ಹನೂರು: ರಾಜ್ಯದ ವಿವಿಧೆಡೆ ಇನ್ನೂ 10 ಕೋವಿಡ್ ತಪಾಸಣಾ ಪ್ರಯೋಗಾಲಯಗಳನ್ನು ತೆರೆಯಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ತಿಳಿಸಿದರು. ಮಲೆ ಮಹದೇಶ್ವರ ಬೆಟ್ಟದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಸಚಿವರು, ಚಾಮರಾಜನಗರ ಕೊರೊನಾ ಮುಕ್ತ ಜಿಲ್ಲೆಯಾಗಿರುವುದು ಇತರೆ ಜಿಲ್ಲೆಗಳಿಗೂ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿಯೂ ಕೋವಿಡ್ ಪ್ರಕರಣ ಜಿಲ್ಲೆಯೊಳಗೆ ಪ್ರವೇಶಿಸದಂತೆ ಕಟ್ಟುನಿಟ್ಟಿನ ಕ್ರಮಗಳ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಅಕ್ಕಿ ವಿತರಣೆ: ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರಿಂದ ಕಾಣಿಕೆ ಬಂದಿರುವ ಅಕ್ಕಿಯನ್ನು ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಡವರಿಗೆ ಹಂಚಲು ಶಾಸಕ ನರೇಂದ್ರ ಅವರ ಆಲೋಚನೆ ಉತ್ತಮವಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಪ್ರಶಂಸಿಸಿದರು. ಈ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟ, ಗೋಪಿನಾಥಂ, ಪೊನ್ನಾಚಿ ಮತ್ತು ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳ 6,500 ಕುಟುಂಬಗಳಿಗೆ ತಲಾ 5 ಕೆ.ಜಿ. ಅಕ್ಕಿ ಹಾಗೂ ಪ್ರಾಧಿಕಾರದ ವತಿಯಿಂದ 10 ಸಾವಿರ ಮಾಸ್ಕ್ ವಿತರಿಸಲಾಗುತ್ತಿದೆ ಎಂದು ಹೇಳಿದರು.
ನರೇಗಾದಡಿ ಉದ್ಯೋಗ: ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತಲ ಗ್ರಾಮಸ್ಥರಿಗೆ ನರೇಗಾ ಯೋಜನೆಯಡಿ ಆನೆಕಂದಕ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿರುವುದು ಉತ್ತಮ ಕೆಲಸ. ಉದ್ಯೋಗಾಕಾಂಕ್ಷಿಗಳು ಆಯಾ ಗ್ರಾಪಂ ವ್ಯಾಪ್ತಿಯ ಪಿಡಿಒಗಳನ್ನು ಸಂಪರ್ಕಿಸುವಂತೆ ತಿಳಿಸಿದರು. ಗಡಿಯಂಚಿನ ಪುದೂರು, ಪಾಲಾರ್ ಗಿರಿಜನಹಾಡಿ, ರಾಮೇಗೌಡನದೊಡ್ಡಿ, ಮಹದೇಶ್ವರಬೆಟ್ಟದ ತಂಬಡಗೇರಿ, ಎ.ಜೆ.ಕಾಲೋನಿ, ಬಿದರಹಳ್ಳಿಯ ಪ್ರತಿ ಕುಟುಂಬಕ್ಕೆ ತಲಾ 5 ಕೆ.ಜಿ ಅಕ್ಕಿ ವಿತರಿಸಿದರು. ಶಾಸಕರಾದ ನರೇಂದ್ರ, ಮಹೇಶ್, ಜಿಪಂ ಸದಸ್ಯರಾದ ಬಸವರಾಜು, ಮಂಜುಳಾ, ಸಿಇಒ ನಾರಾಯಣರಾವ್, ಎಎಸ್ಪಿ ಅನಿತಾ, ಎಸಿ ನಿಖೀತಾ, ತಹಶೀಲ್ದಾರ್ ಬಸವರಾಜು ಇನ್ನಿತರರಿದ್ದರು.