Advertisement

ಅಂಡಾರು: ತಾ|ಕೇಂದ್ರ ಹೆಬ್ರಿ ಸಂಪರ್ಕಿಸಲು ಬಸ್‌ ವ್ಯವಸ್ಥೆಯೇ ಇಲ್ಲ

11:37 AM May 26, 2022 | Team Udayavani |

ಅಜೆಕಾರು: ಹೆಬ್ರಿ ತಾಲೂಕು ಕೇಂದ್ರವಾಗಿ 5 ವರ್ಷ ಕಳೆದರೂ ತಾಲೂಕು ವ್ಯಾಪ್ತಿಯ ನಾಗರಿಕರು ತಾಲೂಕು ಕೇಂದ್ರ ತಲುಪಲು ಅಗತ್ಯ ಇರುವ ಸಾರಿಗೆ ವ್ಯವಸ್ಥೆ ಇಲ್ಲದೆ ಸಂಕಷ್ಟ ಪಡಬೇಕಾಗಿದೆ.

Advertisement

ಕಾರ್ಕಳ ತಾಲೂಕು ಕೇಂದ್ರಕ್ಕೆ ಹತ್ತಿರವಿರುವ ಜತೆಗೆ ಸಾಕಷ್ಟು ಖಾಸಗಿ ಬಸ್‌ ವ್ಯವಸ್ಥೆ ಇದ್ದ ಅಂಡಾರು ಗ್ರಾಮವನ್ನು ಹೊಸದಾಗಿ ಪ್ರಾರಂಭಗೊಂಡ ಹೆಬ್ರಿ ತಾಲೂಕು ಕೇಂದ್ರಕ್ಕೆ ಅವೈಜ್ಞಾನಿಕವಾಗಿ ಸೇರಿಸಿದ ಪರಿಣಾಮ ಈಗ ಗ್ರಾಮಸ್ಥರು ಸಮಸ್ಯೆಯ ಸುಳಿಯಲ್ಲಿ ಸಿಲುಕುವಂತಾಗಿದೆ.

ವರಂಗ ಗ್ರಾ.ಪಂ.ವ್ಯಾಪ್ತಿಯ ಅಂಡಾರು ಗ್ರಾಮಸ್ಥರಿಗೆ ತಾಲೂಕು ಕೇಂದ್ರ ಹೆಬ್ರಿ ಸಂಪರ್ಕಿಸಲು ಬಸ್‌ ವ್ಯವಸ್ಥೆ ಇಲ್ಲದೆ ನಾಗರಿಕರು ಸಂಕಷ್ಟಪಡುವಂತಾಗಿದೆ.

ಅಂಡಾರು ಗ್ರಾಮದ ಜನತೆ ಕಾರ್ಕಳ ತಾಲೂಕಿಗೆ ಹತ್ತಿರವಾಗಿದ್ದರೂ ಸಹ ವರಂಗ ಗ್ರಾ.ಪಂ. ವ್ಯಾಪ್ತಿಗೆ ಬರುವುದರಿಂದ ಹೆಬ್ರಿ ತಾಲೂಕಿಗೆ ಸೇರಿಸಲಾಗಿತ್ತು. ತಾಲೂಕು ರಚನೆ ಸಂದರ್ಭ ಜನಪ್ರತಿನಿಧಿಗಳು, ಅಧಿಕಾರಿಗಳು ಅಂಡಾರು ಗ್ರಾಮವನ್ನು ವರಂಗ ಪಂ.ನಿಂದ ಬೇರ್ಪಡಿಸಿ ಕಾರ್ಕಳ ತಾಲೂಕಿನಲ್ಲಿಯೇ ಉಳಿಸಿದ್ದರೆ ಈ ಸಮಸ್ಯೆ ಉದ್ಬವವಾಗುತ್ತಿರಲಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ.

ಅಂಡಾರು ಗ್ರಾಮದಿಂದ ಕಾರ್ಕಳಕ್ಕೆ ಪ್ರತೀ ಅರ್ಧ ಗಂಟೆಗೆ ಒಂದು ಖಾಸಗಿ ಬಸ್‌ ವ್ಯವಸ್ಥೆ ಇರುವುದರಿಂದ ಅಂದಿನ ತಾಲೂಕು ಕೇಂದ್ರವಾಗಿದ್ದ ಕಾರ್ಕಳಕ್ಕೆ ಸಂಚರಿಸಲು ಅನುಕೂಲವಾಗಿತ್ತು. ಆದರೆ ಹೆಬ್ರಿ ತಾಲೂಕು ಕೇಂದ್ರವಾದ ಬಳಿಕ ಅಂಡಾರು ಗ್ರಾಮಸ್ಥರು ನೇರವಾಗಿ ತಾಲೂಕು ಕೇಂದ್ರ ಸಂಪರ್ಕಿಸಲು ಯಾವುದೇ ಬಸ್‌ ವ್ಯವಸ್ಥೆ ಇಲ್ಲದೆ ಹೈರಾಣಾಗಿದ್ದಾರೆ.

Advertisement

ಅಂಡಾರು ಗ್ರಾಮದಿಂದ ತಾಲೂಕು ಕೇಂದ್ರ ಹೆಬ್ರಿ ಸಂಪರ್ಕಿಸಲು ಒಂದೇ ಒಂದು ಸಂಚಾರಿ ಬಸ್‌ ಇಲ್ಲ. ಈ ಪರಿಣಾಮವಾಗಿ ಹಿರಿಯ ನಾಗರಿಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದವರು ಸಮಸ್ಯೆ ಪಡುವಂತಾಗಿದೆ.

ಸುತ್ತು ಬಳಸಿ ಸಂಚಾರ

ಅಂಡಾರು ಗ್ರಾಮವು ಹೆಬ್ರಿಯಿಂದ ಸುಮಾರು 23 ಕಿ.ಮೀ ದೂರದಲ್ಲಿದ್ದು ಸಾರಿಗೆ ಬಸ್‌ ಇಲ್ಲದೆ ಇರುವುದರಿಂದ ಕಾರ್ಕಳ ತಾಲೂಕಿನ ಅಜೆಕಾರು ಮಾರ್ಗವಾಗಿ ಸುಮಾರು 35 ಕಿ.ಮೀ.ಯಷ್ಟು ಸುತ್ತು ಬಳಸಿ ಸಂಚರಿಸಬೇಕಾಗಿದೆ. ಅಲ್ಲದೆ ಅಂಡಾರಿನಿಂದ ಸಂಚರಿಸುವ ಎಲ್ಲ ಖಾಸಗಿ ಬಸ್‌ಗಳು ಕಾರ್ಕಳಕ್ಕೆ ಸಂಚಾರ ನಡೆಸುವ ಬಸ್‌ಗಳಾಗಿದ್ದು ಹೆಬ್ರಿಗೆ ತೆರಳಬೇಕಾದರೆ ಅಜೆಕಾರಿನಲ್ಲಿ ಬೇರೆ ಖಾಸಗಿ ಬಸ್‌ ಹಿಡಿದು ಸಂಚಾರ ನಡೆಸಬೇಕಾದ ಅನಿವಾರ್ಯತೆ ಉಂಟಾಗಿದೆ. ಹೆಬ್ರಿ ತಾಲೂಕು ಕೇಂದ್ರಕ್ಕೆ ತೆರಳಬೇಕಾದರೆ 3 ಬಸ್‌ಗಳನ್ನು ಬದಲಾಯಿಸಿ ಸಂಚರಿಸಬೇಕಾಗಿದೆ. ಹೆಬ್ರಿ ಮುನಿಯಾಲು, ಕಾಡುಹೊಳೆ, ಅಂಡಾರು, ಕೆರ್ವಾಶೆ ಮಾರ್ಗವಾಗಿ ಖಾಸಗಿ ಅಥವ ಸರಕಾರಿ ಬಸ್‌ ಸಂಚಾರ ಪ್ರಾರಂಭವಾದರೆ ಈ ಸಮಸ್ಯೆ ಪರಿಹಾರ ಕಾಣಲಿದೆ.

ತಾ| ಹೋರಾಟ ಸಮಿತಿಯ ವಿರುದ್ಧ ನಾಗರಿಕರ ಅಸಮಾಧಾನ

ಅಂಡಾರು ಗ್ರಾಮವನ್ನು ಹೆಬ್ರಿ ತಾಲೂಕಿಗೆ ಸೇರಿಸಲು ಪ್ರಯತ್ನ ಪಟ್ಟ ತಾಲೂಕು ಹೋರಾಟ ಸಮಿತಿಯು ಸೂಕ್ತ ಸಂಚಾರ ವ್ಯವಸ್ಥೆ ಕಲ್ಪಿಸಲು ಯಾಕೆ ಒತ್ತಡ ತರುತ್ತಿಲ್ಲ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೋರಾಟ ಸಮಿತಿಯವರು, ಜನಪ್ರತಿನಿಧಿಗಳು, ವಿವಿಧ ಪಕ್ಷ ಮುಖಂಡರು ತಾ| ಕೇಂದ್ರ ಸಂಪರ್ಕಿಸಲು ಬೇಕಾದ ಮೂಲ ಆವಶ್ಯಕತೆಯಾದ ಸಾರಿಗೆ ವ್ಯವಸ್ಥೆ ಕಲ್ಪಿಸಲು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ದೂರಿದ್ದಾರೆ.

ವಿದ್ಯಾರ್ಥಿಗಳಿಗೆ ಅನುಕೂಲ

ಹೆಬ್ರಿ ಅಂಡಾರು ನಡುವೆ ಬಸ್‌ ವ್ಯವಸ್ಥೆ ಆದಲ್ಲಿ ಕೇವಲ ಅಂಡಾರು ಗ್ರಾಮಸ್ಥರಿಗಲ್ಲದೆ ಅಂಡಾರು, ಶಿರ್ಲಾಲು, ಕೆರ್ವಾಶೆ ಗ್ರಾಮದ ವಿದ್ಯಾರ್ಥಿಗಳಿಗೂ ಹೆಚ್ಚಿನ ಅನುಕೂಲವಾಗಲಿದೆ.

ಈ ಭಾಗದ ಹೆಚ್ಚಿನ ವಿದ್ಯಾರ್ಥಿಗಳು ಮುನಿಯಾಲಿನ ಸರಕಾರಿ ಪಬ್ಲಿಕ್‌ ಸ್ಕೂಲ್‌ಗೆ ತೆರಳುವುದರಿಂದ ಕಾಡುಹೊಳೆ ಮಾರ್ಗವಾಗಿ ಬಸ್‌ ವ್ಯವಸ್ಥೆ ಆದಲ್ಲಿ ಅನುಕೂಲವಾಗಲಿದೆ. ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಮುನಿಯಾಲಿನಲ್ಲಿ ಎಲ್‌ಕೆಜಿಯಿಂದ ಪದವಿ ಪೂರ್ವ ತನಕ ಉಚಿತ ಶಿಕ್ಷಣ ಹಾಗೂ ಸರಕಾರಿ ಪದವಿ ಕಾಲೇಜು ಮುನಿಯಾಲಿನಲ್ಲಿ ಇರುವುದರಿಂದ ಈ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ.

ಹಲವು ಬಾರಿ ಮನವಿ

ಅಂಡಾರು ಗ್ರಾಮಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಕಳೆದ 5 ವರ್ಷಗಳಿಂದ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದರೂ ಈವರೆಗೆ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. 2021ನೇ ಸಾಲಿನ ವರಂಗ ಗ್ರಾಮ ಸಭೆಯಲ್ಲಿ ನಿರ್ಣಯವಾಗಿದ್ದು, 2021ರ ಎಪ್ರಿಲ್‌ ನಡೆದ ಹೆಬ್ರಿ ತಾ.ಪಂ. ಸಭೆಯಲ್ಲಿಯೂ ನಿರ್ಣಯ ಕೈಗೊಳ್ಳಲಾಗಿದೆಯೇ ವಿನಹ ಯಾವುದೇ ಕ್ರಮ ಕೈಗೊಂಡಿಲ್ಲ. ಜನಪ್ರತಿನಿಧಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ವರಂಗ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಅಂಡಾರು ಗ್ರಾಮಕ್ಕೆ ಕಾಡುಹೊಳೆ ಮಾರ್ಗವಾಗಿ ಬಸ್ಸು ಸಂಚಾರ ವ್ಯವಸ್ಥೆ ತ್ವರಿತವಾಗಿ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

ವರಂಗ ಗ್ರಾ.ಪಂ. ವ್ಯಾಪ್ತಿಯ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಮೇ 27ರಂದು ಮುನಿಯಾಲಿನಲ್ಲಿ ನಡೆಯಲಿದ್ದು ಈ ಸಂದರ್ಭ ಸಾರಿಗೆ ಸಮಸ್ಯೆಗೆ ಪರಿಹಾರ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ಸ್ಥಳೀಯರಿದ್ದಾರೆ. ಈಗಾಗಲೇ ಅಂಡಾರು ಗ್ರಾಮಸ್ಥರು ಸಹಿ ಸಂಗ್ರಹ ಕಾರ್ಯ ಮಾಡಿದ್ದು ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಲಿದ್ದಾರೆ.

ಮುಖ್ಯಮಂತ್ರಿಗೆ ಮನವಿ

ಹೆಬ್ರಿ ತಾಲೂಕು ಕೇಂದ್ರದ ನೂತನ ಕಟ್ಟಡ ಉದ್ಘಾಟನೆಗೆ ಜೂ.1ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದು ಈ ಸಂದರ್ಭ ಅಂಡಾರು ಗ್ರಾಮಸ್ಥರ ಸಂಚಾರ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿಗೆ ಮನವಿ ಮಾಡಿ ಬಸ್‌ ವ್ಯವಸ್ಥೆ ಕಲ್ಪಿಸಲು ಆಗ್ರಹಿಸ ಲಾಗುವುದು ಎಂದು ಸ್ಥಳೀಯರು ಹೇಳಿದ್ದಾರೆ.

ಸಂಕಷ್ಟ ಸ್ಥಿತಿ

ಅಂಡಾರು ಗ್ರಾಮ ಹೆಬ್ರಿ ತಾಲೂಕಿನ ಅಂಚಿನ ಗ್ರಾಮವಾಗಿದ್ದು ತ್ವರಿತವಾಗಿ ಬಸ್‌ ಸಂಚಾರ ವ್ಯವಸ್ಥೆ ಆಗಬೇಕಾಗಿದೆ. ಕಳೆದ 5 ವರ್ಷಗಳಿಂದ ಜನರು ದುಬಾರಿ ಬಾಡಿಗೆ ವಾಹನ ಮಾಡಿ ಅಥವಾ ಸುತ್ತು ಬಳಸಿ ಸಂಚಾರ ಮಾಡಿ ಸಂಕಷ್ಟಪಟ್ಟಿದ್ದಾರೆ ಮುಂದಿನ ದಿನಗಳಲ್ಲಾದರೂ ಬಸ್‌ ವ್ಯವಸ್ಥೆ ಆಗಲಿ. -ಜಗನ್ನಾಥ ಶೆಟ್ಟಿ ಅಂಡಾರು, ಸ್ಥಳೀಯರು

-ಜಗದೀಶ್‌ ಅಂಡಾರು

Advertisement

Udayavani is now on Telegram. Click here to join our channel and stay updated with the latest news.

Next