Advertisement

180 ಶಾಲೆಗಳಲ್ಲಿ 524 ಶಿಕ್ಷಕರ ಕೊರತೆ

02:37 PM Jun 18, 2018 | Team Udayavani |

ಸಿರುಗುಪ್ಪ: ತಾಲೂಕಿನ ಹಲವು ಶಾಲೆಗಳಲ್ಲಿ ಮಕ್ಕಳಿಗನುಗುಣವಾಗಿ ಶಿಕ್ಷಕರು ಇಲ್ಲದೆ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳದಿರುವುದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ರಾಜ್ಯ ಸರ್ಕಾರ ಯಾವೊಬ್ಬ ಮಗುವೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮಧ್ಯಾಹ್ನದ ಬಿಸಿಯೂಟ, ಕ್ಷೀರ, ಶೂ, ಸಾಕ್ಸ್‌, ಉಚಿತ ಸಮವಸ್ತ್ರ, ಸೈಕಲ್‌ ವಿತರಣೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹೀಗಾಗಿಯೇ ಸಾವಿರಾರು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳತ್ತ ಮುಖಮಾಡುವಂತಾಗಿದೆ.

ಆದರೆ, ಶಿಕ್ಷಕರ ಕೊರತೆ ಮಾತ್ರ ಹಾಗೆ ಇದೆ. ತಾಲೂಕಿನಲ್ಲಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು ಸೇರಿ ಒಟ್ಟು 180 ಶಾಲೆಗಳಿವೆ. ಪ್ರತಿ ಶಾಲೆಯಲ್ಲೂ ಕನಿಷ್ಠ 100 ರಿಂದ ಗರಿಷ್ಠ 400ರಷ್ಟು ವಿದ್ಯಾರ್ಥಿಗಳಿದ್ದಾರೆ. 180 ಶಾಲೆಗಳ ವಿದ್ಯಾರ್ಥಿಗಳಿಗೆ ಒಟ್ಟು 980 ಶಿಕ್ಷಕರು ಬೇಕು. ಈ ತಾಲೂಕಿನಲ್ಲಿ ಕೇವಲ498 ಶಿಕ್ಷಕರು ಮಾತ್ರ ಕಾರ್ಯ  ನಿರ್ವಹಿಸುತ್ತಿದ್ದು, 524 ಶಿಕ್ಷಕರ ಅಗತ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಇಬ್ಬರು ಶಿಕ್ಷಕರು ನಿರ್ವಹಿಸಬೇಕಾದ ಕೆಲಸವನ್ನು ಒಬ್ಬ ಶಿಕ್ಷಕನೇ ಮಾಡುವಂತಾಗಿದೆ.

ರಾಂಪುರ, ಕೆ.ಸೂಗೂರು, ಬಾಗೇವಾಡಿ ಕ್ಯಾಂಪ್‌, ಹಿರೇಹಾಳು, ತೆಕ್ಕಲಕೋಟೆಯ ಸಿಂಧೋಳು ಕಾಲೋನಿ, ಕಿ.ಪ್ರಾ.ಶಾಲೆ ಹೆರಕಲ್ಲು ಗ್ರಾಮಗಳ ಶಾಲೆಗಳಲ್ಲಿ ಕಾಯಂ ಶಿಕ್ಷಕರಿಲ್ಲದೆ ಇತರೆ ಶಾಲೆಗಳಿಂದ ನಿಯೋಜನೆ ಮೇಲೆ ಶಿಕ್ಷಕರನ್ನು ಕಳುಹಿಸಲಾಗುತ್ತದೆ.

ಈ ಶಿಕ್ಷಕ ಶಾಲೆಗೆ ಬರದಿದ್ದರೆ ಶಾಲೆಗೆ ಬೀಗ, ಮಕ್ಕಳಿಗೆ ರಜೆ ಎನ್ನುವಂತ ಪರಿಸ್ಥಿತಿಯಿದೆ.  ತಾಲೂಕಿನ 21 ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿ ಮಾರ್ಪಟ್ಟಿದ್ದು, ಈ ಶಾಲೆಗಳಲ್ಲಿನ  ವಿದ್ಯಾರ್ಥಿಗಳಿಗೆ ಪಾಠ ಪ್ರವಚನ, ಬಿಸಿಯೂಟ, ದಾಖಲಾತಿ, ವರ್ಗಾವಣೆ ಪ್ರಮಾಣ ಪತ್ರ ವಿತರಣೆ, ಮೇಲಾಧಿಕಾರಿಗಳ ಸಭೆ ಸಮಾರಂಭಗಳಿಗೆ ಇನ್ನು
ಅನೇಕ ಜವಾಬ್ದಾರಿಯ ಕೆಲಸಗಳನ್ನು ಇರುವ ಒಬ್ಬ ಶಿಕ್ಷಕರೇ ನಿರ್ವಹಿಸಬೇಕಿದೆ. ಇಲ್ಲಿನ ಶಿಕ್ಷಕರು ಕ್ಷೇತ್ರ
ಶಿಕ್ಷಣಾಧಿಕಾರಿಗಳ ಕಚೇರಿಗೆ ಬಂದರೆ ಶಾಲೆಯಲ್ಲಿನ ಕೆಲಸಗಳನ್ನು ಯಾರಿಗೆ ವಹಿಸಿರಬೇಕು ಎನ್ನುವುದು
ಅಲ್ಲಿನ ಶಿಕ್ಷಕರಿಗೆ ಯಕ್ಷಪ್ರಶ್ನೆಯಾಗಿದೆ. 

Advertisement

ಕೆಲ ಶಿಕ್ಷಕರು ತಮ್ಮ ಶಾಲೆಯಲ್ಲಿ ಈ ಹಿಂದೆ ಅತಿಥಿ ಶಿಕ್ಷಕರಾಗಿ ಕೆಲಸ ಮಾಡಿದ ಶಿಕ್ಷಕರನ್ನು ಅಥವಾ ಶಾಲೆಯ ಅಕ್ಕ ಪಕ್ಕದ ವಿದ್ಯಾವಂತರನ್ನೋ ಇಲ್ಲದೇ ಹೋದಲ್ಲಿ ಬಿಸಿಯೂಟದ ಅಡುಗೆ ತಯಾರಕರನ್ನು ವಿದ್ಯಾರ್ಥಿಗಳನ್ನು ಕಾಯುವ ಕೆಲಸಕ್ಕೆ ನೇಮಿಸಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಸರ್ಕಾರದ ಸುತ್ತೋಲೆಯೂ ಇಲ್ಲದೆ ಶಾಲೆಗೆ ರಜೆ ನೀಡಿ ಕಚೇರಿಗಳಿಗೆ ಹೋಗಬೇಕಾದ ಪರಿಸ್ಥಿತಿ ಏಕೋಪಾಧ್ಯಾಯ ಶಾಲೆಗಳ ಶಿಕ್ಷಕರಿಗೆ ಬಂದೊದಗಿದೆ.

ತಾಲೂಕಿನಲ್ಲಿರುವ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವಲ್ಲಿ ಅಲ್ಲಿನ ಶಿಕ್ಷಕರ ಅವಶ್ಯಕತೆಗೆ ಅನುಗುಣವಾಗಿ ಒಂದು ವಾರದಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗುವುದು. ಈ ಮೂಲಕ ಶಿಕ್ಷಕರ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುವುದು.

 ಪಿ.ಡಿ. ಭಜಂತ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಸಿರುಗಪ್ಪ

Advertisement

Udayavani is now on Telegram. Click here to join our channel and stay updated with the latest news.

Next