Advertisement
ಕೊರೊನಾ ಹರಡುವಿಕೆಯಿಂದಾಗಿ ಸದ್ಯ ಎಲ್ಲ ತರಗತಿಗಳು ಆನ್‌ಲೈನ್ ಮೂಲಕವೇ ನಡೆಯುತ್ತಿವೆ. ತರಗತಿಗಳು ಆರಂಭವಾಗುವ ಬಗ್ಗೆ ಇನ್ನೂ ಸರಕಾರದ ಮಟ್ಟದಲ್ಲಿ ಯಾವುದೇ ಸ್ಪಷ್ಟ ನಿರ್ಧಾರಗಳು ಆಗಿಲ್ಲ. ಆದರೆ ಆನ್‌ಲೈನ್ ಶಿಕ್ಷಣದ ವೇಳೆ ಪ್ರಯೋಗಾಲಯದ ಕಲಿಕೆಯನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದೇ ಅಧ್ಯಾಪಕರಿಗೆ ಸವಾಲಾಗಿತ್ತು. ಆದರೆ ಸದ್ಯ ಈ ಸವಾಲಿಗೂ ಉತ್ತರ ಕಂಡುಕೊಂಡಿರುವ ಮಂಗಳೂರು ವಿ.ವಿ. ವೀಡಿಯೋ ಮೂಲಕ ವಿದ್ಯಾರ್ಥಿಗಳಿಗೆ ಪ್ರಯೋಗಾಲಯದ ಕಲಿಕೆಯನ್ನು ಬೆರಳ ತುದಿಯಲ್ಲೇ ಕಲ್ಪಿಸಿ ಕೊಡಲು ಮುಂದಾಗಿದೆ.
ಕ್ಲಿಷ್ಟಕರವಾದ ಪ್ರಾಯೋಗಿಕ ಅಧ್ಯಯನಗಳ ಬಗ್ಗೆ ವಿ.ವಿ. ಮತ್ತು ಆಯಾಯ ಕಾಲೇಜು ಪ್ರಾಧ್ಯಾಪಕರೇ ಡೆಮೋ ಮಾಡಿ ಆರಂಭದಿಂದ ಅಂತ್ಯದವರೆಗೆ ವೀಡಿಯೋ ಚಿತ್ರೀಕರಿಸಿ ಅದನ್ನು ವಿಶ್ವವಿದ್ಯಾನಿಲಯ ಮತ್ತು ವಿವಿಧ ಕಾಲೇಜು ವೆಬ್‌ಸೈಟ್‌ಗಳಲ್ಲಿ ಅಪ್ಲೋಡ್ ಮಾಡಲಿದ್ದಾರೆ. ಇದನ್ನು ವಿದ್ಯಾರ್ಥಿಗಳು ವೆಬ್‌ಸೈಟ್‌ಗೆ ತೆರಳಿ ಅಲ್ಲಿಯೇ ಅಥವಾ ಡೌನ್‌ಲೋಡ್ ಮಾಡಿಕೊಂಡು ಪ್ರಾಯೋಗಿಕ ಕಲಿಕೆಯನ್ನು ಸಲೀಸಾಗಿ ತಿಳಿದುಕೊಳ್ಳಬಹುದು. ಮಂಗಳೂರು ವಿ.ವಿ.ಯು ಈಗಾಗಲೇ ಈ ಪ್ರಕ್ರಿಯೆಯನ್ನು ಜಾರಿಗೊಳಿಸುವ ತಯಾರಿಯಲ್ಲಿದ್ದು, ವಿ.ವಿ. ಸಂಯೋಜಿತ ಎಲ್ಲ 210 ಕಾಲೇಜುಗಳಿಗೂ ಸುತ್ತೋಲೆ ಕಳುಹಿಸಲಿದೆ. ಅಕ್ಟೋಬರ್ ಅಂತ್ಯಕ್ಕೆ ಪ್ರಾಯೋಗಿಕ ಕಲಿಕೆ ವೀಡಿಯೋ ಮುಖಾಂತರ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. ಈ ವೀಡಿಯೋ ಮುಖಾಂತರ ಪ್ರಯೋಗಾಲಯದಲ್ಲಿ ಕಲಿತಷ್ಟು ಸಾಧ್ಯವಾಗದಿದ್ದರೂ ವಿದ್ಯಾರ್ಥಿಗಳು ಸವಾಲುಗಳನ್ನು ಬಿಡಿಸುವ ಬಗೆಯನ್ನು ಕಲಿತುಕೊಳ್ಳಲು ಸಾಧ್ಯವಾಗಬಲ್ಲದು ಎನ್ನುತ್ತಾರೆ ಪ್ರಾಧ್ಯಾಪಕರು. ಉಪನ್ಯಾಸಗಳೂ ಅಪ್ಲೋಡ್
ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪಾಠಗಳನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ನಿವೃತ್ತ ಪ್ರಾಧ್ಯಾಪಕರು, ಸಂದರ್ಶಕ ಪ್ರಾಧ್ಯಾಪಕರು, ಅನುಭವಿ ಹಳೆ ವಿದ್ಯಾರ್ಥಿಗಳನ್ನು ಕರೆಸಿ ವೀಡಿಯೋ ಚಿತ್ರೀಕರಣ ಮಾಡಿ ಇದನ್ನೂ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡುವ ಬಗ್ಗೆ ಕೆಲಸ ಕಾರ್ಯಗಳು ನಡೆಯುತ್ತಿವೆ. ವಿ.ವಿ.ಯ ಸ್ಟುಡಿಯೋಕ್ಕೆ ಅತಿಥಿಗಳನ್ನು ಕರೆಸಿ ರೆಕಾರ್ಡ್ ಮಾಡಲಾಗುತ್ತದೆ. ನವೆಂಬರ್ ಅಂತ್ಯದ ವೇಳೆಗೆ ಈ ಚಿಂತನೆಯೂ ಕಾರ್ಯಗತಗೊಳ್ಳಲಿದೆ ಎಂದು ವಿ.ವಿ. ಕುಲಪತಿ ಡಾ| ಪಿ.ಎಸ್. ಯಡಪಡಿತ್ತಾಯ ಅವರು ತಿಳಿಸಿದ್ದಾರೆ.
Related Articles
ಆನ್‌ಲೈನ್ ಕಲಿಕೆ ವೇಳೆ ವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆಯನ್ನೂ ಕಲಿಸಬೇಕೆಂಬ ನಿಟ್ಟಿನಲ್ಲಿ ವೀಡಿಯೋ ಡೆಮೋ ಮಾಡಿ ಅದನ್ನು ವಿ.ವಿ. ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಈ ಮಾಸಾಂತ್ಯದಿಂದಲೇ ವಿದ್ಯಾರ್ಥಿಗಳು ವಿ.ವಿ. ವೆಬ್‌ಸೈಟ್‌ನಲ್ಲೇ ಡೆಮೋಗಳನ್ನು ಪಡೆದುಕೊಳ್ಳಬಹುದು. ವಿ.ವಿ. ಸಂಯೋಜಿತ ಎಲ್ಲ 210 ಕಾಲೇಜುಗಳಿಗೂ ಇದನ್ನು ಅನ್ವಯಿಸಿಕೊಳ್ಳಲು ಸೂಚಿಸಿ ಸುತ್ತೋಲೆ ಕಳುಹಿಸಲಾಗುವುದು.
-ಡಾ| ಪಿ.ಎಸ್. ಯಡಪಡಿತ್ತಾಯ, ಕುಲಪತಿ, ಮಂಗಳೂರು ವಿಶ್ವ ವಿದ್ಯಾನಿಲಯ
Advertisement