Advertisement

ಕೋಲಾರ ಪ್ರಯಾಣಿಕರಿಗೆ ಎಟುಕದ ತಿರುಪತಿ ಬಸ್‌!

01:53 PM Feb 05, 2024 | Team Udayavani |

ಕೋಲಾರ: ನಗರದ ಪ್ರಯಾಣಿಕರನ್ನು ತಿರುಪತಿಗೆ ಹೋಗುವ ಬಸ್‌ಗಳಲ್ಲಿ ಹತ್ತಿಸದೆ ಸಂಚರಿಸುವುದಕ್ಕೆ ದಶಕಗಳ ಇತಿಹಾಸವಿದೆ. ಈ ಸಮಸ್ಯೆ ಇಂದಿಗೂ ಬಗೆಹರಿದಿಲ್ಲ. ರಾಜ್ಯದ ಯಾವುದೇ ಡಿಪೋ ಬಸ್‌ಗಳು ತಿರುಪತಿಗೆ ಹೋಗಬೇಕಾದರೆ ಕೋಲಾರದ ಮೂಲಕವೇ ಸಂಚರಿಸಬೇಕು. ಆದರೆ, ತಿರುಪತಿಗೆ ಹೋಗುವ ಯಾವುದೇ ಬಸ್‌ ಕೋಲಾರದ ಪ್ರಯಾಣಿಕರನ್ನು ಬೆಂಗಳೂರಿನಲ್ಲೂ ಹತ್ತಿಸುವುದಿಲ್ಲ, ತಿರುಪತಿಯಲ್ಲಿಯೂ ಹತ್ತಿಸುತ್ತಿಲ್ಲ.

Advertisement

ದಶಕಗಳ ಹೋರಾಟ: ಯಾವುದೇ ಆರ್‌ಟಿಒ ಹಾಗೂ ಸಾರಿಗೆ ಸಂಸ್ಥೆಯ ಸಭೆಗಳಲ್ಲಿ ಈ ಸಮಸ್ಯೆ ಕುರಿತು ಧ್ವನಿ ಎತ್ತುವುದಕ್ಕೆ ದಶಕಗಳ ಇತಿಹಾಸವಿದೆ. ಕೋಲಾರ ನಗರಕ್ಕೆ ಬೈಪಾಸ್‌ ನಿರ್ಮಾಣವಾದ ನಂತರ ತಿರುಪತಿಯ ಬಹುತೇಕ ಬಸ್‌ ಬೈಪಾಸ್‌ ಮೂಲಕವೇ ಸಂಚರಿಸುತ್ತವೆ. ಕೋಲಾರ ನಗರ ಮತ್ತು ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣಕ್ಕೆ ಬರುತ್ತಿರಲಿಲ್ಲ. ಈ ಕುರಿತು ಕೋಲಾರದ ಪ್ರಯಾಣಿಕರು ಅನೇಕ ಮನವಿ ಪತ್ರಗಳನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ನೀಡಿದ್ದರು. ಈ ಪ್ರಯತ್ನದ ಫಲವಾಗಿ ರಾಜ್ಯದ ಯಾವುದೇ ಬಸ್‌ ಡಿಪೋ ಕೋಲಾರ ಬಸ್‌ ನಿಲ್ದಾಣಕ್ಕೆ ಬಂದು ಎಂಟ್ರಿ ಹಾಕಿಸಿಕೊಂಡು ಹೋಗಬೇಕು ಎಂಬ ನಿಯಮ ಮಾಡಿದರು. ಆನಂತರ ಕೆಲವು ದಿನಗಳ ಕಾಲ ಹೊರ ಜಿಲ್ಲೆಗಳ ತಿರುಪತಿ ಬಸ್‌ ಕೋಲಾರ ಬಸ ನಿಲ್ದಾಣಕ್ಕೆ ಆಗಮಿಸುತ್ತಿದ್ದವು. ಆದರೆ, ಕಾಲ ಕ್ರಮೇಣ ಮತ್ತದೇ ಚಾಳಿ ಎಂಬಂತೆ ಹೊರ ಜಿಲ್ಲೆ ಡಿಪೋ ಬಸ್‌ ಕೋಲಾರಕ್ಕೆ ಬರುವುದೇ ಅಪರೂಪ ಎನ್ನುವಂತಾಗಿದೆ.

ಪ್ರತಿದಿನವೂ 100 ಬಸ್‌ ಸಂಚಾರ: ಹೊರ ಜಿಲ್ಲೆಗಳ ಸುಮಾರು 100 ಬಸ್‌ ಪ್ರತಿದಿನವೂ ಕೋಲಾರದ ಮೇಲೆ ತಿರುಪತಿಗೆ ಹಾದು ಹೋಗುತ್ತವೆ. ಈ ಪೈಕಿ ಕೋಲಾರದ ಬಸ್‌ ನಿಲ್ದಾಣದಲ್ಲಿ ಹೊರ ರಾಜ್ಯದ ತಿರು ಪತಿಗೆ ಹೋಗುವ 40ರಿಂದ 50 ಬಸ್‌ಗಳು ಮಾತ್ರವೇ ಎಂಟ್ರಿ ಮಾಡಿಸಿರುತ್ತವೆ. ಕೇವಲ ಎಂಟ್ರಿಗೆ ಬರುವ ಈ ಬಸ್‌ಗಳು ಕೋಲಾರದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದಿಲ್ಲ. ಏಕೆಂದರೆ, ಬೆಂಗಳೂರಿನಿಂದಲೇ ನೇರವಾಗಿ ತಿರುಪತಿಗೆ ಟಿಕೆಟ್‌ ಬುಕ್‌ ಮಾಡಿಸಿಬಸ್‌ ತುಂಬಿ ಸಿರುತ್ತಾರೆ. ಕೆಲವು ಸೀಟ್‌ಗಳು ಖಾಲಿ ಇದ್ದರೂ, ಕೋಲಾರದ ಪ್ರಯಾಣಿಕರನ್ನು ತಿರುಪತಿ ಬಸ್‌ ಎಂಬ ಕಾರಣಕ್ಕೆ ಯಾವುದೇ ನಿಲುಗಡೆಯಲ್ಲಿಯೂ ಹತ್ತಿಸದೆ ನೇರ ತಿರುಪತಿ ಪ್ರಯಾಣಿಕರಿಗಾಗಿ ಕಾಯುತ್ತಾರೆ.

ನೇರ ಬಸ್‌ ಜತೆಗೆ ಪ್ರತಿ ಬಸ್‌ ಸೇವೆ ಸಿಗಲಿ: ಜಿಲ್ಲೆಯ ಪ್ರಯಾಣಿಕರಿಗೆ ತಿರುಪತಿಗೆ ತೆರಳಲು ಕೋಲಾರ ದಿಂದ ನೇರ ಬಸ್‌ ಸೌಕರ್ಯ ಕಲ್ಪಿಸುವುದರ ಜತೆಗೆ ಹೊರ ಜಿಲ್ಲೆ ಡಿಪೋಗಳ ಪ್ರತಿ ಬಸ್‌ ಕೋಲಾರಕ್ಕೆ ಆಗಮಿಸಬೇಕು. ಕೇವಲ ಎಂಟ್ರಿ ಹಾಕಿಸಿಕೊಳ್ಳಲು ಮಾತ್ರವೇ ಆಗಮಿಸದೆ ಹಗಲು-ರಾತ್ರಿ ವೇಳೆ ಯಾವುದೇ ಸಂದರ್ಭದಲ್ಲಿ ಬೈಪಾಸ್‌ ಮೂಲಕ ಹಾದು ಹೋಗದೆ ಬಸ್‌ ನಿಲ್ದಾಣಕ್ಕೆ ಬರಬೇಕು. ತಿರುಪತಿ ಹಾಗೂ ಬೆಂಗಳೂರಿನ ಯಾವುದೇ ನಿಲುಗಡೆಯಲ್ಲಿ ತಿರುಪ ತಿಗೆ ಬಸ್‌ಗಳಲ್ಲಿ ಕೋಲಾರ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಸೇವೆಯನ್ನು ಸಾರಿಗೆ ಸಂಸ್ಥೆ ಅಧಿಕಾರಿಗಳು ಕಡ್ಡಾಯವಾಗಿ ರೂಪಿಸಬೇಕೆಂಬ ಆಗ್ರಹ ಕೋಲಾರ ಜಿಲ್ಲೆಯ ಜನತೆಯಿಂದ ಕೇಳಿ ಬರುತ್ತಿದೆ.

ಜಿಲ್ಲೆಯಿಂದ ನೇರ ಬಸ್‌ ಇಲ್ಲ : ಕೋಲಾರ ಮತ್ತು ಜಿಲ್ಲೆಯಿಂದ ತಿರುಪತಿಗೆ ನೇರ ಬಸ್‌ ಸೌಕರ್ಯ ಇಲ್ಲ ಎನ್ನುವುದೇ ಆಶ್ಚರ್ಯ. ಬೆಳಗ್ಗೆ 8 ಗಂಟೆ ಸುಮಾರಿಗೆ ಮಾಲೂರಿನಿಂದ ಒಂದು ಬಸ್‌ ಮಾತ್ರವೇ ಕೋಲಾರ ಮಾರ್ಗವಾಗಿ ತಿರುಪತಿಗೆ ತೆರಳುತ್ತದೆ. ಕೋಲಾರದಿಂದ ತಿರುಪತಿಗೆ 6 ಬಸ್‌ಗಳು ಸಂಚರಿಸುತ್ತವೆಯಾ ದರೂ, ಈ ಬಸ್‌ಗಳು ಕೋಲಾರದಿಂದ ಬೆಂಗಳೂರಿಗೆ ತೆರಳಿ ನಂತರ ಕೋಲಾರ ಮಾರ್ಗವಾಗಿಯೇ ತಿರುಪತಿ ತಲುಪುತ್ತವೆ. ಈ ಬಸ್‌ಗಳಲ್ಲಿಯೂ ತಿರುಪತಿಗೆ ನೇರ ಪ್ರಯಾಣಿ ಕರು ಬುಕ್‌ ಮಾಡಿಕೊಂಡರೆ ಕೋಲಾರ ಪ್ರಯಾಣಿಕರಿಗೆ ಈ ಬಸ್‌ಗಳು ಕೈಗೆಟುಕುವುದಿಲ್ಲ. ಹಿಂದೆ ಕೋಲಾರದಿಂದ ತಿರುಪತಿಗೆ ಸಾಕಷ್ಟು ಪ್ರಯಾಣಿಕರು ಹೋಗುವುದಿಲ್ಲ ಎಂಬ ಕಾರಣಕ್ಕಾಗಿ ಬೆಂಗಳೂರು ಮೂಲಕ ತಿರುಪತಿಗೆ ಹೋಗುವ ವ್ಯವಸ್ಥೆ ಮಾಡಲಾಗಿತ್ತು. ಈಗ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಪ್ರಯಾಣಿಕರು ತಿರುಪತಿಗೆ ಹೋಗುತ್ತಿದ್ದರೂ, ಕೋಲಾರದಿಂದ ನೇರ ಬಸ ಸೌಕರ್ಯ ಇಲ್ಲದಿರುವುದು ಪ್ರಯಾಣಿಕರ ಪಡಿಪಾಟಲಿಗೆ ಕಾರಣವಾಗಿದೆ.

Advertisement

ನಾಮ್‌ ಕೇ ವಾಸ್ತೆ ಎಂಟ್ರಿ: ಹೊರ ಜಿಲ್ಲೆಯ ಡಿಪೋ ಬಸ್‌ಗಳು ಕೋಲಾರ ಬಸ್‌ ನಿಲ್ದಾಣಕ್ಕೆ ಆಗಮಿಸಿ ನಿಲ್ದಾಣದ ಅಧಿಕಾರಿ ಬಳಿ ಇರುವ ಪುಸ್ತಕದಲ್ಲಿ ಎಂಟ್ರಿ ಮಾಡಿಸಿ ಹೋಗಬೇಕು ಎಂಬುದನ್ನು ಕಡ್ಡಾಯ ಮಾಡಲಾಗಿದೆ. ಕೆಲವು ಬಸ್‌ ಕೇವಲ ಎಂಟ್ರಿ ಮಾಡಿಸಿಕೊಳ್ಳಲು ಮಾತ್ರವೇ ಕೋಲಾರ ಬಸ ನಿಲ್ದಾಣ ಪ್ರವೇಶಿಸಿ ಎಂಟ್ರಿ ಮಾಡಿಸಿಕೊಂಡು ಹೋಗುತ್ತಿವೆ. ಕೋಲಾರದ ಪ್ರಯಾಣಿಕರನ್ನು ಬಸ್‌ಗಳಲ್ಲಿ ಹತ್ತಿಸುತ್ತಿಲ್ಲ. ಇನ್ನೂ ಕೆಲವು ಜಿಲ್ಲೆಯ ಬಸ್‌ ಕೋಲಾರವನ್ನೇ ಪ್ರವೇಶಿಸದೆ ನೇರ ಬೈಪಾಸ್‌ ಮೂಲಕ ಬೆಂಗಳೂರಿನತ್ತ ಮತ್ತು ತಿರುಪತಿಯತ್ತ ತೆರಳುತ್ತಿರುವುದು ಸಾಮಾನ್ಯವಾಗಿದೆ.

ಕಾರಿನ ಅವಲಂಬನೆ ಅನಿವಾರ್ಯ : ಸಾರಿಗೆ ಸಂಸ್ಥೆಯ ತಿರುಪತಿ ಬಸ್‌ಗಳು ಕೋಲಾರ ಪ್ರಯಾಣಿಕರನ್ನು ಕಸವಾಗಿ ಕಾಣುತ್ತಿರುವುದರಿಂದ ಕೋಲಾರದ ಬಹುತೇಕ ಪ್ರಯಾಣಿಕರು, ತಿರುಪತಿಗೆ ಹೋಗಲು ಅನಿವಾರ್ಯವಾಗಿ ಕಾರುಗಳನ್ನು ಬಳಸಬೇಕಾಗಿದೆ. ಸ್ವಂತ ಕಾರು ಬಳಸುವವರ ಜೊತೆಗೆ ಕಾರು ಇಲ್ಲದವರು 3,500 ರಿಂದ 5 ಸಾವಿರ ಬಾಡಿಗೆ ವೆಚ್ಚ ಮಾಡಿಕೊಂಡು ಹೋಗುವುದು ಅನಿವಾರ್ಯವೆನಿಸಿದೆ. ಪ್ರಯಾಣಿಕರು ಇಷ್ಟೆಲ್ಲಾ ಅವ್ಯವಸ್ಥೆ ಪಡುತ್ತಿದ್ದರೂ, ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿರುಪತಿ ಬಸ್‌ ಕೋಲಾರದಲ್ಲಿ ಕಡ್ಡಾಯ ಎಂಟ್ರಿ ಮಾಡಿದ್ದೇವೆ ಎಂಬ ಸಬೂಬು ಹೇಳಿಕೊಂಡು ಸಾಗುತ್ತಿದ್ದಾರೆ.

ಜಿಲ್ಲೆಯ ಪ್ರಯಾಣಿಕರ ಗೋಳು ಹೇಳತೀರದು : ಜಿಲ್ಲೆಯಿಂದ ನಿತ್ಯವೂ ತಿರುಪತಿಗೆ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಆದರೆ, ತಿರುಪತಿಯಲ್ಲಿ ರಾಜ್ಯ ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್‌ ಕೋಲಾರ ಪ್ರಯಾಣಿಕರನ್ನು ಹತ್ತಿಸದಿರುವುದರಿಂದ ಅವರ ಗೋಳು ಹೇಳ ತೀರದ್ದಾಗಿದೆ. ಅದರಲ್ಲೂ ಸಂಜೆ ನಂತರ ತಿರುಪತಿಯಲ್ಲಿ ಯಾವುದೇ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿಯೂ ಪ್ರಯಾಣಿಕರನ್ನು ಹತ್ತಿಸುತ್ತಿಲ್ಲ. ಹತ್ತಿಸಿದರೂ ಬೈಪಾಸ್‌ ನಿಲುಗಡೆ ಎಂಬ ಷರತ್ತಿನೊಂದಿಗೆ ಮಾತ್ರ. ತಿರುಪತಿ ಯನ್ನು ಸಂಜೆಯ ನಂತರ ವಿವಿಧ ವೇಳೆಗಳಲ್ಲಿ ಹತ್ತಿದವರು ಕೋಲಾರ ತಲುಪುದರೊಳಗಾಗಿ ಮಧ್ಯರಾತ್ರಿ ಮೀರಿರುತ್ತದೆ. ಪ್ರಯಾಣಿಕರ ಸುರಕ್ಷತಾ ಹಿತವನ್ನೂ ಲೆಕ್ಕಿಸದೆ ತಿರುಪತಿ ಬಸ್‌ಗಳು ಕೋಲಾರ ಪ್ರಯಾಣಿಕರನ್ನು ಬೈಪಾಸ್‌ನಲ್ಲಿಯೇ ಇಳಿಸಿ ಹೋಗುತ್ತಿದ್ದಾರೆ. ಆ ಮಧ್ಯರಾತ್ರಿ ವೇಳೆ ಆಟೋ ಸಿಗುವುದಿಲ್ಲ, ಸಿಕ್ಕರೂ ದುಪ್ಪಟ್ಟು ಹಣ ನೀಡಿ ಪ್ರಯಾಣಿಕರು ಮನೆಗಳಿಗೆ ಸುರಕ್ಷಿತವಾಗಿ ತಲುಪುವ ಸಾಹಸ ಮಾಡಬೇಕಾಗಿದೆ.

ಬೆಂಗಳೂರು ನಗರದ ಯಾವುದೇ ನಿಲುಗಡೆಯಲ್ಲಿ ಕೋಲಾರದ ಪ್ರಯಾಣಿಕರನ್ನು ಹತ್ತಿಸುತ್ತಿಲ್ಲ. ಕೆಲಸದ ನಿಮಿತ್ತ ತಮ್ಮಂತೆ ನೂರಾರು ಪ್ರಯಾಣಿಕರು ನಿತ್ಯವೂ ಬೆಂಗಳೂರಿನಿಂದ ಕೋಲಾರಕ್ಕೆ ಪ್ರಯಾಣಿಸುತ್ತಿದ್ದಾರೆ. ಆದರೆ, ಟಿನ್‌ ಪ್ಯಾಕ್ಟರಿ ನಿಲುಗಡೆ ಸೇರಿದಂತೆ ಯಾವುದೇ ನಿಲುಗಡೆಯಲ್ಲಿಯೂ ಬಸ್‌ ಖಾಲಿ ಇದ್ದಾಗಲೂ ತಿರುಪತಿ ಬಸ್‌ಗಳಲ್ಲಿ ಕೋಲಾರದ ಪ್ರಯಾಣಿಕನ್ನು ಹತ್ತಿಸುತ್ತಿಲ್ಲ. ಸಾರಿಗೆ ಸಂಸ್ಥೆ ಇದಕ್ಕೆ ಕಡಿವಾಣ ಹಾಕಿ ಕೋಲಾರಕ್ಕೆ ಬರುವ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಬೇಕು. -●ನಾರಾಯಣಸ್ವಾಮಿ, ಕೋಲಾರ ಪ್ರಯಾಣಿಕರು

ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next