ಚಿಕ್ಕೋಡಿ: ಕಳೆದ ವರ್ಷ ಹಾಗೂ ಪ್ರಸಕ್ತ ಹಂಗಾಮಿನಲ್ಲಿ ಉತ್ತಮ ಮಳೆ ಸುರಿದಿದೆ. ಹೀಗಾಗಿ ರೈತರು ಜಮೀನು ಹದ ಮಾಡಿಕೊಂಡು ಬಿತ್ತನೆಗೆ ಸಜ್ಜಾಗಿದ್ದಾರೆ. ಆದರೆ ಚಿಕ್ಕೋಡಿ ಭಾಗದಲ್ಲಿ ಸೋಯಾಬೀನ್ ಬೀಜದ ತೀವ್ರ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ.
ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಉತ್ತಮ ಮಳೆ ಆಗಬಹುದೆಂದು ರೈತರು ನಿರೀಕ್ಷಿಸಿ ಕೊರೊನಾ ಮಧ್ಯೆಯೂ ಜಮೀನು ಹದಗೊಳಿಸಿ ಬಿತ್ತನೆಗೆ ಸಜ್ಜುಗೊಳಿಸಿದ್ದರು. ನಿಸರ್ಗ ಚೆಂಡಮಾರುತದ ಪರಿಣಾಮವಾಗಿ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಉತ್ತಮ ಮಳೆ ಸುರಿದಿದೆ. ಹೀಗಾಗಿ ರೈತರು ಬಿತ್ತನೆ ಮಾಡಲು ಕೂರಿಗೆ ಸಜ್ಜು ಮಾಡಿ ಬೀಜ ತರಲು ರೈತ ಸಂಪರ್ಕ ಕೇಂದ್ರಕ್ಕೆ ಹೋದರೆ ಬೀಜದ ಕೊರತೆಯಿಂದ ಕಂಗಾಲಾಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಸಮರ್ಪಕ ಮಳೆ ಇಲ್ಲದೆ ಬೆಳೆ ಬರಲಿಲ್ಲ, ಹಿಂದಿನ ವರ್ಷ ಅತಿ ಮಳೆಯಾಗಿ ಬೆಳೆ ಬರಲಿಲ್ಲ. ಈಗ ಆರಂಭದಲ್ಲಿ ಉತ್ತಮ ಮಳೆ ಸುರಿದಿದೆ. ಆದರೆ ಬಿತ್ತನೆ ಮಾಡಲು ಬೀಜದ ಕೊರತೆ ರೈತರ ನಿದ್ದೆಗೆಡಿಸಿದೆ.
ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕುಗಳಲ್ಲಿ ಮುಂಗಾರು ಹಂಗಾಮಿನಲ್ಲಿ 87,195 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಇದರಲ್ಲಿ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಕಬ್ಬು ನಾಟಿ ಮಾಡಿದ್ದಾರೆ. ಉಳಿದ ಪ್ರದೇಶದಲ್ಲಿ ಸೋಯಾ, ಉದ್ದು, ಶೇಂಗಾ, ಮೆಕ್ಕೆ ಜೋಳ, ತೊಗರಿ ಬಿತ್ತನೆ ಮಾಡಲಿದ್ದಾರೆ. ಪ್ರಸಕ್ತ ಹಂಗಾಮಿನಲ್ಲಿ 3732 ಕ್ವಿಂಟಲ್ ಸೋಯಾ, 630 ಕೆಜಿ ಹೆಸರು, 3.50 ಕ್ವಿಂಟಲ್ ಮೆಕ್ಕೆಜೋಳ, 30 ಕೆಜಿ ತೊಗರಿ, 8 ಕ್ವಿಂಟಲ್ ಉದ್ದು ಈಗಾಗಲೇ ರೈತ ಸಂಪರ್ಕ ಕೇಂದ್ರಗಳ ಮೂಲಕ ಮಾರಾಟ ಮಾಡಲಾಗಿದೆ. ಆದರೆ ಸೋಯಾ ಬೀಜಕ್ಕೆ ಬಾರಿ ಬೇಡಿಕೆ ಇರುವುದರಿಂದ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನಲ್ಲಿ ಅಂದಾಜು 25 ಟನ್ ಬೀಜದ ಕೊರತೆ ಎದುರಾಗಿದೆ.
ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಕೃಷಿ ಅಧಿಕಾರಿಗಳು ಇತ್ತ ಗಮನ ಹರಿಸಿ ಸೋಯಾ ಬೀಜದ ಕೊರತೆಯನ್ನು ನೀಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಸೋಯಾಬೀನ್ ಬೀಜಕ್ಕೆ ಭಾರಿ ಬೇಡಿಕೆ: ಪ್ರಸಕ್ತ ವರ್ಷದಲ್ಲಿ ಮೆಕ್ಕೆಜೋಳಕ್ಕೆ ಸಮರ್ಪಕ ದರ ಸಿಗದೇ ಇರುವ ಕಾರಣ ರೈತರು ಸೋಯಾಬೀನ್ ಬಿತ್ತನೆ ಮಾಡಲು ನಿರ್ಧರಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಸೋಯಾಬಿನ್ ಉತ್ತಮ ದರ ಕಾಯ್ದುಕೊಂಡಿರುವುದೂ ಮತ್ತೂಂದು ಕಾರಣ. ಹೀಗಾಗಿ ಪ್ರಸಕ್ತ ವರ್ಷದಲ್ಲಿ ಸೋಯಾಬೀನ್ ಬೀಜದ ಕೊರತೆ ಎದುರಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಕೋವಿಡ್ ಮಧ್ಯೆಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಭೂಮಿಯನ್ನು ಹದಗೊಳಿಸಲಾಗಿತ್ತು. ಈಗ ಬೀಜ ತರಲು ನಾಗರ ಮುನ್ನೊಳ್ಳಿ ರೈತ ಸಂಪರ್ಕ ಕೇಂದ್ರಕ್ಕೆ ಹೋದರೆ ಸೋಯಾಬೀನ್ ಬೀಜದ ಕೊರತೆ ಇದ್ದು ಬೀಜ ಬಂದ ನಂತರ ರೈತರಿಗೆ ತಿಳಿಸಲಾಗುತ್ತದೆಂದು ಅಧಿಕಾರಿಗಳು ಹೇಳಿರುವುದು ಬಹಳಷ್ಟು ನೋವು ತರಿಸುತ್ತಿದೆ.
-ಈಶ್ವರ ಡಬ್ಬನ್ನವರ, ರೈತ, ಬೆಳಕೂಡ
ಪ್ರಸಕ್ತ ವರ್ಷ ಚಿಕ್ಕೋಡಿ ಹಾಗೂ ನಿಪ್ಪಾಣಿ ಭಾಗದಲ್ಲಿ ಸೋಯಾಬೀನ್ ಬೇಡಿಕೆ ಹೆಚ್ಚಾಗಿರುವ ಕಾರಣ ಕೊರತೆ ಎದುರಾಗಿದೆ. ಬೇರೆ ಕಡೆಯಿಂದ ಬೀàಜ ತರಿಸಿ ರೈತರಿಗೆ ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ.
-ಮಂಜುನಾಥ ಜನಮಟ್ಟಿ ಸಹಾಯಕ ಕೃಷಿ ನಿರ್ದೇಶಕರು, ಚಿಕ್ಕೋಡಿ
-ಮಹಾದೇವ ಪೂಜೇರಿ