ವಾಡಿ: ಹೆಜ್ಜೆ-ಹೆಜ್ಜೆಗೂ ತೆಗ್ಗು-ಜಲ್ಲಿಕಲ್ಲುಗಳನ್ನೇ ಹಾಸಿ ಹೊದ್ದುಕೊಂಡಿದ್ದ ಕಲಬುರಗಿ-ವಾಡಿ-ಯಾದಗಿರಿ ಮಾರ್ಗದ 80 ಕಿ.ಮೀ. ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ-150 ಆಗಿ ಪರಿವರ್ತಿಸಲಾಗಿದೆ. ಆದರೆ, ಸಿಮೆಂಟ್ ಮತ್ತು ಪರ್ಷಿ ಕಲ್ಲು ಸಾಗಾಣಿಕೆ ಲಾರಿಗಳ ವಿಪರೀತ ಓಡಾಟದಿಂದ ಹಾಳಾಗಿದ್ದ ರಸ್ತೆ ಹೆದ್ದಾರಿಯಾಗಿ ಬದಲಾದರೂ ಗ್ರಾಮೀಣ ಪ್ರಯಾಣಿಕರ ಸಮಸ್ಯೆಗಳು ಮಾತ್ರ ಮುಕ್ತಿ ಕಂಡಿಲ್ಲ.
ಕಲಬುರಗಿ, ವಾಡಿ, ಯಾದಗಿರಿ ಹಾಗೂ ರಾಯಚೂರು ಮಾರ್ಗವಾಗಿ ಗುತ್ತಿ ಮೂಲಕ ಹಾಯ್ದು ಹಗರಿಬೊಮ್ಮನಳ್ಳಿ ಬಳಿಯ ಹೆದ್ದಾರಿಗೆ ಜೋಡಣೆಯಾಗಿರುವ ರಾಷ್ಟ್ರೀಯ ಹೆದ್ದಾರಿ-150ರ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಯಾಣಕ್ಕೆ ಈಗ ಮುಕ್ತವಾಗಿದೆ. ಈ ಭಾಗದಲ್ಲಿ ನಿತ್ಯ 40ಕ್ಕೂ ಹೆಚ್ಚು ಎಕ್ಸ್‌ಪ್ರೆಸ್ ಬಸ್‌ಗಳು ಯಾದಗಿರಿ ಜಿಲ್ಲೆಯಿಂದ ಕಲಬುರಗಿ ಜಿಲ್ಲಾ ಕೇಂದ್ರಕ್ಕೆ ಸಂಚರಿಸುತ್ತವೆ. ಮಧ್ಯೆ ವಾಡಿ ನಗರ ವ್ಯಾಪ್ತಿಯ ಹಳಕರ್ಟಿ, ಲಾಡ್ಲಾಪುರ, ರಾವೂರ, ಯರಗೋಳ, ನಾಲವಾರ ಸೇರಿದಂತೆ ವಿವಿಧ ಗ್ರಾಮಗಳ ಬಳಿ ನಿಲುಗಡೆಯಾಗುತ್ತವೆ. ಬರುವ ಬಸ್‌ಗಳಿಗಾಗಿ ಗ್ರಾಮೀಣ ಭಾಗದ ಪ್ರಯಾಣಿಕರು ಹೆದ್ದಾರಿ ಮೇಲಿನ ಬಯಲಲ್ಲಿ ನಿಂತು ಬಿಸಿಲಿಗೆ ಬಸವಳಿಯುತ್ತಿದ್ದರೂ ಹೆದ್ದಾರಿ ನಿರ್ಮಾಣ ಸಂಸ್ಥೆ ಮಾತ್ರ ಜನರ ಗೋಳಾಟ ಅರ್ಥ ಮಾಡಿಕೊಂಡಿಲ್ಲ. ಉತ್ತಮ ರಸ್ತೆ ಸೌಲಭ್ಯವೇನೋ ಒದಗಿಸಿಕೊಟ್ಟಿರುವ ಸರಕಾರ ಮತ್ತು ಈ ಭಾಗದ ಚುನಾಯಿತ ಜನಪ್ರತಿನಿಧಿಗಳು, ರಾಷ್ಟ್ರೀಯ ಹೆದ್ದಾರಿ ಸ್ಪರ್ಷ ಪಡೆದುಕೊಂಡಿರುವ ಗ್ರಾಮಗಳಿಗೆ ಬಸ್ ನಿಲ್ದಾಣ ಸೌಲಭ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದೆ. ಬಸ್ ನಿಲ್ದಾಣ ಕುಟೀರ್‌ಗಳನ್ನು ನಿರ್ಮಿಸಲು ಕಬ್ಬಿಣದ ಕಂಬಗಳನ್ನು ಹಾಕಿ ಕಣ್ಮರೆಯಾಗಿರುವ ಅಧಿಕಾರಿಗಳು, ಸೂರು ಹಾಕುವಲ್ಲಿ ಬೇಜವಾಬ್ದಾರಿ ವಹಿಸಿದ್ದಾರೆ.
ಬಸ್ ನಿಲ್ದಾಣಕ್ಕಾಗಿ ಗುರುತಿಸಲಾದ ಜಾಗದಲ್ಲಿ ಕುರಿ-ದನಗಳಿಗೆ ಮೇವು ಹಾಕಲಾಗುತ್ತಿದ್ದು, ಕೊಟ್ಟಿಗೆ ರೂಪ ಪಡೆದುಕೊಂಡಿವೆ. ಬಿಸಿಲು, ಮಳೆ, ಗಾಳಿ, ಧೂಳಿಗೆ ರಕ್ಷಣೆಯಿಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹೋಟೆಲ್ ಅಥವಾ ಗಿಡ-ಮರಗಳ ಆಸರೆಗೆ ನಿಂತು ಬಸ್‌ಗಳಿಗಾಗಿ ಕಾಯುವಂತಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಹೆದ್ದಾರಿ ನಿರ್ಮಾಣವಾದ ನಂತರ ಯಾದಗಿರಿ, ವಾಡಿ ಮತ್ತು ಕಲಬುರಗಿ ನಗರಗಳಿಗೆ ತಲುಪಲು ಬಸ್‌ಗಳ ಸೌಲಭ್ಯ ಆರಂಭಗೊಂಡಿದೆ. ಬಸ್‌ಗಳಿಗೆ ಕಾಯಲು ಪ್ರಯಾಣಿಕರಿಗೆ ಬಸ್ ನಿಲ್ದಾಣ ಸೌಲಭ್ಯ ದೊರಕಿಲ್ಲ. ಅಲ್ಲದೆ ಅವೈಜ್ಞಾನಿಕ ಜಾಗದಲ್ಲಿ ಬಸ್ ನಿಲ್ದಾಣಕ್ಕೆ ಸ್ಥಳ ಗುರುತಿಸಲಾಗಿದೆ. ಪ್ರಯಾಣಿಕರು ರಸ್ತೆ ಬದಿಯಲ್ಲಿ ನಿಂತು ಬಿಸಿಲಿಗೆ ತೊಂದರೆ ಅನುಭವಿಸುತ್ತಿದ್ದಾರೆ. ಪುರುಷರು ಹೋಟೆಲ್‌ಗಳಲ್ಲಿ ಆಸರೆ ಪಡೆದುಕೊಂಡರೆಮಹಿಳೆಯರು ಬಿಸಿಲಿನಲ್ಲಿ ನಿಲ್ಲುವಂತಾಗಿದೆ. ನೆರಳು ಮತ್ತು ಆಸನಗಳ ಸೌಲಭ್ಯ ಇರುವಮಿನಿ ಬಸ್ ನಿಲ್ದಾಣಗಳನ್ನು ನಿರ್ಮಿಸುವುದು ಅತ್ಯಗತ್ಯವಾಗಿದೆ.
-ರಾಘವೇಂದ್ರ ಅಲ್ಲಿಪೂರ, ಹಳಕರ್ಟಿ ಗ್ರಾಮಸ್ಥ
-ಮಡಿವಾಳಪ್ಪ ಹೇರೂರ