Advertisement

ಮೂಲ ಸೌಕರ್ಯಗಳ ಕೊರತೆ ನೀಗಿಸುವ ಕಾರ್ಯವಾಗಲಿ

07:21 PM Sep 14, 2021 | Team Udayavani |

ವಂಡ್ಸೆ: ವಂಡ್ಸೆ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಬಾರಿ ದಾಖಲೆ ಸಂಖ್ಯೆಯಲ್ಲಿ 55  ಮಕ್ಕಳು ಸೇರ್ಪಡೆಗೊಂಡಿದ್ದಾರೆ. ಇದು ವಿಶೇಷ ಮಾದರಿ ಶಾಲೆಯಾಗಿ ಮೂಡಿಬಂದಿದ್ದರೂ ಮೂಲ ಸೌಕರ್ಯಗಳ ಕೊರತೆ ಇದ್ದು, ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿಗಳು ಆ ಬಗ್ಗೆ ಆದ್ಯತೆ ನೀಡಿ, ಶಾಲೆಯ ಅಭಿವೃದ್ಧಿಗೆ ಇನ್ನಷ್ಟು ಬಲ ನೀಡಬೇಕಾಗಿದೆ.

Advertisement

ದಾಖಲೆಯ ದಾಖಲಾತಿ :

ಈ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 400 ವಿದ್ಯಾರ್ಥಿಗಳಿದ್ದಾರೆ. ಈ ಬಾರಿ 1ನೇ ತರಗತಿಗೆ 55 ಮಕ್ಕಳು ಸೇರ್ಪಡೆಗೊಂಡಿದ್ದಾರೆ. 2ನೇ ತರಗತಿಯಲ್ಲಿ 48 ಮಕ್ಕಳು, 3ನೇ ತರಗತಿಯಲ್ಲಿ 47, 4ನೇ ತರಗತಿಯಲ್ಲಿ 49, 5ನೇ ತರಗತಿಯಲ್ಲಿ 46, 6ನೇ ತರಗತಿಯಲ್ಲಿ 54, 7ನೇ ತರಗತಿಯಲ್ಲಿ 23 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಶಿಕ್ಷಕರ ಕೊರತೆ :

ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವ ಈ ದಿಸೆಯಲ್ಲಿ ಶಿಕ್ಷಕರ ಕೊರತೆ ಎದುರಾಗಿರುವುದು ಒಂದು ರೀತಿಯ ಮುಜುಗರದ ವಾತಾವರಣ ಸೃಷ್ಟಿಸಿದೆ. ಈ ಶಾಲೆಯಲ್ಲಿ 6 ಶಿಕ್ಷಕರಿದ್ದು. ಮುಖ್ಯ ಶಿಕ್ಷಕರ ಸಹಿತ 4 ಶಿಕ್ಷಕರ ಕೊರತೆ ಇದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಖಾಯಂ ಶಿಕ್ಷಕರ ನೇಮಕಾತಿ ಆಗದಿರುವುದು ವಿದ್ಯಾರ್ಥಿಗಳ ಶಿಕ್ಷಣಾಭ್ಯಾಸಕ್ಕೆ ತೊಡಕಾಗುವ ಸಾಧ್ಯತೆ ಇದೆ.

Advertisement

ಆಂಗ್ಲ ಮಾಧ್ಯಮ ಶಾಲೆ :

ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಪ್ರತ್ಯೇಕ ತರಗತಿ ಇದ್ದು, 6ನೇ ತರಗತಿ ತನಕ ಆಂಗ್ಲಮಾಧ್ಯಮ ಶಾಲೆ ನಡೆಯುತ್ತಿದ್ದು, ಮುಂದಿನ ವರ್ಷ 7ನೇ ತರಗತಿಯ ಆಂಗ್ಲಮಾಧ್ಯಮ ಶಾಲೆ ಆರಂಭಿಸುವ ಉದ್ದೇಶ ಹೊಂದಿದೆ.

ದಾನಿಗಳ ಸಹಾಯ :

ಅನೇಕ ದಾನಿಗಳು ಈಗಾಗಲೇ ಶಾಲಾಭಿವೃದ್ಧಿಗೆ ಸಹಾಯಧನ ಒದಗಿಸಿದ್ದು, ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಕೂಡ ಮ್ಯಾಚಿಂಗ್‌ ಗ್ರ್ಯಾಂಟ್‌ನಲ್ಲಿ ಸವಲತ್ತು ಒದಗಿಸಿದೆ. ಮಕ್ಕಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಂಡ್ಸೆ ಮಾದರಿ ಹಿ.ಪ್ರಾ. ಶಾಲೆಗೆ ಮೂಲ ಸೌಕರ್ಯ ಒದಗಿಸುವಲ್ಲಿ ಚಿಂತನ ಮಂಥ‌ನ ನಡೆಯಬೇಕಾಗಿದೆ.

ಶಾಲೆಯ ಸ್ಥಿತಿಗತಿ:

6 ತರಗತಿ ಕೊಠಡಿಗಳು, ಒಂದು ಶಾಲಾ ವಾಹನ, ಕ್ರೀಡಾಂಗಣ, ಟ್ರ್ಯಾಕ್‌ ಮತ್ತು ಕೋರ್ಟ್‌, ಕೆ.ಜಿ. ತರಗತಿ ವಿದ್ಯಾರ್ಥಿಗಳಿಗೆ ಕಿಂಡರ್‌ ಗಾರ್ಡನ್‌, ಪೀಠೊಪಕರಣ, ಸಿ.ಸಿ. ಕೆಮರಾ, ಪ್ರೊಜೆಕ್ಟರ್‌, ಕಂಪ್ಯೂಟರ್‌, ಬಯಲುವೇದಿಕೆ, ಸ್ವಾಗತ ಗೋಪುರ, ಉದ್ಯಾನವನ, ಪ್ರಯೋಗಾಲಯ, ವಾಚನಾಲಯ, ಸಭಾಭವನಕ್ಕೆ ಕುರ್ಚಿಗಳು, ಖಾಲಿ ಸ್ಥಳಗಳಿಗೆ ಇಂಟರ್‌ಲಾಕ್‌ ಅಳವಡಿಕೆ, ಮಕ್ಕಳಿಗೆ ಪ್ಲೇಟ್‌ ಮತ್ತು ಲೋಟ ಅಗತ್ಯವಿದ್ದು, ಇಲಾಖೆ ಹಾಗೂ ವಿದ್ಯಾಭಿಮಾನಿಗಳು ಗಮನ ಹರಿಸಬೇಕಾಗಿದೆ.

ಗುಣಮಟ್ಟದ ಶಿಕ್ಷಣ:

ಗ್ರಾಮೀಣ ಪ್ರದೇಶದ ವಂಡ್ಸೆ ಶಾಲೆಯಲ್ಲಿ ದಾಖಲೆ ಸಂಖ್ಯೆಯ ವಿದ್ಯಾರ್ಥಿಗಳು ಶಾಲೆಗೆ ಸೇರ್ಪಡೆಗೊಂಡಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಇಲ್ಲಿ ಮೂಲ  ಸೌಕರ್ಯ ಒದಗಿಸಲು ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಉದಯಕುಮಾರ್‌ ಶೆಟ್ಟಿ, ಅಧ್ಯಕ್ಷರು, ಗ್ರಾ.ಪಂ. ವಂಡ್ಸೆ

ಮಾದರಿ ಶಾಲೆ:

ವಂಡ್ಸೆ ಸರಕಾರಿ ಶಾಲೆಯು ಮಾದರಿ ಶಾಲೆಯಾಗಿ ಗುರುತಿಸಿಕೊಂಡಿದೆ. ಈ ದಿಸೆಯಲ್ಲಿ ಶಾಲೆಯ ಅಭಿವೃದ್ಧಿಗೆ ವಿದ್ಯಾಭಿಮಾನಿಗಳು, ಹಳೆವಿದ್ಯಾರ್ಥಿಗಳು, ಹೆಚ್ಚಿನ ಕಾಳಜಿ ವಹಿಸಿ ಶ್ರಮಿಸಬೇಕು.   ಕೃಷ್ಣಮೂರ್ತಿ ಮಂಜ, ಅಧ್ಯಕ್ಷರು, ಶ್ರೀ ಮೂಕಾಂಬಿಕಾ ಚಾರಿಟೆಬಲ್‌ ಟ್ರಸ್ಟ್‌ 

-ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next