ಹುಬ್ಬಳ್ಳಿ: ಕೋವಿಡ್ 19 ಲಾಕ್‌ಡೌನ್ ರಕ್ತ ಭಂಡಾರಗಳ ಮೇಲೂ ಸಾಕಷ್ಟು ಪರಿಣಾಮ ಬೀರುತ್ತಿದೆ. ರಕ್ತದಾನಿಗಳ ಸಂಖ್ಯೆಯೂ ಕ್ಷೀಣಿಸುತ್ತಿದ್ದು, ಹೀಗಾಗಿ ರಕ್ತ ಸಂಗ್ರಹ ಕೊರತೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದೆ.
ಇಲ್ಲಿನ ನೀಲಿಜಿನ್ ರಸ್ತೆಯಲ್ಲಿರುವ ರಾಷ್ಟ್ರೋತ್ಥಾನ ರಕ್ತನಿಧಿ ಭಂಡಾರದಲ್ಲಿ ಪ್ರತಿ ತಿಂಗಳು 400-600 ಯುನಿಟ್‌ನಷ್ಟು ರಕ್ತ ಸಂಗ್ರಹವಾಗುತ್ತಿತ್ತು. ಪ್ರತಿ ತಿಂಗಳಿಗೆ 12-15 ರಕ್ತದಾನ ಶಿಬಿರಗಳನ್ನು ನಡೆಸಲಾಗುತ್ತಿತ್ತು. ಲಾಕ್‌ಡೌನ್ ಘೋಷಣೆ ಆಗುತ್ತಿದ್ದಂತೆ ರಕ್ತದಾನ ಶಿಬಿರಗಳು ಸ್ಥಗಿತಗೊಂಡವು. ಇದರ ಪರಿಣಾಮ ರಾಷ್ಟ್ರೋತ್ಥಾನ ರಕ್ತನಿಧಿ ಭಂಡಾರದಿಂದ ಮಾರ್ಚ್‌ನಲ್ಲಿ ಕೇವಲ 2-3 ರಕ್ತದಾನ ಶಿಬಿರಗಳು ನಡೆದವು. ಕೇವಲ 40-50 ಯುನಿಟ್‌ನಷ್ಟು ರಕ್ತ ಸಂಗ್ರಹವಾಗಿತ್ತು.
ರಕ್ತದಾನಿಗಳ ಸಂಖ್ಯೆ ಕ್ಷೀಣಿಸುತ್ತಿದ್ದಂತೆ ಹಾಗೂ ರಕ್ತ ಸಂಗ್ರಹ ಕಡಿಮೆ ಆಗುತ್ತಿದ್ದಂತೆ ಭಂಡಾರದಿಂದ ಕಾಯಂ ರಕ್ತದಾನಿಗಳನ್ನು ಸಂಪರ್ಕಿಸಿ ರಕ್ತದಾನ ಮಾಡಲು ಮನವಿ ಮಾಡಲಾಯಿತು. ಅಲ್ಲದೇ ರಕ್ತದಾನ ಮಾಡಲು ಇಚ್ಛಿಸುವವರನ್ನು ಅವರಿದ್ದಲ್ಲಿಗೆ ಸಂಸ್ಥೆಯ ವಾಹನ ತೆಗೆದುಕೊಂಡು ಹೋಗಿ ಕರೆತಂದು ರಕ್ತ ಪಡೆದುಕೊಂಡು ಬಳಿಕ ಅವರನ್ನು ವಾಪಸ್ ಮನೆಗೆ ಬಿಡುವ ವ್ಯವಸ್ಥೆ ಮಾಡಲಾಯಿತು. ಹೀಗಾಗಿ 2-3 ದಿನಗಳಲ್ಲಿ 50-100 ಯುನಿಟ್‌ನಷ್ಟು ರಕ್ತ ಸಂಗ್ರಹವಾಯಿತು ಎನ್ನುತ್ತಾರೆ ರಾಷ್ಟ್ರೋತ್ಥಾನ ರಕ್ತನಿಧಿ ಭಂಡಾರದವರು. ನಗರದಲ್ಲಿನ ಬಹುತೇಕ ಬ್ಲಿಡ್ ಬ್ಯಾಂಕ್‌ಗಳು ರಕ್ತ ಸಂಗ್ರಹದ ಸಮಸ್ಯೆಯನ್ನು ಎದುರಿಸುತ್ತಿವೆ.
ರಕ್ತದ ಬೇಡಿಕೆ ಕಡಿಮೆ: ಕೋವಿಡ್ 19 ವ್ಯಾಪಿಸುವುದಕ್ಕಿಂತಲೂ ಮೊದಲು ರಾಷ್ಟ್ರೋತ್ಥಾನ ರಕ್ತನಿಧಿ ಭಂಡಾರಕ್ಕೆ ಪ್ರತಿದಿನ ಕನಿಷ್ಟ 20-30 ಯುನಿಟ್ ನಷ್ಟು ಬೇಡಿಕೆ ಬರುತ್ತಿತ್ತು. ಆದರೀಗ 6-7 ಯುನಿಟ್‌ಗಳಷ್ಟು ಮಾತ್ರ ಬೇಡಿಕೆಯಿದೆ. ಇದಕ್ಕೆ ಕಾರಣ ಬಹುತೇಕ ಖಾಸಗಿ ಆಸ್ಪತ್ರೆಗಳು ಹೊರ ರೋಗಿಗಳ ವಿಭಾಗ (ಒಪಿಡಿ) ಮುಚ್ಚಿವೆ. ತುರ್ತು ಇದ್ದರೆ ಮಾತ್ರ ದಾಖಲು ಮಾಡಿಕೊಳ್ಳುತ್ತಿವೆ. ಲಾಕ್‌ಡೌನ್ ಘೋಷಣೆ ಆದ ಆರಂಭದಲ್ಲಿ ಬೇಡಿಕೆ ಇತ್ತು. ಆದರೆ ಈಗ ಖಾಸಗಿ ಆಸ್ಪತ್ರೆಗಳು ಒಪಿಡಿ ಬಂದ್ ಮಾಡಿದ್ದರಿಂದ ರಕ್ತದ ಬೇಡಿಕೆ ಕಡಿಮೆ ಆಗಿದೆ. ಕಾರಣ ಪಿಕ್‌ಅಪ್ ಆ್ಯಂಡ್ ಡ್ರಾಪ್ ಅನ್ನು 2-3 ದಿನ ಸ್ಥಗಿತಗೊಳಿಸಲಾಗುತ್ತಿದೆ ಎಂದು ರಕ್ತಭಂಡಾರದವರು ಹೇಳುತ್ತಾರೆ.
ಇನ್ಸ್‌ಪೆಕ್ಟರ್ ರಕ್ತದಾನ : ದೇಶಾದ್ಯಂತ ಲಾಕ್‌ಡೌನ್ ಆದ ನಿಮಿತ್ತ ರಕ್ತದಾನಿಗಳ ಸಂಖ್ಯೆ ಕಡಿಮೆ ಆಗುತ್ತಿದೆ ಎಂಬುದನ್ನು ಅರಿತ ನಗರದ ವಿಮಾನ ನಿಲ್ದಾಣದ ಇನ್ಸ್‌ಸ್ಪೆಕ್ಟರ್ ಜಗದೀಶ ಹಂಚಿನಾಳ ಹಾಗೂ ಇನ್ನಿತರರು ರವಿವಾರ ರಾಷ್ಟ್ರೋತ್ಥಾನ ರಕ್ತನಿಧಿ ಭಂಡಾರಕ್ಕೆ ತೆರಳಿ ರಕ್ತದಾನ ಮಾಡಿ ಸಾಮಾಜಿಕ ಕಾಳಜಿ ಮೆರೆದಿದ್ದಾರೆ. ಹಂಚಿನಾಳ ಅವರು ಕಳೆದ ಮೂರು ವರ್ಷಗಳಿಂದ ತಮ್ಮ ಜನ್ಮದಿನದಂದು ರಕ್ತದಾನ ಮಾಡುತ್ತ ಬಂದಿದ್ದಾರೆ. ಇವರು ರಕ್ತದಾನ ಮಾಡಿದ್ದನ್ನು ಕೇಳಿದ ಕೆಲವು ಕೆಎಸ್‌ಐಎಸ್‌ಎಫ್ ಹಾಗೂ ಇತರೆ ಪೊಲೀಸರು ಸಹಿತ ಸ್ವ-ಇಚ್ಛೆಯಿಂದ ರಕ್ತದಾನ ಮಾಡಲು ಮುಂದಾಗಿದ್ದಾರೆ.
ಕೋವಿಡ್ 19ಲಾಕ್‌ಡೌನ್ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರಗಳು ರದ್ದಾಗಿವೆ. ಇದರಿಂದಾಗಿ ರಕ್ತನಿಧಿ ಭಂಡಾರದಲ್ಲಿ ರಕ್ತ ಸಂಗ್ರಹ ಕಡಿಮೆಯಾಗಿದೆ ಹಾಗೂ ರಕ್ತದಾನಿಗಳ ಸಂಖ್ಯೆಯೂ ಕ್ಷೀಣಿಸಿದೆ. ಕಾರಣ ಸಂಸ್ಥೆಯಿಂದ ಪಿಕ್‌ಅಪ್ ಆ್ಯಂಡ್ ಡ್ರಾಪ್ ವ್ಯವಸ್ಥೆ ಮಾಡಿದ್ದರಿಂದ ಸುಮಾರು 100 ಯುನಿಟ್‌ದಷ್ಟು ರಕ್ತ ಸಂಗ್ರಹವಾಗಿದೆ. ಆದರೆ ಖಾಸಗಿ ಆಸ್ಪತ್ರೆಗಳು ಒಪಿಡಿ ಬಂದ್ ಮಾಡಿದ್ದರಿಂದ ರಕ್ತದ ಬೇಡಿಕೆ ಕುಸಿದಿದೆ. ಹೀಗಾಗಿ 2-3ದಿನ ಪಿಕ್‌ಅಪ್ ಆ್ಯಂಡ್ ಡ್ರಾಪ್ ನಿಲ್ಲಿಸಲಾಗುವುದು. ಸ್ವ-ಇಚ್ಛೆಯಿಂದ ಯಾರಾದರೂ ರಕ್ತದಾನ ಮಾಡಲು ಮುಂದಾದರೆ ಸ್ವೀಕರಿಸಲಾಗುವುದು.
-ದತ್ತಮೂರ್ತಿ ಕುಲಕರ್ಣಿ, ಶಿಬಿರದ ಸಂಯೋಜಕ, ರಾಷ್ಟ್ರೋತ್ಥಾನ ರಕ್ತನಿಧಿ ಭಂಡಾರ
-ಶಿವಶಂಕರ ಕಂಠಿ