ಸಾಗರ: ತಾಲೂಕಿನ ಎಡಜಿಗಳೆಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶ್ರೀಕ್ಷೇತ್ರ ವರದಪುರ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಗೆ ನೀಡುತ್ತಿರುವ ವಿದ್ಯುತ್ ಸೇವೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಶುಕ್ರವಾರ ಶ್ರೀಕ್ಷೇತ್ರ ವರದಪುರದ ಶ್ರೀಧರ ಸೇವಾ ಮಹಾಮಂಡಲದ ವತಿಯಿಂದ ಮೆಸ್ಕಾಂ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ತಾಳಗುಪ್ಪ ಹೋಬಳಿಯ ಇಜೆಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ದಿನದ ೨೪ ಘಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು. ಕಳೆದ ನಾಲ್ಕು ತಿಂಗಳಿನಿಂದ ತೀವ್ರ ವೋಲ್ಟೇಜ್ ಸಮಸ್ಯೆಯಿದ್ದು, ದಿನಕ್ಕೆ ಮೂರ‍್ನಾಲ್ಕು ಮೋಟಾರ್‌ಗಳು ಸುಟ್ಟು ಹೋಗುತ್ತಿದೆ. ಜೊತೆಗೆ ಮನೆಗಳಲ್ಲಿ ಟಿವಿ, ಮಿಕ್ಸಿ ಸೇರಿದಂತೆ ಯಾವುದೇ ಯಂತ್ರಗಳು ಕೆಲಸ ಮಾಡುತ್ತಿಲ್ಲ. ತಾಲೂಕಿನ ಶ್ರೀಕ್ಷೇತ್ರ ವರದಪುರ ವ್ಯಾಪ್ತಿಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಆಶ್ರಮಕ್ಕೆ ಪ್ರತಿದಿನ 2 ಸಾವಿರಕ್ಕೂ ಹೆಚ್ಚಿನ ಭಕ್ತರು ಬರುತ್ತಿದ್ದಾರೆ. ಅವರಿಗೆ ವಸತಿ, ಊಟ, ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ವಿದ್ಯುತ್ ಸಮಸ್ಯೆಯಿಂದ ಅವೆಲ್ಲಕ್ಕೂ ತೊಂದರೆಯಾಗಿದೆ. ಜೊತೆಗೆ ಆಶ್ರಮದಲ್ಲಿ ನೂರಾರು ದೇಸಿ ತಳಿ ಜಾನುವಾರುಗಳಿದ್ದು, ವಿದ್ಯುತ್ ಸಮಸ್ಯೆಯಿಂದ ಅವುಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಸಹ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ವರದಪುರ ಕ್ಷೇತ್ರಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಿ ಹಿಂದೆ ಫೀಡರ್ ಹಾಕಲಾಗಿದೆ. ಆದರೆ ಈಗ ಇನ್ನೊಂದು ಫೀಡರ್ ಅಳವಡಿಸುವುದರಿಂದ ಇಲ್ಲಿಗೆ ಪೂರೈಕೆಯಾಗುವ ವಿದ್ಯುತ್‌ಗೆ ಕೊರತೆ ಆಗುವ ಸಾಧ್ಯತೆ ಇದ್ದು, ಹೊಸ ಫೀಡರ್ ಅಳವಡಿಸಬಾರದು. ವಿದ್ಯುತ್ ಬ್ಯಾಂಕ್ ಒಂದರಿಂದ ನೇರವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ಆವಿನಹಳ್ಳಿಯಲ್ಲಿ ವಿದ್ಯುತ್ ಉಪಕೇಂದ್ರ ಪ್ರಾರಂಭಿಸಲು ತಕ್ಷಣ ಟೆಂಡರ್ ಕರೆಯಬೇಕು ಎಂದು ಒತ್ತಾಯಿಸಿದರು.
ಶ್ರೀಧರ ಸೇವಾ ಮಹಾಮಂಡಲದ ಕಾರ್ಯದರ್ಶಿ ಕಾನ್ಲೆ ಶ್ರೀಧರರಾವ್ ಮಾತನಾಡಿ, ಪ್ರತಿದಿನ ಆಶ್ರಮಕ್ಕೆ 5 ಸಾವಿರದವರೆಗೂ ಭಕ್ತರು ಬರುತ್ತಿದ್ದಾರೆ. ವಿದ್ಯುತ್ ಸಮಸ್ಯೆಯಿಂದ ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸುತ್ತಿಲ್ಲ. 400ಕ್ಕೂ ಹೆಚ್ಚು ಜಾನುವಾರುಗಳಿದ್ದು ಅವುಗಳಿಗೆ ನೀರು ಪೂರೈಕೆ ಮಾಡಲು ವಿದ್ಯುತ್ ಸಮಸ್ಯೆಯಿಂದ ಸಾಧ್ಯವಾಗುತ್ತಿಲ್ಲ. ಮುಂದಿನ 15 ದಿನಗಳೊಳಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು. ಇಲ್ಲವಾದಲ್ಲಿ ಹೋರಾಟ ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಂ.ಡಿ.ರಾಮಚಂದ್ರ, ರಜನೀಶ್ ಹೆಗಡೆ, ಸುಧಾಕರ ಕುಗ್ವೆ, ಸ್ವಾಮಿದತ್ತ ಎಚ್.ಎಸ್., ಮಂಜುನಾಥ್ ಕೆ.ಟಿ., ಅರುಣ್ ಹಕ್ರೆ, ಷಣ್ಮುಖ ಸೂರನಗದ್ದೆ ಇನ್ನಿತರರು ಹಾಜರಿದ್ದರು.