Advertisement

ನಡಂಬೂರು: ಬೆಳಗ್ಗೆ ಬಸ್‌ ಇದೆ; ಸಂಜೆ ಸಂಚರಿಸಲ್ಲ

11:55 AM Sep 19, 2022 | Team Udayavani |

ಹಾಲಾಡಿ: ಅಮಾಸೆಬೈಲು ಗ್ರಾಮದ ನಡಂಬೂರು, ನರಸೀಪುರ, ಗುಂಡಾಣ ಭಾಗಕ್ಕೆ ಬೆಳಗ್ಗೆ ಬಸ್‌ ಇದೆ. ಆದರೆ ಸಂಜೆ ಸಮಯಕ್ಕೆ ಒಂದೇ ಒಂದು ಬಸ್‌ ಇಲ್ಲ. ಇದರಿಂದ ಬೆಳಗ್ಗೆ ಶಾಲಾ- ಕಾಲೇಜಿಗೆ ತೆರಳಿದ ವಿದ್ಯಾರ್ಥಿಗಳು ಮನೆ ಸೇರಬೇಕಾದರೆ ಐದಾರು ಕಿ.ಮೀ. ಕಾಡ ಹಾದಿಯಲ್ಲಿ ನಡೆದೇ ಸಾಗಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

Advertisement

ಅಮಾಸೆಬೈಲಿನಿಂದ ಐದಾರು ಕಿ.ಮೀ. ದೂರದ ನಡಂಬೂರು, ನರಸೀಪುರ, ಗುಂಡಾಣ ಭಾಗಕ್ಕೆ ಬಸ್‌ ಇಲ್ಲದೆ 25ರಿಂದ 30 ಮಕ್ಕಳು ನಿತ್ಯ ಸಂಜೆ ವೇಳೆಗೆ ನಡೆದುಕೊಂಡೇ ಹೋಗಬೇಕಾದ ಸ್ಥಿತಿಯಿದೆ.

ಬೆಳಗ್ಗೆ ಹೋದ ಬಸ್‌ ಮತ್ತೆ ಬರುವುದು ಮರುದಿನ

ಹೆಂಗವಳ್ಳಿಯಿಂದ ನಡಂಬೂರು ಮಾರ್ಗವಾಗಿ ಅಮಾಸೆಬೈಲು ಮೂಲಕ ಕುಂದಾಪುರಕ್ಕೆ ತೆರಳಲು ಬೆಳಗ್ಗಿನ ಅವಧಿಯಲ್ಲಿ ಒಂದು ಖಾಸಗಿ ಬಸ್‌ ಇದೆ. ಈ ಬಸ್‌ ನಡಂಬೂರು, ನರಸೀಪುರ ಪ್ರದೇಶಕ್ಕೆ ಬೆಳಗ್ಗೆ 8 ಗಂಟೆಯ ಸುಮಾರಿಗೆ ಬರುತ್ತದೆ. ಈ ಬಸ್‌ನಲ್ಲಿ ಈ ಭಾಗದ ಸುಮಾರು ಮಕ್ಕಳಿಗೆ ಶಾಲಾ – ಕಾಲೇಜಿಗೆ ತೆರಳಲು, ಅಮಾಸೆಬೈಲು ಪೇಟೆ, ಪಂಚಾಯತ್‌ಗೆ ತೆರಳಲು, ಕುಂದಾಪುರ ಕಡೆಗೆ ತೆರಳಲು ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. ಆದರೆ ಇದೇ ಜನರಿಗೆ ವಾಪಾಸು ಬರಬೇಕಾದರೆ ಯಾವುದೇ ಬಸ್‌ ಸೌಕರ್ಯವಿಲ್ಲ. ಈ ಊರಿಗೆ ಮತ್ತೆ ಬಸ್‌ ಬರುವುದು ಮರುದಿನ ಬೆಳಗ್ಗೆ. ಇದರಿಂದ ಶಾಲಾ- ಕಾಲೇಜು ಮಕ್ಕಳು, ಕೆಲಸಕ್ಕೆ ತೆರಳಿದ ಜನರು ವಾಪಾಸು ನಡೆದುಕೊಂಡೇ ಬರುವಂತಾಗಿದೆ.

ಎಲ್ಲಿಗೆಲ್ಲ ಸಮಸ್ಯೆ

Advertisement

ನಡಂಬೂರು, ನರಸೀಪುರ, ಗುಂಡಾಣ, ನಿಲ್ಸಿಕಲ್‌, ಮಾವಿನಕಾಡು, ಉಳಿಕಾಡು ಹೀಗೆ ಸುತ್ತಮುತ್ತಲಿನ ಪರಿಸರದ ಅನೇಕ ಕಡೆಗಳ ಮಕ್ಕಳು ಹಾಲಾಡಿ, ಬಿದ್ಕಲ್‌ ಕಟ್ಟೆ, ಕೋಟೇಶ್ವರ, ಕುಂದಾಪುರ ಭಾಗದ ಶಿಕ್ಷಣ ಸಂಸ್ಥೆಗಳಿಗೆ ವ್ಯಾಸಂಗಕ್ಕೆ ಬರುತ್ತಾರೆ.

ಬಸ್‌ ಕಲ್ಪಿಸಲು ಆಗ್ರಹ: ಪ್ರತಿ ನಿತ್ಯ ಮಕ್ಕಳು ಮಾತ್ರವಲ್ಲದೆ ಗ್ರಾಮಸ್ಥರು ಸಹ ಕನಿಷ್ಠ ಗ್ರಾ.ಪಂ. ಕಚೇರಿ ಕೆಲಸಕ್ಕೆ ಬರಬೇಕಾದರೂ 5-6 ಕಿ.ಮೀ. ನಡೆದುಕೊಂಡು ಅಥವಾ ರಿಕ್ಷಾ ಇನ್ನಿತರ ವಾಹನ ಬಾಡಿಗೆ ಮಾಡಿಕೊಂಡು ಬರಬೇಕಾಗಿದೆ. ಗ್ರಾಮೀಣ ಭಾಗವಾದ ಇಲ್ಲಿಗೆ ಈ ಬೆಳಗ್ಗೆ ಇರುವಂತೆಯೇ ಸಂಜೆ ವೇಳೆಯೂ ಒಂದು ಬಸ್‌ ವ್ಯವಸ್ಥೆ ಮಾಡಿದರೆ ಬಹಳಷ್ಟು ಅನುಕೂಲವಾಗಲಿದೆ. – ಕಿರಣ್‌ ಶೆಟ್ಟಿ, ಕೊಟ್ಟಕ್ಕಿ, ಗ್ರಾ.ಪಂ. ಸದಸ್ಯರು

ಪರಿಶೀಲಿಸಲಾಗುವುದು: ಅಮಾಸೆಬೈಲು ಗ್ರಾಮದ ನಡಂಬೂರು ಭಾಗಕ್ಕೆ ಬಸ್‌ ಸೌಕರ್ಯ ಇಲ್ಲದಿರುವ ಬಗ್ಗೆ ಮಾಹಿತಿಯಿಲ್ಲ. ಸಾರ್ವಜನಿಕರಿಂದ ಮನವಿ ಬಂದಲ್ಲಿ ಪರಿಶೀಲಿಸಿ, ಸಂಬಂಧಪಟ್ಟವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. – ರಾಜೇಶ್‌, ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next