Advertisement

ಶವ ಸಂಸ್ಕಾರಕ್ಕೆ ಹಳ್ಳದ ದಂಡೆಯೇ ಗತಿ

12:42 PM Jan 13, 2020 | Suhan S |

ಶಿರಹಟ್ಟಿ: ಈ ಊರಲ್ಲಿ ಶವ ಸಂಸ್ಕಾರ ಮಾಡಲು ಸ್ಮಶಾನ ಭೂಮಿಯೇ ಇಲ್ಲವಾಗಿದ್ದು, ಪರದಾಡುವ ಸ್ಥಿತಿಯಿದೆ. ಹೀಗಾಗಿ ಶವ ಸಂಸ್ಕಾರಕ್ಕೆ ಊರಿನ ಪಕ್ಕದಲ್ಲಿರುವ ಹಳ್ಳದ ದಂಡೆಯೇ ಗತಿಯಾಗಿದೆ.  ಹೌದು. ಇದು ಶಿರಹಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಹರಿಪುರ ಗ್ರಾಮ (ಎರಡನೇ ವಾರ್ಡ್‌)ದಲ್ಲಿನ ದುಸ್ಥಿತಿ.

Advertisement

ಖರೀದಿ ಪ್ರಕ್ರಿಯೆ ನನೆಗುದಿಗೆ: ಕಳೆದ ಹತ್ತು ವರ್ಷಗಳ ಹಿಂದೆ ಸ್ಮಶಾನ ಭೂಮಿಗಾಗಿ ನಿವೇಶನ ಖರೀದಿಸಲು ಪಪಂ ಮುಂದಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ನಿವೇಶನವನ್ನು ಕೂಡ ಗುರುತಿಸಲಾಗಿತ್ತು. ಆದರೆ ಅಧಿಕಾರಿಗಳ ಬದಲಾವಣೆಯಿಂದಾಗಿ ಖರೀದಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದ್ದು, ಇಂದಿಗೂ ಸಮಸ್ಯೆ ಕಗ್ಗಂಟಾಗಿಯೇ ಉಳಿದಿದೆ ಎನ್ನುತ್ತಾರೆ ಗ್ರಾಮಸ್ಥರು.

ನಿವೇಶನ ಖರೀದಿಯಾಗಿಲ್ಲ: ಕಳೆದ ನಾಲ್ಕೈದು ತಿಂಗಳ ಹಿಂದೆ ಶವ ಸಂಸ್ಕಾರ ಮಾಡಲು ನಿವೇಶನದ ಮಾಲೀಕರು ಅನುಮತಿ ನೀಡದ ಕಾರಣ ಶವವನ್ನು ತಹಶೀಲ್ದಾರ್‌ ಕಚೇರಿ ಎದುರು ಇಟ್ಟು ಪ್ರತಿಭಟನೆ ಮಾಡಲಾಗಿತ್ತು. ಇದರಿಂದ ತಹಶೀಲ್ದಾರ್‌ ಒಂದು ತಿಂಗಳ ಅವಧಿಯಲ್ಲಿ ಖರೀದಿ ಪ್ರಕ್ರಿಯೆ ಮುಗಿಸುವುದಾಗಿ ಭರವಸೆ ನೀಡಿದ್ದರು. ದುರಾದೃಷ್ಟ ಈವರೆಗೂ ನಿವೇಶನ ಖರೀದಿಯಾಗದೇ ಇರುವುದು ಬೇಸರದ ಸಂಗತಿ. ಇಂದಿಗೂ ನಿವೇಶನದಲ್ಲಿ ಶವಗಳನ್ನು ಹೂಳಲು ಅವಕಾಶವಿಲ್ಲದೇ ಹಳ್ಳದ ದಂಡೆಯೇ ಗತಿಯಾಗಿದೆ. ನಿವೇಶನ ಖರೀದಿಯಾಗದೇ ಇರುವುದರಿಂದ ಶವ ಸಂಸ್ಕಾರ ಮಾಡಲು ಅವಕಾಶ ನೀಡುತ್ತಿಲ್ಲ. ಆದ್ದರಿಂದ ಊರಿನ ಪಕ್ಕದಲ್ಲಿರುವ ಹಳ್ಳದ ದಂಡೆಯೇ ನಮಗೆ ಗತಿಯಾಗಿದೆ ಎನ್ನುವುದು ಗ್ರಾಮಸ್ಥರ ಅಳಲು.

ಸ್ಮಶಾನಕ್ಕಾಗಿ ಹಣ ಮಂಜೂರಾಗಿದ್ದು, ನಿವೇಶನದಾರರ ಖಾತೆಗೆ ಹಣ ಜಮಾವಣೆಯಾಗಬೇಕಿದೆ. ಆದಷ್ಟು ಶೀಘ್ರ ಈ ಪ್ರಕ್ರಿಯೆ ಮುಗಿಸಿ ಸಮಸ್ಯೆ ಬಗೆಹರಿಸಲಾಗುವುದು. ಯಲ್ಲಪ್ಪ ಗೋಣೆಣ್ಣವರ, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next