Advertisement

ಮೂಲ ಸೌಲಭ್ಯ ಕೊರತೆ; ಪ್ರಯಾಣಿಕರಿಗೆ ತೊಂದರೆ

11:22 PM Jan 17, 2021 | Team Udayavani |

ಮೂಡುಬಿದಿರೆ: ಮೂಡುಬಿದಿರೆ ಪುರಸಭಾ ಸರಹದ್ದಿನ ಅಲಂಗಾರ್‌ನಲ್ಲಿ ಪಶ್ಚಿಮಕ್ಕೆ ಹೊರಳಿಕೊಂಡ ಕೊಡ್ಯಡ್ಕ-ಬೆಳ್ಮಣ್‌ನತ್ತ ಸಾಗುವ ರಸ್ತೆ ಮತ್ತು ನೇರ ಉತ್ತರಕ್ಕೆ ಸಾಗುವ ಕಾರ್ಕಳ ರಸ್ತೆ ಇವುಗಳ ಜಂಕ್ಷನ್‌ ಇದೆ. ಕೊಡ್ಯಡ್ಕ -ಬೆಳ್ಮಣ್‌ನತ್ತ ಸಾಗುವ ಬಸ್‌ಗಳೂ ನೇರ ಕಾರ್ಕಳಕ್ಕೆ ಸಾಗುವ ಬಸ್‌ಗಳೂ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ನಿಲ್ದಾಣ ಇದೇ ಆಗಿದೆ.

Advertisement

ಇಲ್ಲಿ ಎರಡು ಕಡೆಗೆ ಹೋಗುವ ಪ್ರಯಾಣಿಕರ ಒತ್ತಡ ಕಡಿಮೆ ಮಾಡಲೆಂದು ಕೆಲವು ವರ್ಷಗಳ ಹಿಂದೆ ಕಾರ್ಕಳದತ್ತ ಸಾಗುವ ಬಸ್‌ಗಳಿಗಾಗಿ ಐವತ್ತಡಿ ದೂರದಲ್ಲಿ ಎಡಗಡೆ ಒಂದು “ಪುಟ್ಟ ತಗಡಿನ ಸೂರು ಹೊದ್ದ’ ಬಸ್‌ ಸ್ಟಾಪ್‌’ ನಿರ್ಮಾಣವಾಯಿತು ಅಂದಿನ ಪುರಸಭೆಯಿಂದ. ಆದರೆ, ಅಲ್ಲಿ ತಗಡಿನ ಸೂರು ಬಿಟ್ಟರೆ ಬೇರೇನೂ ಇಲ್ಲ. ಬಟಾಂಬಯಲು. ಸುತ್ತ ಆವರಣವೂ ಇಲ್ಲ; ಕುಳಿತುಕೊಳ್ಳುವ ಯಾವ ಕನಿಷ್ಟ ಸೌಕರ್ಯವೂ ಇಲ್ಲ. ಇಲ್ಲಿ ಯಾವ ಪ್ರಯಾಣಿಕರೂ ನಿಂತು ಬಸ್‌ಗಾಗಿ ಕಾಯುವುದು ಕಾಣಿಸುತ್ತಿಲ್ಲ. ಆಕಸ್ಮಾತ್‌ ಯಾರಾದರೂ ನಿಂತರೆ ಎಲ್ಲೋ ಶಟಲ್‌ ಬಸ್‌ಗಳು ನಿಂತರೂ ನಿಂತಾವು. ಎಕ್ಸ್‌ಪ್ರೆಸ್‌ ನಿಂತದ್ದು ಗೊತ್ತಿಲ್ಲ. (ಜಂಕ್ಷನ್‌ನಲ್ಲಿ ಜನ ಇಲ್ಲದೆ ಪ್ರಯಾಣಿಕರ ಕೊರತೆ ಇದ್ದರೆ ನಿಲ್ಲಿಸಿಯಾರು). ಬಸ್‌ಸ್ಟಾಪ್‌ ಎಂಬ ನಾಮಫಲಕವಿದೆ, ಬಿಸಿಲಲ್ಲಿ ಒಣಗಿ ಮುಖ ಕಳಾಹೀನವಾಗಿ ನಿಸ್ತೇಜವಾಗಿದೆ.

ಈ ತಗಡಿನ ಸೂರಿನ ಕಂಬಕ್ಕೆ ಯಾರೋ ಸ್ವೀಟ್‌ಕಾರ್ನ್ ಮಾರುವವರು ತಮ್ಮ ಟೇಬಲನ್ನು ಸರಪಳಿ ಮೂಲಕ ಬಿಗಿದು ತಮಗಾದರೂ ಏನಾದರೂ ಗಿಟ್ಟಲಿ ಎಂಬ ಸೂಚನೆ ಕಾಣಿಸುತ್ತಿದೆ. ಇದರ ಕಂಬಗಳು ಬ್ಯಾನರ್‌ಗಳಿಗೆ ಆಧಾರವಾಗುತ್ತಿವೆ ಸದ್ಯ.

ಈ ಜಾಗದಲ್ಲಿ ಕಾರ್ಕಳದತ್ತ ಸಾಗುವ ಬಸ್‌ಗಳು ನಿಲ್ಲುವಂಥ ಮತ್ತು ಬಸ್‌ಗಾಗಿ ಕಾಯುವ ಪ್ರಯಾಣಿಕರಿಗೆ ಸೂಕ್ತ, ಕನಿಷ್ಟ ಸೌಕರ್ಯಗಳಿರುವ ತಂಗುದಾಣ ರೂಪುಗೊಳ್ಳಬೇಕಾಗಿದೆ.

ಇದರ ಎದುರು ಸ್ವಲ್ಪ ತಾಣ ವ್ಯತ್ಯಾಸಗೊಳಿಸಿ ಕಾರ್ಕಳದಿಂದ ಬರುವ ಬಸ್‌ಗಳಿಗಾಗಿ ಪ್ರಯಾಣಿಕರ ತಂಗುದಾಣ ನಿರ್ಮಾಣವಾಗಬೇಕಾಗಿದೆ.

Advertisement

 

ಪ್ರಯಾಣಿಕರ ಅನುಕೂಲಕ್ಕಾಗಿ ಈ ಬಸ್‌ ನಿಲ್ದಾಣವನ್ನು ಸುವ್ಯವಸ್ಥಿತವಾಗಿ ರೂಪಿಸಲು ಆದಷ್ಟು ಬೇಗ ಪ್ರಯತ್ನಿಸುತ್ತೇನೆ.   -ಪ್ರಸಾದ್‌ ಕುಮಾರ್‌,  ಅಧ್ಯಕ್ಷರು, ಮೂಡುಬಿದಿರೆ ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next