Advertisement

ಅರಸರ ಹೆಸರಿನ ಭವನಕ್ಕಿಲ್ಲ ಅನುದಾನ

02:30 PM Aug 20, 2022 | Team Udayavani |

ಹುಣಸೂರು: ನಾಡುಕಂಡ ಅಪರೂಪದ ರಾಜಕಾರಣಿ, ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸರ ಶತಮಾನೋತ್ಸವ ಕಳೆದು 7 ವರ್ಷವಾದರೂ ಭವನಕ್ಕೆ ಮೂಲಭೂತ ಸೌಕರ್ಯ ಕಲ್ಪಿಸದೆ ಹಾಳುಕೊಂಪೆಯ ಬಂಗಲೆ ಯಂತಾಗಿದ್ದು, ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

Advertisement

ಶತಮಾನೋತ್ಸವಕ್ಕೆ ಗುದ್ದಲಿ ಪೂಜೆ: 2016ರ ದೇವರಾ ಜರಸರ ಶತಮಾನೋತ್ಸವಕ್ಕಾಗಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿ.ದೇವರಾಜ ಅರಸರ ಹೆಸರು ಚಿರಸ್ಥಾಯಿಯಾಗಿಸುವ ಹಲವು ಕಾರ್ಯ ಕ್ರಮಗಳನ್ನು ಘೋಷಿಸಿ, ಹುಣಸೂರು ನಗರದಲ್ಲಿ 10 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದಲ್ಲದೆ ಹುಣಸೂರು-ಮೈಸೂರು ಹೆದ್ದಾರಿಯ ಬೈಪಾಸ್‌ ಬಳಿ 7.90 ಕೋಟಿ ವೆಚ್ಚದಲ್ಲಿ ಸುಂದರವಾದ ಅರಸು ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಅವರ ಹುಟ್ಟೂರು ಕಲ್ಲಹಳ್ಳಿಯಲ್ಲಿ ಮ್ಯೂಸಿಯಂ ನಿರ್ಮಾಣಕ್ಕೂ ಅನುದಾನ ನೀಡಿದ್ದರು. ಆದರೆ ಕಟ್ಟಡದ ಕಾಮಗಾರಿ ಮುಗಿದು ನಾಲ್ಕು ವರ್ಷಗಳೇ ಸಂದಿದೆ. ಭವನಕ್ಕೆ ಮೂಲಭೂತ ಸೌಕರ್ಯ ಕಲ್ಪಿಸದೆ ಉಪಯೋಗಕ್ಕೆ ಬಾರದ ಪಾಳು ಬಂಗಲೆಯಾಗಿದ್ದು, ಈ ಸಂಬಂಧ ಅಂದಿನ-ಇಂದಿನ ಸರಕಾರಕ್ಕೆ ಶಾಸಕ ಮಂಜುನಾಥರು ಹತ್ತಾರು ಬಾರಿ ಮನವಿ ಮಾಡಿದ್ದರೂ ಯಾವ ಕ್ರಮವನ್ನೂ ಕೈಗೊಳ್ಳದ ಸರಕಾರ ಸಂಪೂರ್ಣ ನಿರ್ಲಕ್ಷಿಸಿದ್ದು, ಸಾರ್ವಜನಿಕರು, ಅರಸರ ಅಭಿಮಾನಿಗಳು ಆಕ್ರೋಶಿತರಾಗಿದ್ದಾರೆ.

ಅಕ್ರಮಗಳ ಆಶ್ರಯತಾಣ: ಹೆದ್ದಾರಿ ಪಕ್ಕದಲ್ಲೇ ಇರುವ ಭವನ ಕಾಮಗಾರಿ ಮುಗಿಸಿದ ನಂತರ ಕಾವಲುಗಾರರು, ವಿದ್ಯುತ್‌ ದೀಪ, ನಿರ್ವಹಣೆ ಇಲ್ಲದೆ ಆವರಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು ರಾತ್ರಿವೇಳೆ ಕಳ್ಳಕಾಕರ, ಅಕ್ರಮ ಚಟುವಟಿಕೆಗೆ ಆಶ್ರಯ ತಾಣವಾಗಿದೆ. ಕಚೇರಿಗಳಿಗೂ ಅವಕಾಶ: ಅರಸು ಭವನದ ನೆಲ ಅಂತಸ್ತಿನಲ್ಲಿ ಉಪಾಹಾರ ಸೇವಿಸಲು, ಸುಮಾರು 6-8 ಸರಕಾರಿ ಕಚೇರಿಗಳಿಗೆ ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ಆದರೆ ಅನುದಾನ ಕೊರತೆಯಿಂದ ಕಚೇರಿ ಕೊಠಡಿಗಳ ವಿಭಾಗ ಮಾಡಲು ಸಾಧ್ಯವಾಗದೆ ಕೆಲ ಕಚೇರಿಗಳು ಬಾಡಿಗೆ ಇಲ್ಲವೇ ಅಭದ್ರ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಎಲ್ಲದಕ್ಕೂ ಕೋವಿಡ್‌ ಕಾರಣವೇ?: ಸರಕಾರ ಬದಲಾದಂತೆ ಬಂದೆರಗಿದ ಕೋವಿಡ್‌-19 ನೆಪವೊ ಡ್ಡಿದ ಇಂದಿನ ಸರಕಾರವು ಅಂದು 10 ಕೋಟಿ ಬಿಡುಗಡೆ ಮಾಡಿದ್ದ ಸಿದ್ದರಾಮಯ್ಯ ಸರಕಾರದ ಅವಧಿಯ ಉಳಿಕೆ 2.5 ಕೋಟಿ ರೂ. ಅನುದಾನ ಬಿಡುಗಡೆಗೆ ಮೀನಮೇಷ ಎಣಿಸುತ್ತಿರುವ ಪರಿಣಾ ಮವೇ ಭವನಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲವೆಂಬುದು ಅಧಿಕಾರಿವರ್ಗದ ಮಾತಾ ಗಿದ್ದು. ಪರಿಣಾಮ ಭವನ ಬಹುತೇಕ ಪೂರ್ಣ ಗೊಂಡಿದ್ದರೂ ಬಳಸದಂತಹ ಸ್ಥಿತಿಗೆ ತಂದಿಟ್ಟಿದೆ.

ಆರಂಭವಾಗದ ಮ್ಯೂಸಿಯಂ: ದೇವರಾಜ ಅರಸರ ಬದುಕು, ಹೋರಾಟ, ಸಾಧನೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಸಲುವಾಗಿ ಅರಸರ ಹುಟ್ಟೂರು ಕಲ್ಲಹಳ್ಳಿಯಲ್ಲಿ 2.5 ಕೋಟಿ ವೆಚ್ಚದಡಿ ಮ್ಯೂಸಿಯಂ ನಿರ್ಮಿಸಬೇಕೆಂಬ ಉದ್ದೇಶ ಸ್ಥಳ ಕೊರತೆಯಿಂದ ನನೆಗುದಿಗೆ ಬಿದ್ದಿದೆ. ಹೀಗಾಗಿ ಈ ಅನುದಾನ ವನ್ನು ಅರಸು ಭವನಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲು ಬಳಸಿಕೊಳ್ಳಲು ಚೇಂಜ್‌ ಆಫ್‌ ವರ್ಕ್‌ಗೆ ಸರಕಾರಕ್ಕೆ ಮನವಿ ಮಾಡಿದ್ದರೂ ಅನುದಾನ ಬಿಡುಗಡೆಗೆ ಮುಂದಾಗದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

Advertisement

ವರ್ಷಕ್ಕೊಮ್ಮೆ ಅರಸರ ನೆನಪು : ದೇವರಾಜ ಅರಸರ ಆಡಳಿತ ಬಗ್ಗೆ ಮಾತನಾಡುವ, ಪ್ರಶಂಸಿಸುವ ರಾಜಕಾರಣಿಗಳು ಅವರ ಹೆಸರಿನ ಭವನ ನನೆಗುದಿಗೆ ಬಿದ್ದಿರುವುದು ಅದರಲ್ಲೂ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಗಮನಕ್ಕೆ ಬಂದಿದ್ದರೂ ಇರುವ ಅನುದಾನವನ್ನೂ ಬಿಡುಗಡೆ ಮಾಡಿಸಲು ಆಗದಿರುವುದು ಆಡಳಿತ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎನ್ನಬಹುದು. ಈ ಭವನ ಪೂರ್ಣಗೊಂಡು ಯಾವಾಗ ಸಾರ್ವಜನಿಕ ಸೇವೆಗೆ ಸಮರ್ಪಣೆಗೊಳ್ಳಲಿದೆ ಎಂಬುದು ಸಾರ್ವಜನಿಕವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹಣ ಬಿಡುಗಡೆಯಾಗುತ್ತಿಲ್ಲ : ದೇವರಾಜ ಅರಸರ ಶತಮಾನೋತ್ಸವ ಸ್ಮರಣಾರ್ಥ ಸಿದ್ದರಾಮಯ್ಯರ ಅವಧಿಯಲ್ಲಿ ಬಿಡುಗಡೆಯಾದ 10 ಕೋಟಿ ಯಲ್ಲಿ 7.90ಕೋಟಿ ವೆಚ್ಚದಲ್ಲಿ ಅರಸು ಭವನ ನಿರ್ಮಿಸಿದೆ. ಭವನದ ಉಳಿಕೆ ಕಾಮಗಾರಿ ಹಾಗೂ ಮೂಲಭೂತಸೌಕರ್ಯ ಕಲ್ಪಿಸಲು ಅನುದಾನ ಬಿಡುಗಡೆ ಮಾಡುವಂತೆ ಕಳೆದ ನಾಲ್ಕು ವರ್ಷಗಳಿಂದ ಮುಖ್ಯಮಂತ್ರಿ, ಉಸ್ತುವಾರಿಮಂತ್ರಿ, ಹಿಂದುಳಿ ದವರ್ಗಗಳ ಇಲಾಖೆ ಕಮಿಷನರ್‌, ಸೇರಿದಂತೆ ಎಲ್ಲರಿಗೂ ಹತ್ತಾರು ಮನವಿ, ಪತ್ರಬರೆದಿದ್ದರೂ ಇರುವ ಅನುದಾನ ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿದ್ದಾರೆ.

ಅರಸರ 107ನೇ ಜಯಂತಿ ಆಚರಣೆಗೆ ಮುಂದಾಗಿದ್ದೇವೆ. ಇನ್ನಾದರೂ ಸರಕಾರ ಅನುದಾನ ಬಿಡುಗಡೆ ಮಾಡಿ ಅರಸರಿಗೆ ಗೌರವ ಸಲ್ಲಿಸಲು ಎಮ್ಮೆ ಚರ್ಮದ ಸರಕಾರ ಮುಂದಾಗಲಿ. – ಎಚ್‌.ಪಿ.ಮಂಜುನಾಥ್‌, ಶಾಸಕ

ತಾಂತ್ರಿಕ ಕಾರಣದಿಂದ ಅನುದಾನ ಬಿಡುಗಡೆಗೆ ತೊಂದರೆಯಾಗಿತ್ತು. ಕಲ್ಲಹಳ್ಳಿಯ ಅರಸರ ಮ್ಯೂಸಿಯಂಗೆ ನಿವೇಶನ ಸಮಸ್ಯೆ ಇದ್ದು, ಈ ಅನುದಾನ ದಲ್ಲಿ 2.5 ಕೋಟಿ ಅನುದಾನದ ಪೈಕಿ 1.96 ಕೋಟಿ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. – ಎಚ್‌.ಎಸ್‌.ಬಿಂದ್ಯಾ, ಜಿಲ್ಲಾ ಅಧಿಕಾರಿ, ಬಿಸಿಎಂ ಇಲಾಖೆ

 

-ಸಂಪತ್‌ ಕುಮಾರ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next