ಹಾರೋಹಳ್ಳಿ: ಹಾರೋಹಳ್ಳಿ ತಾಲೂಕು ಕೇಂದ್ರವಾಗಿ ಉದ್ಘಾಟನೆಗೊಂಡು ಒಂದು ತಿಂಗಳು ಕಳೆಯುತ್ತ ಬಂದರು ಸಹ ಮೂಲಸೌಕರ್ಯಗಳಿಲ್ಲದೆ ಸಾರ್ವಜನಿಕರು ಪರದಾಡುವ ಸ್ಥಿತಿ ಬಂದಿರುವುದು ದುರಂತ ಸಂಗತಿ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ವಿವಿಧ ಇಲಾಖೆ ಕಚೇರಿ ಎಲ್ಲಿವೆ: ತಾಲೂಕು ಕೇಂದ್ರವಾಗಿ ಒಂದು ತಿಂಗಳು ಕಳೆಯುತ್ತ ಬಂದರು ಸಹ ಸುಮಾರು ಇಲಾಖೆಗಳು ಎಲ್ಲಿವೆ ಮತ್ತು ಎಲ್ಲಿ ಕಚೇರಿಗಳನ್ನು ತೆರೆದು ಅಧಿಕಾರಿಗಳು ಜನತೆಯ ಕೆಲಸಗಳನ್ನು ಮಾಡಿಕೊಡುತ್ತಿದ್ದಾರೆ ಎಂಬುದು ಸಾರ್ವಜನಿಕರಿಗೆ ಗೊತ್ತಿಲ್ಲ . ಜೊತೆಗೆ ಆಯಾ ಇಲಾಖೆಯ ಅಧಿಕಾರಿಗಳು ಬಂದಿದ್ದಾರ ಎನ್ನುವ ಮಾಹಿತಿ ಗೊತ್ತಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದರೂ ಸಹ ಜನಪ್ರತಿನಿಧಿಗಳು ಕಂಡು ಕಾಣದಂತೆ ಕಣ್ಮುಂಚಿ ಕುಳಿತು ಕೊಂಡಿದ್ದಾರೆ ಎಂದು ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಜನತೆಗೆ ವಂಚನೆ: ತಾಲೂಕು ಕೇಂದ್ರಕ್ಕೆ ನಮ್ಮ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿದ್ದೇನೆ ಎಂದು ಆಡಳಿತ ಪಕ್ಷದ ಅಶ್ವತ್ಥ್ ನಾರಾಯಣಗೌಡ ನಮ್ಮ ಸರ್ಕಾರದ ಅವಧಿಯಲ್ಲಿ ಎಂದು ಹೇಳುತ್ತಾರೆ ಹಾಗೂ ಕುಮಾರಸ್ವಾಮಿ ಸಿಎಂ ಆಗಿದ್ದಾಗ ತಾಲೂಕು ಕೇಂದ್ರ ಮಾಡಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ ಎಂದು ಹಾಲಿ ಶಾಸಕರು ಹೇಳುತ್ತಾರೆ. ಆದರೆ, ಹಣ ಬಿಡುಗಡೆ ಯಾಗಿದ್ದಾರೆ ಇನ್ನೂ ಏಕೆ ಕಟ್ಟಡಗಳನ್ನು ಕಟ್ಟಿಲ್ಲ ಅಥವಾ ಪರಿಹಾರವಾಗಿ ಬಾಡಿಗೆ ಕಟ್ಟಡಗಳನ್ನು ಏಕೆ ಮಾಡಿಲ್ಲ. ಇದಕ್ಕೆ ಉಸ್ತುವಾರಿ ಸಚಿವರು ಮತ್ತು ಶಾಸಕರು ಜನತೆಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ರೈತರು ಅಲೆಯುವುದು ತಪ್ಪಿಲ್ಲ : ಹಾರೋಹಳ್ಳಿ ತಾಲೂಕು ಕೇಂದ್ರವಾಗಿದ್ದರೂ ಸಹ ವಿವಿಧ ಇಲಾಖೆ ಕಚೇರಿಯಗಳ ಕೆಲಸಗಳು ಆಗದೆ ರೈತರು ಸೇರಿದಂತೆ ಸಾರ್ವಜನಿಕರು ಅಲೆಯುವುದು ಇನ್ನೂ ತಪ್ಪಲ್ಲ . ಜನಪ್ರತಿನಿಧಿಗಳಿಗೆ ಇಡಿ ಶಾಪ ಹಾಕು ವುದು ಇನ್ನೂ ತಪ್ಪಿಲ್ಲ. ಹಾರೋಹಳ್ಳಿ ಗ್ರಾಮ ಪಟ್ಟಣ ಪಂಚಾಯತಿ ಆಗುವ ಮೊದಲು ಗ್ರಾಪಂ ಸಭೆಯಲ್ಲಿ ನಡೆದಂತಹ ಕಾರ್ಯವೈಖರಿಯಲ್ಲಿ ವಿಶೇಷವಾಗಿ ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಮಾಡಲಾಗುವುದು ನಿರ್ಧಾರ ಕೈಗೊಂಡಿದ್ದರು ಆದರೂ ಅದು ವಿಫಲಗೊಂಡಿದೆ.
ಚುನಾವಣೆ ಸಮಯದಲ್ಲಿ ಮಾತ್ರ ಗುದ್ದಲಿಪೂಜೆ: ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಸರ್ಕಾರದಲ್ಲಿ ಹಣ ಬಿಡುಗಡೆಯಾಗಿದೆ ಎಂದು ಗೊಂದಲ ಸೃಷ್ಟಿಸುತ್ತಿರುತ್ತಾರೆ. ಬಿಡುಗಡೆಯಾಗಿದೆ ಹಣ ಎಲ್ಲಿ ಹೋಯಿತು ಚುನಾವಣೆ ಸಮಯದಲ್ಲಿ ಮಾತ್ರ ಬಂದು ಜನರನ್ನು ಮಾತನಾಡಿಸಿ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ಮಾಡಿ ಹೋಗುತ್ತಾರೆ ನಂತರ ಆ ಕಾಮಗಾರಿಗಳು ಪೂರ್ಣಗೊಂಡಿದೆಯ ಅಥವಾ ಆ ಕುಂಠಿತಗೊಂಡಿದೆಯೆ ಎಂಬುದನ್ನು ತಲೆ ಹಾಕಿಯು ಸಹ ಇತ್ತ ತಿರುಗಿ ನೋಡುವುದಿಲ್ಲ. ಎಷ್ಟೋ ಕಾಮಗಾರಿಗಳಿಗೆ ಅನುದಾನವಿಲ್ಲದೆ ನೆನೆಗುದಿಗೆ ಬಿದ್ದಿರುವ ನಿದರ್ಶನಗಳು ಸಹ ಇದೆ.
ಗಬ್ಬುನಾರುತ್ತಿರುವ ಪಟ್ಟಣ : ಈ ಹಿಂದೆ ಗ್ರಾಮ ಪಂಚಾಯಿತಿಯಾಗಿತು ಆದರೆ, ಈಗ ಪಟ್ಟಣ ಪಂಚಾಯತಿಯಾಗಿದೆ. ಆದರೆ ಕಸವಿಲೇವಾರಿ ಮರೀಚಿಕೇಯಾಗಿದೆ. ಎಲ್ಲಿ ನೋಡಿದರೂ ಸಹ ಕಸದ ರಾಶಿಗಳು. ಅದರಲ್ಲೂ ಕೋಳಿ ಅಂಗಡಿಗಳ ಘನತ್ಯಾಜ್ಯ ಕಸಗಳನ್ನು ಅಂಗಡಿ ಮಾಲಿಕರು ರಸ್ತೆಯಲ್ಲಿ ಮತ್ತು ಕೆರೆಯ ಅಕ್ಕಪಕ್ಕದಲ್ಲಿ ಬಿಸಾಕಿ ಹೋಗುತ್ತಾರೆ. ಇದನ್ನು ಪಟ್ಟಣ ಪಂಚಾಯತಿಯ ಅಧಿಕಾರಿಗಳು ಕೇಳುವ ಗೋಜಿಗೆ ಹೋಗದೆ ನಾಯಿಗಳ ಕಾಟ ಹೆಚ್ಚಾಗಿ ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಎಷ್ಟೋ ಬಾರಿ ನಾಯಿಗಳು ರಸ್ತೆಯ ಮಧ್ಯಕ್ಕೆ ಬಂದು ಅಪಘಾತಗಳು ಆಗುತ್ತಿದ್ದರು ಸಹ ಪಟ್ಟಣ ಪಂಚಾಯತಿ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಕಿವುಡರಾಗಿ ಕೈಕಟ್ಟಿ ಕುಳಿತು ಕೊಂಡಿದ್ದಾರೆ.