Advertisement

ಕೇಂದ್ರದಿಂದ 5 ವರ್ಷದಲ್ಲಿ ಬೆಂಗಳೂರಿಗೆ 1.3 ಲಕ್ಷ ಕೋಟಿ ಅನುದಾನ: ತೇಜಸ್ವಿ ಸೂರ್ಯ

11:58 PM Apr 08, 2024 | Team Udayavani |

ಬೆಂಗಳೂರು: ಕಳೆದ 5 ವರ್ಷಗಳಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ನರೇಂದ್ರ ಮೋದಿ ನೇತೃತ್ವದ ಸರಕಾರ 1.30 ಲಕ್ಷ ಕೋಟಿ ರೂ. ಅನುದಾನ ಒದಗಿಸುವ ಮೂಲಕ ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿದೆ ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿದರು.

Advertisement

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸಂವಾದ ನಡೆಸಿದ ಅವರು, ಕಳೆದ 5 ವರ್ಷದಲ್ಲಿ ಕೇಂದ್ರ ಸರಕಾರದ ಅನೇಕ ಪ್ರಮುಖ ಯೋಜನೆಗಳು ಬೆಂಗಳೂರಿನಲ್ಲಿ ಜಾರಿಗೊಂಡಿವೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮೆಟ್ರೋ ಮಾರ್ಗಗಳ ವಿಸ್ತರಣೆ, ಸಬ್‌ ಅರ್ಬನ್‌ ರೈಲು ಯೋಜನೆ, ಉಪ ನಗರ ವರ್ತುಲ ರಸ್ತೆ ಯೋಜನೆಗಳಿಗೆ ಕೇಂದ್ರದಿಂದ ಮಂಜೂರಾತಿ ದೊರೆತಿದೆ. ಬಿಎಂಟಿಸಿಗೆ 1,600 ಎಲೆಕ್ಟ್ರಿಕ್‌ ಬಸ್‌ಗಳನ್ನು ಕೇಂದ್ರ ಸರಕಾರ ಒದಗಿಸಿದೆ ಎಂದರು.

ಕ್ಷೇತ್ರದಲ್ಲಿ ಆರೋಗ್ಯ ರಕ್ಷಣೆಗೆ ತೆಗೆದುಕೊಂಡಿರುವ ಉಪಕ್ರಮಗಳ ಬಗ್ಗೆ ಪ್ರಸ್ತಾವಿಸಿದ ಅವರು, ರಕ್ತದೊತ್ತಡ, ಮಧು ಮೇಹ ದಂತಹ ಕಾಯಿಲೆಗಳಿಂದ ಬಳಲುತ್ತಿರುವ ನಾಗರಿಕರಿಗೆ ಉಚಿತ ಔಷಧಗಳನ್ನು ಒದಗಿಸುವ ಸಲುವಾಗಿ ನಮೋ ಆರೋಗ್ಯ ನಿಧಿ ಯೋಜನೆಯನ್ನು ಆರಂಭಿಸಲಾಗಿದೆ.

ಈ ಯೋಜನೆಯಡಿ 1,000ಕ್ಕೂ ಅಧಿಕ ಹಿರಿಯರಿಗೆ ಪ್ರತಿ ತಿಂಗಳು ಔಷಧ ನೀಡಲಾಗುತ್ತಿದೆ. ದಕ್ಷಿಣ ಕ್ಷೇತ್ರದಲ್ಲಿ 5 ವರ್ಷಗಳ ಹಿಂದೆ 14ರಷ್ಟಿದ್ದ ಜನೌಷಧಿ ಕೇಂದ್ರಗಳ ಸಂಖ್ಯೆ ಈಗ 120ಕ್ಕೆ ಏರಿದ್ದು, ಇಡೀ ದೇಶದಲ್ಲೇ ಅತಿಹೆಚ್ಚು ಜನೌಷಧಿ ಕೇಂದ್ರಗಳನ್ನು ಹೊಂದಿರುವ ಕ್ಷೇತ್ರವೆನಿಸಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ ಸಹಿತ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next