ ಜನಾಂಗದವರಲ್ಲಿ ಯಾರದರೂ ಸತ್ತರೆ ರಸ್ತೆ, ಹೊಲ, ತೋಟಗಳ ಮಾಲೀಕರ ಒಪ್ಪಿಗೆ ಪಡೆದು ಮಣ್ಣು ಮಾಡಬೇಕಾಗುತ್ತದೆ.

ಕರಮುಡಿ ರಸ್ತೆಯ ಪಕ್ಕದಲ್ಲಿಯೆ ಐವತ್ತು ವರ್ಷಗಳಿಂದಲೂ ಉಳಿದ ಜನಾಂಗದವರ ಶವಗಳ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಕಳೇಬರವನ್ನು ರಸ್ತೆ ಮೇಲೆಯೇ ಸುಡಲಾಗುತ್ತದೆ. ಮಳೆಗಾಲದಲ್ಲಿ ಸುರಿಯುವ ಮಳೆಯಲ್ಲಿಯೇ ಶವ ಸುಡಲು ಆಗದೆ ಒಂದೆರಡು ದಿನಗಳ ಕಾಲ ಕಾಯ್ದು ಮಳೆ ನಿಂತ ಮೇಲೆ ಶವ ಸುಟ್ಟ ಪ್ರಸಂಗಗಳೂ ನಡೆದಿವೆ. ಬೇಸಿಗೆ ಮತ್ತು ಚಳಿಗಾಲದಲ್ಲಿ ಶವಗಳಿಗೆ ಬೆಂಕಿ ಹಚ್ಚಿದಾಗ ಅದರ ಹೊಗೆ ಮತ್ತು ಬೂದಿ ಗಾಳಿಗೆ ಪಕ್ಕದ ಬಡವಾಣೆಗಳಿಗೆ ಬರುತ್ತವೆ. ಹೀಗಾಗಿ ಶವ ಸಂಸ್ಕಾರ ಮಾಡುವುದಕ್ಕಾಗಿ ಸರ್ಕಾರಕ್ಕೆ ಹಾಗೂ ತಾಲೂಕು ಜನಪ್ರತಿನಿಧಿ ಗಳಿಗೆ ಹತ್ತು ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ನಮ್ಮ ಗ್ರಾಮದ ಪ್ರತಿಯೊಂದು ಭಾಗದಲ್ಲಿ ಎರೆ ಭೂಮಿಗಳಿದ್ದು, ಪ್ರತಿಯೊಬ್ಬ ರೈತರು ಸದ್ಯ ತಮ್ಮ ಜಮೀನುಗಳಲ್ಲಿ ಬೆಳೆಗಳನ್ನು ಬೆಳೆದಿದ್ದಾರೆ. ಇಂತಹ ಸಮಯದಲ್ಲಿ ನಾವು ಮಣ್ಣು ಮಾಡುತ್ತೇವೆ ಎಂದು ಹೋದರೆ ಅವರು ಒಪ್ಪುವುದಿಲ್ಲ. ಅನಿವಾರ್ಯವಾಗಿ ಕರಮುಡಿ ರಸ್ತೆ ಪಕ್ಕದಲ್ಲಿ ಶವ ಸುಡಲಾಗುತ್ತದೆ. ಸದ್ಯ ಶವ ಸಂಸ್ಕಾರಕ್ಕೆ ಸಾಕಷ್ಟು ತೊಂದರೆಯಾಗಿದೆ. ತಾಲೂಕು ಆಡಳಿತದಿಂದ ಗ್ರಾಮದಲ್ಲಿ ರುದ್ರಭೂಮಿಗೆ ಸೂಕ್ತವಾದ ಜಮೀನನ್ನು ಖರೀದಿಸಿ ಎಲ್ಲ ಜನಾಂಗವರಿಗೆ ಅನುಕೂಲ ಮಾಡುವುದಕ್ಕೆ ಮುಂದಾಗಬೇಕು. ಬಾಳಪ್ಪ ಬುರಡಿ, ಗ್ರಾಪಂ ಉಪಾಧ್ಯಕ್ಷ

 ವಾಹನ ಸಂಚಾರಕ್ಕೆ ಅಡ್ಡಿ : ಶವಗಳನ್ನು ಜಾತಿ ಭೇದ ಮರೆತು ರಸ್ತೆಯ ಪಕ್ಕದಲ್ಲಿ ಸುಡಲಾಗುತ್ತಿದೆ. ಶವಗಳನ್ನು ಸುಡುವ ಸಮಯದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಕರಮುಡಿಯಿಂದ ಯಲಬುರ್ಗಾ, ಕುಷ್ಟಗಿ, ಕೊಪ್ಪಳ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳು ವಾಹನ ಸವಾರರಿಗೆ, ಬಸ್‌ ಚಾಲಕ, ಟ್ರ್ಯಾಕ್ಟರ್‌ ಗಳ ಚಾಲಕರಿಗೆ ಸಾಕಷ್ಟು ತೊಂದರೆ ಎದುರಾಗುತ್ತಿವೆ. ಇದಕ್ಕಾಗಿ ಸರ್ಕಾರ ಕೂಡಲೇ ಈ ಗ್ರಾಮಕ್ಕೆ ಸುಮಾರು 10 ಎಕರೆ ಪ್ರದೇಶದಲ್ಲಿ ರುದ್ರಭೂಮಿ ನೀಡುವುದಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

 

-ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next