Advertisement

ಗ್ರಾ.ಪಂ. ಆಧಾರ್‌ ತಿದ್ದುಪಡಿ ಬಂದ್‌; ಆಹಾರ ಇಲಾಖೆ ಇ-ಕೆವೈಸಿಯೂ ಸ್ಥಗಿತ

09:19 AM Jun 21, 2019 | keerthan |

ಮಂಗಳೂರು: ಸಾರ್ವಜನಿಕರ ಕೈಗೆಟಕುವಂತೆ ಗ್ರಾಮ ಪಂಚಾಯತ್‌ಗಳಲ್ಲಿ ನಡೆಯುತ್ತಿದ್ದ ಆಧಾರ್‌ ತಿದ್ದುಪಡಿ ಮತ್ತು ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ನೋಂದಣಿ-ಎರಡೂ ಈಗ ತಾಂತ್ರಿಕ ಕಾರಣಗಳಿಂದ ಸ್ಥಗಿತವಾಗಿವೆ. ಮಹತ್ವದ ಯೋಜನೆಗಳನ್ನು ಆರಂಭಿ ಸುವ ಮುನ್ನ ಸೂಕ್ತ ಪೂರ್ವ ಸಿದ್ಧತೆ ಮಾಡಿಕೊಳ್ಳದೆ ಇರುವುದೇ ಕಾರಣ.

Advertisement

ಗ್ರಾ.ಪಂ.ಗಳಲ್ಲಿ ಆಧಾರ್‌ ತಿದ್ದು ಪಡಿಗೆ ಕೆಲವೇ ತಿಂಗಳಲ್ಲಿ ತಾಂತ್ರಿಕ ನೆಪದಿಂದ ಗ್ರಹಣ ಹಿಡಿದಿತ್ತು. ಈಗ ನ್ಯಾಯಬೆಲೆ ಅಂಗಡಿಗಳಲ್ಲಿ ನಡೆಯು ತ್ತಿದ್ದ ಇ-ಕೆವೈಸಿ ನೋಂದಣಿಯೂ 20 ದಿನಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಆಧಾರ ತಪ್ಪಿಸಿದ “ಆಧಾರ್‌’ ತಿದ್ದುಪಡಿ! ಆಧಾರ್‌ ತಿದ್ದುಪಡಿಯನ್ನು ಜನಸ್ನೇಹಿ ಯಾಗಿಸುವ ಉದ್ದೇಶದಿಂದ ಗ್ರಾ.ಪಂ.ಗಳಲ್ಲಿ ತಿದ್ದುಪಡಿ ಕೇಂದ್ರಗಳನ್ನು ಸೆ. 5ರಂದು ಆರಂಭಿಸಲಾಗಿತ್ತು. ದಿನ ಕಳೆದಂತೆ ಸರ್ವರ್‌ ಸಮಸ್ಯೆ ನೆಪದಲ್ಲಿ ಒಂದೊಂದೇ ಗ್ರಾ.ಪಂ.ಗಳಲ್ಲಿ ಸ್ಥಗಿತಗೊಂಡು ತಿಂಗಳಿಂದ ನಿಂತೇ ಹೋಗಿದೆ.

ಇ-ಕೆವೈಸಿ ಬಂದ್‌
ಆಹಾರ ಧಾನ್ಯ ಪಡೆ ಯುವ ಪಡಿತರ ಚೀಟಿ ದಾರರು ನ್ಯಾಯಬೆಲೆ ಅಂಗಡಿಗೆ ತೆರಳಿ ಚೀಟಿ ಯಲ್ಲಿರುವ ಎಲ್ಲ ಸದಸ್ಯರ ಇ-ಕೆವೈಸಿಯನ್ನು ಅಪ್‌ಲೋಡ್‌ ಮಾಡಬೇಕೆಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸೂಚನೆ ನೀಡಿತ್ತು. ಜೂ.1ರಿಂದ ಜು. 31ರ ವರೆಗೆ ಮಾತ್ರ ಇದಕ್ಕೆ ಅವಕಾಶ ನೀಡಿ, ನ್ಯಾಯಬೆಲೆ ಅಂಗಡಿಯಲ್ಲಿ ಇ- ಕೆವೈಸಿ ಮಾಡಲಾಗುತ್ತಿತ್ತು. ಅಲ್ಲೂ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಜೂ. 20ರಂದು ರಾಜ್ಯದ ಆಹಾರ ಇಲಾಖೆ ಎಲ್ಲ ಜಿಲ್ಲೆಗಳ ಉಪನಿರ್ದೇಶಕರಿಗೆ ಪತ್ರ ಬರೆದು ಕಾರಣ ನೀಡದೆ ಇ-ಕೆವೈಸಿ ಯನ್ನು ಜು. 15ರ ವರೆಗೆ ತಾತ್ಕಾಲಿಕ ವಾಗಿ ನಿಲ್ಲಿಸುವಂತೆ ಸೂಚಿಸಿದೆ.

20 ದಿನಗಳ ಓಡಾಟ ತಾತ್ಕಾಲಿಕ ಮುಕ್ತಾಯ
ಈ ಹಿಂದೆ ಪಡಿತರ ಚೀಟಿದಾರರ ಆಧಾರ್‌ ಕಾರ್ಡ್‌ ಮಾತ್ರ ಲಿಂಕ್‌ ಆಗಿತ್ತು. ಆದರೆ ಚೀಟಿಯಲ್ಲಿರುವವರ ಬೆರಳಚ್ಚು ಗುರುತು ಆಗಿರಲಿಲ್ಲ. ಇದರಿಂದ ಚೀಟಿಯಲ್ಲಿ ಹೆಸರಿದ್ದರೂ ಊರಿನಿಂದ ಹೊರಗೆ ಇದ್ದವರ ಪಡಿತರ ನೀಡಲಾಗುತ್ತಿತ್ತು. ಪರಿಣಾಮವಾಗಿ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತಿತ್ತು. ಇದನ್ನು ತಪ್ಪಿಸಲು ಇ-ಕೆವೈಸಿ ಪರಿಚಯಿಸಲಾಗಿತ್ತು.

ಸ್ಥಗಿತಕ್ಕೆ ಕಾರಣವೇನು?
ತಾಂತ್ರಿಕ ಕಾರಣದಿಂದ ಆಧಾರ್‌ ತಿದ್ದುಪಡಿಯನ್ನು ಗ್ರಾ.ಪಂ.ನಿಂದ ಕೈಬಿಡಲಾಗಿದೆ ಎಂಬುದು ಸದ್ಯ ಅಧಿಕಾರಿಗಳ ಮಾತು. ಆದರೆ ಕೆಲವು ಗ್ರಾ.ಪಂ.ಗಳಲ್ಲಿ ಆಧಾರ್‌ ತಿದ್ದುಪಡಿ ಅವ್ಯವಹಾರ ನಡೆದಿದೆ ಎಂಬ ಆರೋಪ ಇಲಾಖೆಯ ಗಮನಕ್ಕೆ ಬಂದು ಇದನ್ನು ಕೈ ಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ನ್ಯಾಯಬೆಲೆ ಅಂಗಡಿಗಳ ಮೂಲಕ ಇ-ಕೆವೈಸಿಗೆ ಬಹುತೇಕ ಕಡೆ ಸರ್ವರ್‌ ಸಮಸ್ಯೆ ದೊಡ್ಡ ಮಟ್ಟದಲ್ಲಿ ಕಾಡಿತ್ತು. ಸರ್ವರ್‌ ಸಮಸ್ಯೆಯಿಂದ ನಿತ್ಯ ನಾಗರಿಕರು ನ್ಯಾಯಬೆಲೆ ಅಂಗಡಿಗೆ ಬಂದು ಕಾಯುವ ಸ್ಥಿತಿ ಇತ್ತು. ಜತೆಗೆ ಹೊಸ ಪಡಿತರ ಚೀಟಿಗಳ ವಿತರಣೆ ಇಲಾಖೆಗೆ ದೊಡ್ಡ ತಲೆ ನೋವಾಗಿತ್ತು. ಈ ಕಾರಣದಿಂದ ಇ ಕೆವೈಸಿಯನ್ನೇ ಸರಕಾರ ತಾತ್ಕಾಲಿಕವಾಗಿ ಸ್ಥಗಿತ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ತಾಲೂಕು ಕಚೇರಿಯಲ್ಲಿ ಆಧಾರ್‌ ತಿದ್ದುಪಡಿ?
ಸದ್ಯದ ಮಾಹಿತಿ ಪ್ರಕಾರ ಎಲ್ಲ ಜಿಲ್ಲೆಗಳಲ್ಲಿ ಪ್ರತ್ಯೇಕ ಕಿಟ್‌ ವ್ಯವಸ್ಥೆ ಜಾರಿಗೆ ತರಲು ಸಂಬಂಧಿ ಇಲಾಖೆ ಚಿಂತನೆ ನಡೆಸಿದೆ. ಇದರಂತೆ ಪ್ರತೀ ಜಿಲ್ಲೆಗೆ ಪ್ರತ್ಯೇಕವಾಗಿ ಮೂರು ಕಿಟ್‌ ನೀಡಲು ಉದ್ದೇಶಿಸಲಾಗಿದೆ. ಇವು ಗ್ರಾಮೀಣ ತಾಲೂಕು ಕಚೇರಿಗಳಲ್ಲಿ ಕಾರ್ಯನಿರ್ವಹಿಸಲಿವೆ. ಕೆಲವೇ ದಿನ ಗಳಲ್ಲಿ ಈ ಬಗ್ಗೆ ಸರಕಾರ ಮತ್ತು ಆಧಾರ್‌ ಸಂಬಂಧಿ ಇಲಾಖೆ ಗಳು ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಪರ್ಯಾಯ ವ್ಯವಸ್ಥೆಯ ನಿರೀಕ್ಷೆ
ಪ್ರತೀ ಗ್ರಾ.ಪಂ.ನಲ್ಲಿ ಆಧಾರ್‌ ತಿದ್ದುಪಡಿ ಒಂದು ತಿಂಗಳಿನಿಂದ ಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಸಮಸ್ಯೆ ಆಗುತ್ತಿರುವ ಬಗ್ಗೆ ಮತ್ತು ಪರ್ಯಾಯ ವ್ಯವಸ್ಥೆ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಮಾಡಲಾಗಿದೆ. ಕೇಂದ್ರ ಸರಕಾರದ ಜತೆಗೆ ಮಾತನಾಡಿ ಈ ಬಗ್ಗೆ ಪರ್ಯಾಯ ಕ್ರಮಗಳ ಭರವಸೆ ನೀಡಿದ್ದಾರೆ.
ಡಾ|ಆರ್‌. ಸೆಲ್ವಮಣಿ, ದ.ಕ. ಜಿ. ಪಂ. ಸಿಇಒ

ತಾತ್ಕಾಲಿಕ ಸ್ಥಗಿತ
ಪಡಿತರ ಚೀಟಿದಾರ ಕುಟುಂಬ ಸದಸ್ಯರ ಇ- ಕೆವೈಸಿಯನ್ನು ನ್ಯಾಯಬೆಲೆ ಅಂಗಡಿಯ ಹಂತದಲ್ಲಿ ಆನ್‌ಲೈನ್‌ ಮೂಲಕ ಜೂ.1ರಿಂದ ಸಂಗ್ರಹಿಸಲಾಗುತ್ತಿತ್ತು. ಆದರೆ ಸರಕಾರದ ನಿರ್ದೇಶನದನ್ವಯ ಜೂ.20ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸುನಂದಾ, ವ್ಯವಸ್ಥಾಪಕಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ದ.ಕ.

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next