ಗಯಾನ: 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅತ್ಯಂತ ಚರ್ಚಿತ ವಿಚಾರವೆಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ ವಿರಾಟ್ ಕೊಹ್ಲಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮೆಂಟರ್ ಗೌತಮ್ ಗಂಭೀರ್ ನಡುವಿನ ಮಾತಿನ ಚಕಮಕಿ. ಪಂದ್ಯದ ಬಳಿಕ ನಡೆದ ಈ ಜಗಳ ದೊಡ್ಡ ಸುದ್ದಿಯಾಗಿತ್ತು.
ಪಂದ್ಯದುದ್ದಕ್ಕೂ, ಲಕ್ನೋ ಬ್ಯಾಟರ್ ಗಳು ಔಟಾದಾಗಲೆಲ್ಲಾ ಕೊಹ್ಲಿ ಸಾಕಷ್ಟು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಪಂದ್ಯ ಮುಗಿದ ನಂತರ, ಕೊಹ್ಲಿ ಮತ್ತು ಗಂಭೀರ್ ಕೈಕುಲುಕಿದರು. ಆಗ ಎಲ್ಲವೂ ಸಂಪೂರ್ಣವಾಗಿ ಸಾಮಾನ್ಯವಾಗಿತ್ತು. ನಂತರ, ಎಲ್ ಎಸ್ ಜಿ ಓಪನರ್ ಕೈಲ್ ಮೇಯರ್ಸ್ ಕೊಹ್ಲಿ ಬಳಿಗೆ ತೆರಳಿದರು.
ಈ ವೇಳೆ ಮೇಯರ್ಸ್ ಬಳಿ ಬಂದ ಗಂಭೀರ್, ಅವರನ್ನು ಕೊಹ್ಲಿಯಿಂದ ದೂರ ಕರೆದುಕೊಂಡು ಹೋದರು. ಬಳಿಕ ಕೊಹ್ಲಿ ಮತ್ತು ಗಂಭೀರ್ ಮಾತಿನ ಚಕಮಕಿಯಲ್ಲಿ ತೊಡಗಿದರು. ಬಳಿಕ ಕೆಎಲ್ ರಾಹುಲ್ ಸೇರಿ ಇತರ ಆಟಗಾರರು ಅವರಿಬ್ಬರನ್ನೂ ದೂರ ದೂರ ಮಾಡಿ ಸಮಾಧಾನ ಮಾಡಿದರು.
ಇದೀಗ ಭಾರತ ಮತ್ತು ವೆಸ್ಟ್ ಇಂಡೀಸ್ ಸರಣಿಯ ನಡುವೆ ವಿಂಡೀಸ್ ಆಟಗಾರ ಕೈಲ್ ಮೇಯರ್ಸ್ ಈ ಬಗ್ಗೆ ಮಾತನಾಡಿದ್ದಾರೆ. ಫ್ಯಾನ್ ಕೋಡ್ ಸಂದರ್ಶನದಲ್ಲಿ “ನಿಮ್ಮ ಮತ್ತು ಕೊಹ್ಲಿ ನಡುವೆ ಐಪಿಎಲ್ ವೇಳೆ ಜಗಳವಾಗಿತ್ತಲ್ಲ. ಅವರ ಅಗ್ರೆಶನ್ ಬಗ್ಗೆ ನೀವು ಏನು ಹೇಳುತ್ತೀರಿ?” ಎಂಬ ಪ್ರಶ್ನೆಗೆ ಉತ್ತರಿಸಿದ ಮೇಯರ್ಸ್, “ಅದು ಅದ್ಭುತ. ಆಟದಲ್ಲಿ ಗೆಲುವು ಕಾಣುಲು ಕೆಲವೊಮ್ಮೆ ಎದುರಾಳಿಯ ಮೇಲೆರಗುವ ಸಂಧರ್ಭ ಸೃಷ್ಟಿಸಬೇಕಾಗುತ್ತದೆ, ಆಕ್ರಮಣಕಾರಿಯಾಗಿರುವುದು ಯಾವಾಗಲೂ ಒಳ್ಳೆಯದು, ಇದು ಧೈರ್ಯ ಮತ್ತು ನಿಮ್ಮ ತಂಡವನ್ನು ಗೆಲ್ಲಿಸುವ ಇಚ್ಛೆಯನ್ನು ತೋರಿಸುತ್ತದೆ” ಎಂದರು.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ರಲ್ಲಿ ಯಾರ ವಿಕೆಟ್ ಪಡೆಯಲು ನೀವು ಬಯಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ, “ ಕೊಹ್ಲಿ, ವಿಶ್ವದ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ ವಿಕೆಟ್ ಪಡೆಯಲು ಯಾವುದೇ ಬೌಲರ್ ಬಯಸುತ್ತಾನೆ” ಎಂದರು.